ಮೈಸೂರು

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪಠ್ಯ ಕ್ರಮದಲ್ಲಿ ಕೃಷಿಯನ್ನು ಅಳವಡಿಸಬೇಕಿದೆ : ಡಾ.ಪುಷ್ಪಅಮರನಾಥ್

ಪ್ರಗತಿಪರ ರೈತರ ಜೊತೆ ಸೇರಿ ಗದ್ದೆಗಿಳಿದು ಕೊಯ್ಲು ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ವಿವರಣೆ

ಮೈಸೂರು,ಡಿ.18:- ಹುಣಸೂರು ತಾಲೂಕಿನ ಬನ್ನಿಕುಪ್ಪೆ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಬಾಚಳ್ಳಿ ಗ್ರಾಮದ ಗದ್ದೆಯಲ್ಲಿ ತಾವೇ ನಾಟಿ ಮಾಡಿದ ಭತ್ತದ ಬೆಳೆಯ ಕೊಯ್ಲು ಕಾರ್ಯಕ್ಕೆ  ತಾವೇ ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸುವ ಮೂಲಕ ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಡಾ.ಪುಷ್ಪಅಮರನಾಥ್ ಅವರು ಚಾಲನೆ ನೀಡಿದರು.

ರೈತ ಕಲ್ಕುಣಿಕೆ ಶಿವಣ್ಣ ಅವರ ಜಮೀನಿನಲ್ಲಿ ಡಾ.ಪುಷ್ಪ ಅಮರನಾಥ್ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಗ್ರಾಮಸ್ಥರ ಜೊತೆಗೂಡಿ ಆಗಸ್ಟ್ 11 ರಂದು ಭತ್ತ ನಾಟಿ ಬಗ್ಗೆ  ಆದರ್ಶ ವಿದ್ಯಾಲಯದ ಪ್ರೌಢಶಾಲೆಯ 40ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನಾಟಿ ಮಾಡುವ ಬಗ್ಗೆ ಪ್ರಾಯೋಗಿಕವಾಗಿ ಹೇಳಿಕೊಟ್ಟಿದರು. ಭತ್ತದ ನಾಟಿ ಮಾಡುವ ಮೂಲಕ ರೈತರಿಗೆ  ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದರು. ಈಗ ಅದೇ ಗದ್ದೆಯಲ್ಲಿ ಕೊಯ್ಲು ಮಾಡಿದ್ದಾರೆ. 10ಕ್ಕೂ ಹೆಚ್ಚು ಮಂದಿ ಕೃಷಿ ಕೂಲಿಯಾಳುಗಳು , ಗದ್ದೆಯ ಮಾಲಿಕರು, ಪ್ರಗತಿಪರ ರೈತರ ಜೊತೆ ಸೇರಿ ಗದ್ದೆಗಿಳಿದು ಕೊಯ್ಲು ಮಾಡುವ ಮೂಲಕ ಭತ್ತದ ಕೊಯ್ಲು ಬಗ್ಗೆ  ವಿದ್ಯಾರ್ಥಿಗಳಿಗೆ ವಿವರಿಸಿದರು.

“ನಾಲ್ಕು ಗೋಡೆಯ ಶಾಲಾ ಕೊಠಡಿಯ ಪಾಠದಿಂದ ರೈತರ ಜಮೀನಿನ ಕಡೆಗೆ, ಶಾಲೆಯ ಮಕ್ಕಳ ಕಲಿಕೆಯ ನಡಿಗೆ” ಎಂಬ ಧ್ಯೇಯ ವಾಕ್ಯದೊಂದಿಗೆ ಡಾ.ಪುಷ್ಪಅಮರ ನಾಥ್‍ ಅವರು ಇತ್ತೀಚಿನ ದಿನಗಳಲ್ಲಿ ಕೃಷಿಯಿಂದ ಕೃಷಿಕರೆ ದೂರ ಸರಿಯುವ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಕೃಷಿಯಿಂದಾಗುವ ಲಾಭದ ಬಗ್ಗೆ ಜಾಗೃತಿ ಮೂಡಿಸಿದರು.

ವಿದ್ಯಾರ್ಥಿಗಳು, ಯುವಜನತೆ ಕೃಷಿಯ ಬಗ್ಗೆ ನೈಜವಾಗಿ ತಿಳುವಳಿಕೆ ಪಡೆಯುವುದು. ಮಕ್ಕಳು  ಸ್ವತಃ ಗದ್ದೆಗಿಳಿದರೆ ಮಾತ್ರ ಕೃಷಿಯ ಕಷ್ಟ-ಕೃಷಿಯ ನೈಜ ತಿಳುವಳಿಕೆ ಬರಲು ಸಾಧ್ಯ ಎಂಬುದನ್ನು ಮನಗಂಡ ಅವರು  ಶಿಕ್ಷಕರು ಹಾಗೂ ಅಧಿಕಾರಿಗಳ ಜೊತೆಗೂಡಿ ಕೃಷಿಯ ಮಹತ್ವದ ಅರಿವನ್ನು ಮಕ್ಕಳಿಗೆ ಮೂಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಪುಷ್ಪಅಮರ ನಾಥ್ ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದು, ರೈತರ ಶ್ರೇಯೋಭಿವೃದ್ದಿಗಾಗಿ ಅನೇಕ ಯೋಜನೆಗಳನ್ನೂ ರೂಪಿಸಲಾಗಿದೆ. ಭತ್ತದ ಬೆಳೆಗೆ ರೂ.1850 ರೂಗಳನ್ನೂ ಬೆಂಬಲ ಬೆಲೆಯನ್ನು ಸರ್ಕಾರ ಘೋಷಿಸಿದ್ದು, ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಕೈಗೆ ಭತ್ತವನ್ನು ನೀಡಿ ನಷ್ಟ ಅನುಭವಿಸಬಾರದು ಎಂದು ರೈತರಲ್ಲಿ ಮನವಿ ಮಾಡಿಕೊಂಡರು.

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪಠ್ಯ ಕ್ರಮದಲ್ಲಿ ಕೃಷಿಯನ್ನು ಅಳವಡಿಸಬೇಕು. ಈ ಹಿಂದೆ ನಾನು ಜಿ.ಪಂ.ಅಧ್ಯಕ್ಷೆಯಾಗಿದ್ದಾಗಲೂ ಹೇಳಿದ್ದೆ. ನಮ್ಮ ಆಹಾರ ಬೆಳೆಯಾದ ಭತ್ತದ ಉತ್ಪಾದನೆ ಯಾವ ರೀತಿ ಆಗುತ್ತದೆ ಎಂಬ ಮಾಹಿತಿ ಹೆಚ್ಚಿನ ಮಕ್ಕಳಿಗೆ ಇರುವುದಿಲ್ಲ. ಈಗ ಗದ್ದೆ ಕಾಣುವುದೇ ವಿರಳ. ಹೀಗಾಗಿ, ಭತ್ತ ಬೆಳೆಯುವುದು ಹೇಗೆ? ಬಿತ್ತನೆ, ನಾಟಿ ಮೊದಲಾದ ವಿಚಾರ ತಿಳಿಸುವ ನಿಟ್ಟಿನಲ್ಲಿ ಹಾಗೂ ಕೃಷಿಯಲ್ಲಿ ಆಸಕ್ತಿ ಮೂಡಿಸುವ ಸಲುವಾಗಿ ಗದ್ದೆಯಲ್ಲಿ ಭತ್ತದ ಕೃಷಿಯ ಕುರಿತು ತಿಳಿ ಹೇಳಲಾಗಿದೆ.

ಶಾಲಾಮಕ್ಕಳು ಸಹ ಉತ್ಸಾಹದಿಂದ ಭತ್ತದ ಕೊಯ್ಲು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಾಯೋಗಿಕವಾಗಿ ತಿಳಿದುಕೊಳ್ಳುವುದರ ಜೊತೆಗೆ  ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಕ್ಕಳಿಂದ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದೇವೆ. ಎಲ್ಲಾ ವಿಚಾರಗಳ ಬಗ್ಗೆ ವರದಿ ಸಿದ್ದಪಡಿಸಿ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದರು.

ಪ್ರಗತಿಪರ ರೈತ ರಾಜು, ರೈತ ಕಲ್ಕುಣಿಕೆ ಶಿವಣ್ಣ, ತಾಂತ್ರಿಕ ಕೃಷಿ ಅಧಿಕಾರಿ ಜೈಕುಮಾರ್‍ವಿದ್ಯಾರ್ಥಿಗಳಿಗೆ ಭತ್ತದ ಬೆಳೆ, ರಕ್ಷಣೆ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಹಾಯಕ ಕೃಷಿ ಅಧಿಕಾರಿಗಳಾದ ದಿವಾಕರ್, ಶಿಕ್ಷಕರಾದ ಪುರುಷೋತ್ತಮ್, ಚೇತನ್, ಶ್ವೇತಾ, ಸರಿತಾ, ವಿದ್ಯಾರ್ಥಿಗಳು ಸೇರಿದಂತೆ ನೂರಕ್ಕೂ ಹೆಚ್ಚು ರೈತರು ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: