ಪ್ರಮುಖ ಸುದ್ದಿ

ಬಿಎಂಟಿಸಿ ಬಸ್ ಹರಿದು ಪಿಯುಸಿ ವಿದ್ಯಾರ್ಥಿಗಳಿಬ್ಬರು ಸಾವು

ರಾಜ್ಯ(ಬೆಂಗಳೂರು) ಡಿ. 18:- ವೇಗವಾಗಿ ಹೋಗುತ್ತಿದ್ದ ಬಿಎಂಟಿಸಿ ಬಸ್ ಹರಿದು ಪಿಯುಸಿ ವಿದ್ಯಾರ್ಥಿಗಳಿಬ್ಬರು ಮೃತಪಟ್ಟರೆ, ಮತ್ತೋರ್ವ ಗಾಯಗೊಂಡಿರುವ ದಾರುಣ ಘಟನೆ ಬ್ಯಾಟರಾಯನಪುರದ ಮೈಸೂರು ರಸ್ತೆಯಲ್ಲಿ ನಡೆದಿದೆ.

ಮೃತರನ್ನು ಕಸ್ತೂರ ಬಾ ನಗರದ ಯದು ಕುಮಾರ್ (18) ಹಾಗೂ ಚಂದ್ರಕಾಂತ (17) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಮತ್ತೊಬ್ಬ ವಿದ್ಯಾರ್ಥಿ ಬಾಪೂಜಿ ನಗರದ ರಾಜಶೇಖರ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೈಸೂರು ರಸ್ತೆಯ ಕೆಬಿ ನಗರದ ಬಿಬಿಎಂಪಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಚಂದ್ರಕಾಂತ್, ದ್ವಿತೀಯ ಪಿಯುಸಿ ಓದುತ್ತಿದ್ದ ಯದುಕುಮಾರ್ ಅವರು ಸ್ನೇಹಿತ ರಾಜಶೇಖರ್ ಜತೆ ಕಾಲೇಜಿಗೆ ಹೋಗಲು ಇಂದು ಬೆಳಿಗ್ಗೆ 8.15ರ ವೇಳೆ ಮೈಸೂರು ರಸ್ತೆಯ ಕಸ್ತೂರ ಬಾ ಕಾಲೇಜಿನ ಕ್ರಿಶ್ಚಿಯನ್ ಸ್ಮಶಾನದ ಬಳಿ ರಸ್ತೆ ದಾಟುತ್ತಿದ್ದರು. ಈ ವೇಳೆ ದೊಡ್ಡ ಬಸ್ತಿಯಿಂದ ಸಿಟಿ ಮಾರ್ಕೆಟ್ ಕಡೆಗೆ ವೇಗವಾಗಿ ಹೋಗುತ್ತಿದ್ದ ಬಿಎಂಟಿಸಿ ಬಸ್, ವಿದ್ಯಾರ್ಥಿಗಳಿಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಬಸ್ ಪಾದಚಾರಿಗಳಿಗೆ ಡಿಕ್ಕಿ ಹೊಡೆದು ರಸ್ತೆ ಬದಿ ಕಾಂಪೌಂಡ್‌ಗೆ ಗುದ್ದಿದೆ. ಈ ಅಪಘಾತದ ಕಾರಣ ಮೈಸೂರು ರಸ್ತೆಯಲ್ಲಿ 2 ಗಂಟೆಗಳ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು.

ಸುದ್ದಿ ತಿಳಿದ ಕೂಡಲೇ ಬ್ಯಾಟರಾಯನಪುರ ಸಂಚಾರ ಪೊಲೀಸರು ಧಾವಿಸಿ ಬಸ್ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಪ್ರಕರಣ ದಾಖಲಿಸಿ ಪರಾರಿಯಾಗಿರುವ ಚಾಲಕನಿಗಾಗಿ ಶೋಧ ನಡೆಸಿದ್ದಾರೆ ಎಂದು ಡಿಸಿಪಿ ಸಾರಾ ಫಾತೀಮಾ ತಿಳಿಸಿದ್ದಾರೆ.

10 ಲಕ್ಷ ಪರಿಹಾರ

ಅಪಘಾತದಲ್ಲಿ ವಿದ್ಯಾರ್ಥಿಗಳು ಮೃತಪಟ್ಟ ಸ್ಥಳಕ್ಕೆ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಅವರು ಭೇಟಿ ನೀಡಿ ಮಾಹಿತಿ ಪಡೆದು ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ 10 ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: