ಕರ್ನಾಟಕಪ್ರಮುಖ ಸುದ್ದಿ

ಬೆಳಗಾವಿಯಲ್ಲಿ ರಾಜ್ಯ ಕಾಂಗ್ರೆಸ್ ಶಾಸಕಾಂಗ ಸಭೆ: ಜಾರಕಿಹೊಳಿ, ಎಂ.ಬಿ.ಪಾಟೀಲ್ ಗೈರು!

ಬೆಳಗಾವಿ (ಡಿ.18): ರಾಜ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಇಂದು ಬೆಳಗಾವಿಯಲ್ಲಿ ನಡೆಸಲಾಯಿತು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಗೃಹ ಮಂತ್ರಿ ಪರಮೇಶ್ವರ್, ಡಿ.ಕೆ.ಶಿವಕುಮಾರ್ ಅವರುಗಳ ನೇತೃತ್ವದಲ್ಲಿ ಶಾಸಕಾಂಗ ಸಭೆ ಜರುಗಿತು.

ಸಂಪುಟ ವಿಸ್ತರಣೆಗೆ ಮುನ್ನಾ ಕರೆಯಲಾಗಿರುವ ಈ ಶಾಸಕಾಂಗ ಪಕ್ಷದ ಸಭೆ ಹಲವು ಕಾರಣಗಳಿಗೆ ಭಾರಿ ಮಹತ್ವದ್ದಾಗಿತ್ತು. ಸಚಿವ ಸ್ಥಾನ ಆಕಾಂಕ್ಷಿಗಳು ಮುಖಂಡರ ಮೇಲೆ ಬಂಡಾಯ ಏಳುವ ನಿರೀಕ್ಷೆ ಸಹ ಇತ್ತು. ಅಂತಹ ಬಂಡಾಯವೇನೂ ಇಲ್ಲವಾದರೂ ಶಾಸಕರಾದ ರಮೇಶ್ ಜಾರಕಿಹೊಳಿ ಶಾಸಕಾಂಗ ಪಕ್ಷದ ಸಭೆಗೆ ಗೈರಾಗಿದ್ದರು. ಜೊತೆಗೆ ಎಂಬಿ.ಪಾಟೀಲ್, ಸೇರಿ ಇನ್ನೂ ಕೆಲವು ಹಿರಿಯ ಶಾಸಕರೇ ಸಭೆಗೆ ಗೈರಾಗಿ ಕಾಂಗ್ರೆಸ್ ಮುಖಂಡರಿಗೆ ಬಿಸಿ ಮುಟ್ಟಿಸಿದರು.

ಇನ್ನು ಸಭೆಯ ಮುಖ್ಯಾಂಶಗಳನ್ನು ನೋಡುವುದಾರೆ, ಡಿಸೆಂಬರ್ 22 ರಂದು ಸಚಿವ ಸಂಪುಟ ವಿಸ್ತರಣೆ ಆಗುತ್ತಿಲ್ಲ ಬದಲಿಗೆ ಸಂಪುಟ ಪುನರ್‌ರಚನೆ ಆಗುತ್ತಿದೆ ಎಂದು ಸಿದ್ದರಾಮಯ್ಯ ಅವರು ಸಭೆಗೆ ತಿಳಿಸಿದ್ದಾರೆ. ಸಿದ್ದರಾಮಯ್ಯ ಅವರ ಮಾತಿನ ಪ್ರಕಾರ ಈಗಿರುವ ಕೆಲವು ಸಚಿವರು ಸಹ ತಮ್ಮ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ.

ಸಭೆಯಲ್ಲಿ ನಿಗಮ ಮಂಡಳಿ ನೇಮಕಕ್ಕೆ ಸಹ ಕೆಲವು ಶಾಸಕರು ತಮ್ಮನ್ನು ಪರಿಗಣಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಡಿಸೆಂಬರ್ 22 ರಂದೇ ನಿಗಮ ಮಂಡಳಿ ಸ್ಥಾನವನ್ನು ನೀಡಲಾಗುತ್ತಿದ್ದು, ಕಾಂಗ್ರೆಸ್‌ನ 20 ಶಾಸಕರಿಗೆ ನಿಗಮ ಮಂಡಳಿ ಸ್ಥಾನ ಸಿಗಲಿದೆ.

ಇನ್ನುಳಿದಂತೆ ಕ್ಷೇತ್ರ ಅನುದಾನದ ವಿಷಯವಾಗಿ ಕೆಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಜೆಡಿಎಸ್‌ ಶಾಸಕರ ಕ್ಷೇತ್ರಗಳಿಗೆ ದೊರಕಿದಷ್ಟು ಅನುದಾನಗಳು ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ದೊರಕುತ್ತಿಲ್ಲ ಎಂದು ಶಾಸಕರು ದೂರು ನೀಡಿದ್ದಾರೆ.

ಉತ್ತರ ಕರ್ನಾಟಕ ಭಾಗದ ಶಾಸಕರು ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು. ಅಭಿವೃದ್ಧಿ ಹಾಗೂ ರಾಜಕಾರಣ ಎರಡರಲ್ಲೂ ಉತ್ತರ ಕರ್ನಾಟಕವನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ಅವರು ಬೇಸರ ತೋಡಿಕೊಂಡರು.

ಈ ಬಾರಿಯ ಕಾಂಗ್ರೆಸ್ ಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಭಾಗವಹಿಸುತ್ತಾರೆ ಎನ್ನಲಾಗಿತ್ತು. ಕಾಂಗ್ರೆಸ್ ಶಾಸಕರ ದೂರುಗಳನ್ನು ಸಿಎಂ ಕೇಳುತ್ತಾರೆ ಎನ್ನಲಾಗಿತ್ತು. ಆದರೆ ಹಾಗೆ ಏನೂ ನಡೆದಿಲ್ಲ. ಕಾಂಗ್ರೆಸ್ ಮುಖಂಡರೇ ಇದಕ್ಕೆ ಬೇಡ ಎಂದರು ಎನ್ನಲಾಗಿದೆ.

ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿರುವ ಬಗ್ಗೆ ಸಿದ್ದರಾಮಯ್ಯ ಸಭೆಯಲ್ಲಿ ಪ್ರಸ್ತಾಪಿಸಿ ಲೋಕಸಭೆ ಚುನಾವಣೆಯಲ್ಲಿಯೂ ಕಾಂಗ್ರೆಸ್ ವಿಜಯ ಸಾಧಿಸುತ್ತದೆ ಎಂದು ಹೇಳಿದರು. ಈ ಸಮಯದಲ್ಲಿ ಯಾವುದೇ ಶಾಸಕರು ಪಕ್ಷಕ್ಕೆ ಹಾನಿಯಾಗುವ ಕೃತ್ಯಗಳಲ್ಲಿ ತೊಡಗಿಕೊಳ್ಳಬಾರದು ಎಂದು ಅವರು ಎಚ್ಚರಿಕೆಯನ್ನೂ ನೀಡಿದರು. (ಎನ್.ಬಿ)

Leave a Reply

comments

Related Articles

error: