ಮೈಸೂರು

ಭಾವನೆಗಳ ಜೊತೆ ಅರಿವಿನ ಮೇಲೆ ಪರಿಣಾಮ ಬೀರುವ ಕಲೆಗಳ ಅನಾವರಣ

9ಕಲೆ ಎಂಬ ಎರಡಕ್ಷರದಲ್ಲಿ ವಿಶ್ವವೇ ಅಡಗಿದೆ. ನೋಡಲು ಸಣ್ಣ ಪದವಾದರೂ ಭಾವನೆಗಳು ಹಾಗೂ ಅರಿವಿನ ಮೇಲೆ ಪರಿಣಾಮ ಬೀರುವ ಇದು, ಮನುಷ್ಯನ ವೈವಿಧ್ಯಮಯವಾದ ಚಟುವಟಿಕೆಗಳನ್ನು, ಕಲ್ಪನಾ ಸೃಷ್ಟಿಗಳನ್ನು ಮತ್ತು ಭಾವನೆಗಳನ್ನು ಅಭಿವ್ಯಕ್ತಿಗೊಳಿಸುವುದಷ್ಟೇ ಅಲ್ಲ ಸಮಾಜವನ್ನು ತಿದ್ದಿ ತೀಡುವ ಪ್ರಭಾವಿ ಅಸ್ತ್ರವೂ ಆಗಬಲ್ಲದು. ಅಂತಹ ಕಲೆಯನ್ನು ಕರಗತ ಮಾಡಿಕೊಂಡವರು ಅನೇಕ ಮಂದಿ. ಅಂಥವರ ಸಾಲಿಗೆ ಸೇರಲು ಹೊರಟಿದ್ದಾರೆ ಮೈಸೂರಿನ ಚಿತ್ರಕಲಾ ಮಹಾವಿದ್ಯಾಲಯದ ಪದವಿ ವಿದ್ಯಾರ್ಥಿಗಳು.

ಕಲೆಯ ಮೂಲಕ ಜನರಿಗೆ ಅರಿವು ಮೂಡಿಸಿ, ಸಮಾಜಕ್ಕೆ ಉತ್ತಮ ಸಂದೇಶ ನೀಡಲು, ಹೊಸತನವನ್ನು ಹುಡುಕುತ್ತಾ ಹೊರಟಿದ್ದಾರೆ. ಇವರ ಪ್ರತಿಭೆ ನೋಡಿದರೆ ನಿಜಕ್ಕೂ ಅದ್ಭುತವೆನಿಸುತ್ತದೆ. ವಾಸ್ತವ ವಿಚಾರಗಳನ್ನು, ಸಂದರ್ಭಗಳನ್ನು ಕಲೆಯ ಮೂಲಕ ವ್ಯಕ್ತಪಡಿಸುವುದು ಒಂದು ಸವಾಲೆನಿಸಿದರೂ, ಅಂತಹ ಸವಾಲನ್ನು ಸ್ವೀಕರಿಸಿ ಸಮಾಜಕ್ಕೆ ಒಳಿತುಂಟು ಮಾಡುವ ಸದುದ್ದೇಶದತ್ತ ಈ ವಿದ್ಯಾರ್ಥಿಗಳು ತಮ್ಮ ಹೆಜ್ಜೆಯನ್ನಿರಿಸಿದ್ದಾರೆ.

8ಮೈಸೂರು ಕಲಾಮಂದಿರದ “ಸುಚಿತ್ರ ಆರ್ಟ್ ಗ್ಯಾಲರಿ”ಯಲ್ಲಿ ಕಲಾವಿದರ ಕೈಚಳಕದಿಂದ ಸೃಷ್ಟಿಯಾಗಿದ್ದ 35 ಕಲಾಕೃತಿಗಳು ನೋಡುಗರನ್ನು ಆಕರ್ಷಿಸುತ್ತಿತ್ತು. ಪ್ರಶಾಂತ್, ಮೋಹಿತ್ ಸೇರಿದಂತೆ ಸುಮಾರು 15 ವಿದ್ಯಾರ್ಥಿಗಳು ತಮ್ಮ ಕ್ರಿಯಾಶೀಲ ಪ್ರತಿಭೆಯಿಂದ ಕಲೆಯನ್ನು ಅನಾವರಣಗೊಳಿಸಿದ್ದರು. ಪ್ರತಿಯೊಂದು ಕಲಾಕೃತಿಯೂ ಮಹತ್ವದ ಸಂದೇಶ ನೀಡುವಂತಿದ್ದವು.

ಪ್ರಧಾನಿ ಮೋದಿ ಅವರು ಕಪ್ಪುಹಣವನ್ನು ಹೊರತರಲು ನವೆಂಬರ್ 8 ರಂದು ಜಾರಿಗೆ ತಂದ ನೋಟಿನ ಅಮಾನ್ಯೀಕರಣ ಕುರಿತು ರಚಿಸಿರುವ ಚಿತ್ರ ಕಲಾಕೃತಿಯು ಜೇಡರ ಬಲೆಯಲ್ಲಿ ಸಿಲುಕಿ ಹೊರಬಾರದ ರೀತಿಯಲ್ಲಿ ಸಿಲುಕಿರುವುದನ್ನು ಅರ್ಥಗರ್ಭಿತವಾಗಿ ಪ್ರತಿಬಿಂಬಿಸುವಂತಿತ್ತು.

ಇದಲ್ಲದೆ ಹಳ್ಳಿಗಾಡಿನ ಚಿತ್ರಣ, ಪ್ರಕೃತಿ, ಪ್ರಾಣಿಹಿಂಸೆ ಮಾಡಬಾರದು ಎನ್ನುವ ಸಂದೇಶ ನೀಡುವ ಚಿತ್ರಗಳು, ಪ್ರೀತಿಸುವ ಹೃದಯಗಳ ಸಂಭಾಷಣೆ, ಪ್ರೀತಿಸಿ ಮೋಸ ಹೋದವರ ವ್ಯಥೆ, ಸಮಯಪ್ರಜ್ಞೆ, ಪ್ರಸ್ತುತ ದಿನಗಳಲ್ಲಿ ಹೆಣ್ಣಿನ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯಗಳನ್ನು ಬಿಂಬಿಸುವ ಕಲಾಕೃತಿಗಳು ಎಲ್ಲವೂ ಒಂದಕ್ಕೊಂದು ಭಿನ್ನವಾಗಿದ್ದು ಗಮನ ಸೆಳೆಯುತ್ತಿದೆ.

7ಎಲ್ಲವೂ ಡಿಜಿಟಲೀಕರಣಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಕಲೆಯನ್ನು ಉಳಿಸುವ ಒಂದು ಸಣ್ಣ ಪ್ರಯತ್ನ ಇಲ್ಲಿ ನಡೆದಿದೆ. ಸಮಾಜದಲ್ಲಿ ಕಲಾವಿದನಿಗೆ ಒಂದು ಸ್ಥಾನ ಕೊಡಿಸಿ ಆತನ ಪ್ರತಿಭೆಯನ್ನು ಅನಾವರಣಗೊಳಿಸಲಾಗಿದೆ. ಕಲೆಯನ್ನು ಉಳಿಸಿ ಬೆಳೆಸಿ ಸಂಸ್ಕೃತಿಯನ್ನು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಸಾಗುತ್ತಿರುವ ಈ ಯುವ ಪ್ರತಿಭೆಗಳಿಗೆ ಇನ್ನಷ್ಟು ಅವಕಾಶಗಳು, ಪ್ರೋತ್ಸಾಹಗಳು ದೊರಕಬೇಕಾಗಿದೆ.

  • ಲತಾ.ಸಿ.ಜಿ.

Leave a Reply

comments

Related Articles

error: