ಮೈಸೂರು

ಕುಡಿದು ದಾಂಧಲೆ ಮಾಡುತ್ತಿದ್ದ ವನನ್ನು ಪ್ರಶ್ನಿಸಿದ್ದಕ್ಕೆ ದೊಣ್ಣೆಯಿಂದ ಹಲ್ಲೆ

ಮೈಸೂರು,ಡಿ.17:- ಕುಡಿದು ದಾಂಧಲೆ ಮಾಡುತ್ತಿದ್ದ ವ್ಯಕ್ತಿಯನ್ನು ಪ್ರಶ್ನಿಸಿದ ಕಾರಣಕ್ಕೆ ಪ್ರಶ್ನಿಸಿದಾತನ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ ಘಟನೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆವರಣದಲ್ಲಿ ನಿನ್ನೆ ರಾತ್ರಿ ನಡೆದಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆವರಣದಲ್ಲೇ ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಮುಡಾದ ಗುತ್ತಿಗೆ ನೌಕರ, ಸೆಕ್ಯೂರಿಟಿ ಗಾರ್ಡ್ ಕೃಷ್ಣೇಗೌಡ ಎಂಬಾತ ತೀವ್ರವಾಗಿ ಗಾಯಗೊಂಡಿದ್ದಾರೆ. ಹಲ್ಲೆ ನಡೆಸಿದಾತ ಮುಡಾ ನೌಕರ ನಾಗಪ್ಪ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಕಾರು ಚಾಲಕ ನಾಗಪ್ಪ ಹಲ್ಲೆ ನಡೆಸಿದ ಆರೋಪಿಯಾಗಿದ್ದು, ಈತ ಕುಡಿದು ಪ್ರಾಧಿಕಾರದ ಆವರಣದಲ್ಲಿ ದಾಂಧಲೆ ನಡೆಸುತ್ತಿದ್ದ ಎನ್ನಲಾಗಿದೆ. ಈ ವೇಳೆ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ಕೃಷ್ಣೇಗೌಡ, ಚಾಲಕ ನಾಗಪ್ಪನನ್ನು ಪ್ರಶ್ನಿಸಿ ಸ್ಥಳದಿಂದ ತೆರಳುವಂತೆ ಸೂಚಿಸಿದ್ದರು. ಇದರಿಂದ ಕುಪಿತಗೊಂಡ ನಾಗಪ್ಪ, ದೊಣ್ಣೆಯಿಂದ ಗಾರ್ಡ್ ಕೃಷ್ಣೇಗೌಡರ ಮೇಲೆ ಹಲ್ಲೆ ನಡೆಸಿದ್ದಾನೆ. ಇದನ್ನು ಕಂಡು ಸ್ಥಳದಲ್ಲಿದ್ದ ಮತ್ತೋರ್ವ ಸೆಕ್ಯೂರಿಟಿ ಗಾರ್ಡ್ , ಸಹಾಯಕ್ಕೆ ಧಾವಿಸಿದಾಗ ಅತನ ಮೇಲೂ ಆರೋಪಿ ನಾಗಪ್ಪ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಘಟನೆ ಬಳಿಕ ಆರೋಪಿ ನಾಗಪ್ಪನ ವಿರುದ್ಧ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.  ಮುಡಾ ಅಧ್ಯಕ್ಷರ ಕಾರು ಚಾಲಕ ನಾಗಪ್ಪ ಈ ರೀತಿ ಕುಡಿದು ಗಲಾಟೆ ನಡೆಸುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಅನೇಕ ಬಾರಿ ಇಂಥ ಘಟನೆಗಳು ನಡೆದಿದ್ದು, ಹಿರಿಯ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಹೆಸರು ಹೇಳಲು ಇಚ್ಛಿಸದ ಸೆಕ್ಯೂರಿಟಿ ಗಾರ್ಡ್ ಒಬ್ಬರು ಅಳಲು ತೋಡಿಕೊಂಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: