ಕರ್ನಾಟಕ

ಪ್ರವಾಸಿ ಭಾರತೀಯ ದಿವಸ್ : ವಿದೇಶಗಳಿಗೆ ಅನಿವಾಸಿ ಭಾರತೀಯರ ಕೊಡುಗೆ ಅಪಾರ : ಮೋದಿ ಶ್ಲಾಘನೆ

ಬೆಂಗಳೂರು: ವಿದೇಶಗಳಲ್ಲಿ ಎಷ್ಟು ಮಂದಿ ಭಾರತೀಯರು ನೆಲೆಸಿದ್ದಾರೆ ಎಂಬುದು ಮುಖ್ಯವಲ್ಲ. ವಿದೇಶಗಳಿಗೆ ಅವರು ನೀಡಿರುವ ಕೊಡುಗೆ ಅಪಾರ. ಅವರು ನಮ್ಮ ದೇಶದ ಸಂಸ್ಕೃತಿ, ಆಚಾರ ವಿಚಾರಗಳನ್ನು ಪ್ರತಿನಿಧಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಅವರು ಬೆಂಗಳೂರಿನ ಹೊರವಲಯದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಏರ್ಪಡಿಸಲಾಗಿರುವ ಭಾರತೀಯ ಪ್ರವಾಸಿ ದಿವಸ್ ಕಾರ್ಯಕ್ರಮವನ್ನುದ್ದೇಶಿಸಿ ಭಾನುವಾರ ಮಾತನಾಡಿದರು. ಕಪ್ಪುಹಣ ವಿರುದ್ಧ ಸಮರ ಸಾರಿರುವ ಕೇಂದ್ರ ಸರಕಾರದ ಕ್ರಮವನ್ನು ಪ್ರೋತ್ಸಾಹಿಸಿದ ಅನಿವಾಸಿ ಭಾರತೀಯರಿಗೆ ಧನ್ಯವಾದ ಸಲ್ಲಿಸಿದ ಮೋದಿ ಅವರು, ಭ್ರಷ್ಟಾಚಾರ ಮತ್ತು ಕಾಳಧನ ನಮ್ಮ ದೇಶದ ರಾಜನೀತಿ, ಶಾಸನವನ್ನು ದಮನಗೊಳಿಸುತ್ತಾ ಬಂದಿದೆ. ಕೆಲ ರಾಜನೀತಿಯೇ ಇದರಲ್ಲಿದೆ ಅನ್ನೋದು ವಿಪರ್ಯಾಸ ಎಂದು ವಿಪಕ್ಷಗಳಿಗೆ ಟಾಂಗ್ ನೀಡಿದರು.

ಅನಿವಾಸಿ ಭಾರತೀಯರ ಕನಸುಗಳೇ ನಮ್ಮ ಕನಸುಗಳು. ಕನಸುಗಳಿಗೆ ಏನೇ ಅಡ್ಡಿ ಬಂದರೂ ಸರಿಪಡಿಸಲು ಸಿದ್ಧ. 21ನೇ ಶತಮಾನವನ್ನು ಭಾರತೀಯ ಶತಮಾನವನ್ನಾಗಿಸೋಣ. ವಿದೇಶಗಳಲ್ಲಿ ನೆಲೆಸಿರುವ ಭಾರತೀಯರಿಗೆ ಉದ್ಯೋಗವಕಾಶಕ್ಕೆ ಕ್ರಮ ಕೈಗೊಳ್ಳಲಾಗುವುದು. 6 ಲಕ್ಷ ಇಂಜಿನಿಯರುಗಳ ವಲಸೆ ನಿಯಮಗಳ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. ಶೀಘ್ರವೇ ಪ್ರವಾಸಿ ಕೌಶಲ್ಯ ವಿಕಾಸ ಯೋಜನೆ ಆರಂಭಿಸಲಾಗುವುದು. ಭಾರತಕ್ಕೆ ವಾಪಸ್ ಬರುವವರಿಗೆ ಸಹಕಾರ ನೀಡಲಾಗುವುದು ಎಂದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪೋರ್ಚುಗಲ್ ಪ್ರಧಾನಿ ಅಂಟೋನಿಯೋ ಕೋಸ್ಟಾ, ಪೋರ್ಚುಗಲ್ ಕೂಡ ಭಾರತದಂತೆ ಸಾಂಸ್ಕೃತಿಕ ದೇಶ. ಭಾರತ ನನ್ನ ಕುಟುಂಬವಿದ್ದಂತೆ. ಗೋವಾದಲ್ಲಿ ನನ್ನ ಕುಟುಂಬದವರು ಇದ್ದಾರೆ. ಭಾರತೀಯ ಸಂಸ್ಕೃತಿ, ಸಂಪ್ರದಾಯ ಅದ್ಭುತವಾಗಿದೆ ಎಂದು ಹಾಡಿ ಹೊಗಳಿದರು.

ಪೋರ್ಚುಗಲ್ ಗೆ ಶಿಕ್ಷಣ, ಉದ್ಯೋಗ ಮತ್ತು ವ್ಯವಹಾರಕ್ಕೆ ಆಗಮಿಸುವ ಪ್ರತಿಯೊಬ್ಬ ಭಾರತೀಯರಿಗೂ ಆತ್ಮೀಯ ಸ್ವಾಗತ ನೀಡುತ್ತೇನೆ ಎಂದು ಹೇಳಿದರು.

Leave a Reply

comments

Related Articles

error: