ಪ್ರಮುಖ ಸುದ್ದಿ

ಡಿ.29 ಮತ್ತು 30 ರಂದು ಲೋಕಕಲ್ಯಾಣಕ್ಕಾಗಿ ಗಾಯತ್ರಿ ಪುನಶ್ಚರಣೆ ಯಾಗ

ರಾಜ್ಯ(ಮಡಿಕೇರಿ) ಡಿ.17 :- ಕಾವೇರಿಯ ಪಾವಿತ್ರ್ಯತೆಯ ಕುರಿತು ಜಾಗೃತಿ ಮೂಡಿಸಲು ಮತ್ತು ಲೋಕಕಲ್ಯಾಣಕ್ಕಾಗಿ ಗಾಯತ್ರಿ ಪುನಶ್ಚರಣೆ ಯಾಗ ಡಿ.29 ಮತ್ತು 30 ರಂದು ಮೂರ್ನಾಡು ಸಮೀಪದ ಕಾವೇರಿ ನದಿ ತಟದ ಕಣ್ಣ ಬಲಮುರಿ ಕ್ಷೇತ್ರದಲ್ಲಿ ನಡೆಯಲಿದೆ. ಇದರ ಪ್ರಚಾರಾರ್ಥ ಡಿ.23 ರಿಂದ ತಲಕಾವೇರಿಯಿಂದ ಯಾಗ ಜ್ಯೋತಿ ಮತ್ತು ಕಾವೇರಿ ತೀರ್ಥ ಕಲಶ ಹೊತ್ತ ರಥಯಾತ್ರೆ ಸಾಗಲಿದೆ ಎಂದು ಕೊಡಗು ಜಿಲ್ಲಾ ಬ್ರಾಹ್ಮಣರ ಸಂಘದ ಅಧ್ಯಕ್ಷ ಮಹಾಬಲೇಶ್ವರ ಭಟ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನಲ್ಲಿ ಪ್ರಥಮ ಬಾರಿಗೆ ನಡೆಯುವ ಗಾಯತ್ರಿ ಪುನಶ್ಚರಣೆ ಯಾಗವು ಅಂಗಾರಕಟ್ಟೆ ಬಾಳೆಕುದ್ರು ನರಸಿಂಹ ಮಠದ ಪೀಠಾಧ್ಯಕ್ಷ ಶ್ರೀ ನರಸಿಂಹ ಸ್ವಾಮೀಜಿ ಉಪಸ್ಥಿತಿಯಲ್ಲಿ 10 ಹೋಮ ಕುಂಡದಲ್ಲಿ 50 ವಿಪ್ರರಿಂದ ನೆರವೇರಲಿದೆ ಎಂದು ವಿವರಿಸಿದರು.
ಯಾಗಕ್ಕೆ ಸಮಬಂಧಿಸಿದಂತೆ ಕಳೆದ ಸಾಲಿನ ಡಿಸೆಂಬರ್‍ನಲ್ಲಿ ಸಂಕಲ್ಪ ಮಾಡಲಾಗಿದ್ದು, ಆ ಬಳಿಕ ಜಿಲ್ಲೆಯ ವಿವಿಧೆಡೆಗಳ ಆಸ್ತಿಕ ಬಂಧುಗಳು ಕೋಟಿ ಜಪವನ್ನು ನೆರವೇರಿಸಿದ್ದು, ಇದರ ಪೂರ್ಣಾಹುತಿ ಡಿ.30ರ ಮಧ್ಯಾಹ್ನ ನಡೆಯಲಿದೆ.
ಯಾಗದ ಪ್ರಚಾರಾರ್ಥವಾಗಿ ಡಿ.23 ರಂದು ಬೆಳಗ್ಗೆ ತಲಕಾವೇರಿಯಿಂದ ಯಾಗ ಜ್ಯೋತಿ ಮತ್ತು ತೀರ್ಥ ಕಲಶಹೊತ್ತ ರಥ ಯಾತ್ರೆ ಆರಂಭವಾಗಲಿದ್ದು, 4 ದಿನಗಳ ಕಾಲ ಜಿಲ್ಲೆಯಾದ್ಯಂತ ಸಂಚರಿಸಲಿದೆ. ಡಿ.23 ರಂದು ಬೆಳಗ್ಗೆ 7.30 ಕ್ಕೆ ರಥ ಯಾತ್ರೆ ತಲಕಾವೇರಿಯಿಂದ ಹೊರಟು, ಭಾಗಮಂಡಲ, ಚೇರಂಬಾಣೆ, ಬೆಟ್ಟಗೇರಿ, ನಾಪೋಕ್ಲು, ಕಕ್ಕಬ್ಬೆ, ಪಾಡಿ ಇಗ್ಗುತ್ತಪ್ಪ ದೇವಸ್ಥಾನ, ಚೆಯ್ಯಂಡಾಣೆ, ಕರಡ, ಕಡಂಗ, ಪಾರಾಣೆ, ಬಲಮುರಿ ಮೂಲಕ ಮೂರ್ನಾಡು ತಲುಪಲಿದೆ.
ಡಿ.24 ರಂದು ಬೆಳಗ್ಗೆ 7.30 ಕ್ಕೆ ಮೂರ್ನಾಡಿನಿಂದ ಹೊರಟು ಬೇತ್ರಿ, ವೀರಾಜಪೇಟೆ, ಗೋಣಿಕೊಪ್ಪ, ಪೊನ್ನಂಪೇಟೆ, ಹುದಿಕೇರಿ, ಶ್ರೀಮಂಗಲ, ಕುಟ್ಟ, ಕಾನೂರು, ಬಾಳೆಲೆ, ತಿತಿಮತಿ, ಪಾಲಿಬೆಟ್ಟ, ಅಮ್ಮತ್ತಿ ಮೂಲಕ ಸಿದ್ದಾಪುರಕ್ಕೆ ಪ್ರಯಾಣ ಬೆಳೆಸಲಿದೆ. ಖಸೆಂಬರ್ 25 ರಂದು ಸಿದ್ದಾಪುರದಿಂದ ಚೆಟ್ಟಳ್ಳಿ, ಸುಂಟಿಕೊಪ್ಪ, ಕುಶಾಲನಗರ, ಕೂಡಿಗೆ, ಕಣಿವೆ ರಾಮೇಶ್ವರ ಕ್ಷೇತ್ರ, ಹೆಬ್ಬಾಲೆ, ಆಲೂರು ಸಿದ್ದಾಪುರ, ಕೊಡ್ಲಿಪೇಟೆ, ಶನಿವಾರಸಂತೆ ಮೂಲಕ ಸೋಮವಾರಪೇಟೆಗೆ ಆಗಮಿಸಲಿದೆ. ಡಿ.26 ರಂದು ಸೋಮವಾರಪೇಟೆಯಿಂದ ಮಾದಾಪುರ, ಮಡಿಕೇರಿ, ಸಂಪಾಜೆ, ಮೇಕೇರಿ, ಹಾಕತ್ತೂರು, ಮರಗೋಡು, ಐಕೊಳ, ಕೊಂಡಂಗೇರಿ, ಮೂರ್ನಾಡು ಮೂಲಕ ಬಲಮುರಿ ಕ್ಷೇತ್ರ ತಲುಪಲಿದೆಯೆಂದು ಮಾಹಿತಿ ನೀಡಿದರು.
ಈ ಯಾಗಕ್ಕೆ ಹೊರೆ ಕಾಣಿಕೆ, ಭಂಡಾರ ಅರ್ಪಣೆ ಮತ್ತು ಪೂಜಾ ರಶೀದಿ ಪಡೆಯುವ ಮೂಲಕ ಸಹಕಾರ ನೀಡಬಹುದು ಎಂದು ತಿಳಿಸಿದ ಮಹಾಬಲೇಶ್ವರ ಭಟ್, ಡಿ.30ರ ಯಾಗದಲ್ಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಹೆಚ್ಚಿನ ಮಾಹಿತಿಗಾಗಿ 9480244630, 8762846469, 9449761296, 9731177179 ಹಾಗೂ 9740373837 ರನ್ನು ಸಂಪರ್ಕಿಸಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಖಜಾಂಚಿ ಹೆಚ್.ಆರ್. ಮುರುಳಿ, ಸದಸ್ಯರಾದ ಶ್ರೀಶ ಕುಮಾರ್ ಹಾಗೂ ಎಂ.ಎಂ. ಸುರೇಶ್ ಕುಮಾರ್ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: