
ಕರ್ನಾಟಕಪ್ರಮುಖ ಸುದ್ದಿ
ಮಾದಕವಸ್ತು ದಂಧೆ: ನಟಿ ಅಶ್ವಥಿ ಬಾಬು ಬಂಧನ, ಪ್ರಕರಣಕ್ಕೆ ಬೆಂಗಳೂರಿನ ನಂಟು!
ಕೊಚ್ಚಿ (ಡಿ.17): ನಿಷೇಧಿತ ಮಾದಕವಸ್ತು ಮಾರಾಟ ಮಾಡಲು ಯತ್ನಿಸಿದ ಆರೋಪದ ಮೇಲೆ ಜನಪ್ರಿಯ ಕಿರುತೆರೆ ಮತ್ತು ಹಿರಿತೆರೆ ನಟಿ ಅಶ್ವಥಿ ಬಾಬು ಮತ್ತು ಅವರ ವಾಹನ ಚಾಲಕ ಬಿನೋಯ್ ಅಬ್ರಹಾಂನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ವ್ಯಕ್ತಿಯ ಮೂಡ್ ಅನ್ನು ಬದಲಿಸುವಂಥ ಆತನಿಗೆ ವಿಚಿತ್ರ ಖುಷಿಯನ್ನು ನೀಡುವಂಥ ಸಾಮರ್ಥ್ಯವುಳ್ಳ ಎಂಡಿಎಂಎ ಎಂಬ ಡ್ರಗ್ ಅನ್ನು ಗ್ರಾಹಕನೊಬ್ಬನಿಗೆ ನೀಡುವುದಕ್ಕಾಗಿ ತಮ್ಮ ನಿವಾಸದೆದಿರು ಅವರು ಕಾಯುತ್ತಿದ್ದಾಗ ಅವರನ್ನು ಬಂಧಿಸಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸರು ತಿಳಿಸಿದ್ದಾರೆ.
ಲಕ್ಷಾಂತರ ರುಪಾಯಿ ಬೆಲೆಬಾಳುವ 58 ಗ್ರಾಂ ಎಂಡಿಎಂಎ ಡ್ರಗ್ ಅನ್ನು 22 ವರ್ಷದ ನಟಿಯಿಂದ ವಶಪಡಿಸಿಕೊಳ್ಳಲಾಗಿದೆ. ಇಂಥ ಪಾರ್ಟಿಗಳನ್ನು ಹೆಚ್ಚಾಗಿ ಫ್ಲಾಟ್ ಗಳಲ್ಲಿಯೇ ನಡೆಸಲಾಗುತ್ತದೆ. ಆಘಾತಕಾರಿ ಸಂಗತಿಯೆಂದರೆ, ಈ ದಂಧೆಯಲ್ಲಿ ನಟಿಗೆ ಸಹಾಯ ಮಾಡಿದ ಬಿನೋಯ್ ಈ ಡ್ರಗ್ ಅನ್ನು ಬೆಂಗಳೂರಿನಿಂದ ತರಿಸಿಕೊಂಡಿದ್ದ ಎನ್ನಲಾಗಿದೆ.
ತ್ರಿಕ್ಕಕ್ಕಾರ ಠಾಣೆ ಪೊಲೀಸರು ಈ ಬಂಧನವನ್ನು ದೃಢೀಕರಿಸಿದ್ದು, ಪೊಲೀಸರು ತನಿಖೆಯನ್ನು ಈಗಾಗಲೆ ಆರಂಭಿಸಿದ್ದಾರೆ. ಹಲವಾರು ಚಲನಚಿತ್ರ ಮತ್ತು ಟಿವಿ ಧಾರಾವಾಹಿಗಳಲ್ಲಿ ಅಭಿನಯಿಸಿರುವ ಅಶ್ವಥಿ ಅವರು ಈ ಜಾಲದಲ್ಲಿ ಹೇಗೆ ಸಿಲುಕಿದರು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.
ಈ ಡ್ರಗ್ ದಂಧೆಯ ಹಿಂದೆ ಭಾರೀ ತಂಡವೇ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಆ ಮಾದಕವಸ್ತುವನ್ನು ಬೆಂಗಳೂರಿನಿಂದ ತರಿಸಿಕೊಳ್ಳಲಾಗಿರುವುದರಿಂದ ಬೆಂಗಳೂರಿನಲ್ಲಿಯೂ ಈ ಬಗ್ಗೆ ತನಿಖೆ ನಡೆಯಬೇಕಿದೆ. ಕಳೆದ ವರ್ಷವಷ್ಟೇ 280 ಕೋಟಿ ರುಪಾಯಿ ಬೆಲೆ ಬಾಳುವ ಮಾದಕ ವಸ್ತುಗಳನ್ನು ಕೇರಳ ಪೊಲೀಸರು ವಶಪಡಿಸಿಕೊಂಡಿದ್ದರು. (ಎನ್.ಬಿ)