ಪ್ರಮುಖ ಸುದ್ದಿ

ಭಗವದ್ಗೀತೆ ಕಾದಂಬರಿಯಲ್ಲ ಜೀವನ ಪದ್ಧತಿ ಸಾರುವ ಪವಿತ್ರ ಗಂಥ : ರಾಜ್ಯಪಾಲ ವಜೂಭಾಯಿ ರೂಢಾಬಾಯಿ ವಾಲಾ

ರಾಜ್ಯ(ಹುಬ್ಬಳ್ಳಿ)ಡಿ.19:- ಭಗವದ್ಗೀತೆ ಕಾದಂಬರಿಯಲ್ಲ. ಜೀವನ ಪದ್ಧತಿ ಸಾರುವ ಪವಿತ್ರ ಗಂಥ ಎಂದು ರಾಜ್ಯಪಾಲ ವಜೂಭಾಯಿ ರೂಢಾಬಾಯಿ ವಾಲಾ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿಂದು ಸ್ವರ್ಣವಲ್ಲೀ ಶ್ರೀ ವಿರಚಿತ ಗೀತಾಂತರಂಗದ ಇಂಗ್ಲಿಷ್ ಅವತರಣಿಕೆಯ ಅನುವಾದಿತ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಭಗವದ್ಗೀತಾ ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಭಾಷಣದುದ್ದಕ್ಕೂ ಸಂಸ್ಕೃತ ಶ್ಲೋಕ ಹೇಳಿದರು. ಭಗವದ್ಗೀತೆಯ ಸಾರ ಎಲ್ಲರಿಗೂ ಅರ್ಥವಾಗಲಿ ಎಂದು ಕಾರ್ಯಕ್ರಮ ಆಯೋಜನೆ ಮಾಡಿದ ಎಲ್ಲರಿಗೂ ಧನ್ಯವಾದ ತಿಳಿಸಿದರು. ನಾವು ಜ್ಞಾನಿಗಳನ್ನು ಪೂಜಿಸುತ್ತೇವೆಯೇ ಹೊರತು ಹಣವಂತರನ್ನಲ್ಲ. ದೇಶ ಆಧ್ಯಾತ್ಮಕ್ಕಿಂತ ಭೌತಿಕವಾದ ಬೆಳೆಯುತ್ತಿದೆ. ಅರ್ಜುನನಿಗೆ ಬ್ರಹ್ಮ ಜ್ಞಾನ ನೀಡಿದ್ದು ಇದೇ ಗ್ರಂಥ. ಧರ್ಮದ ರಕ್ಷಣೆ ಮಾಡಿದವರನ್ನು ಧರ್ಮವೇ ಕಾಯುತ್ತೆ ಎಂಬ ಮಹತ್ವದ ಸಂದೇಶವನ್ನು ಭಗವದ್ಗೀತೆ ಕಲಿಸುತ್ತೆ‌. ಗಂಟೆ ಜಾಗಟೆ ಬಾರಿಸೋದು ಧರ್ಮ ಪಾಲನೆಯಲ್ಲ.  ಗೀತೆಯಂತೆ ನಡೆದುಕೊಳ್ಳುವುದೇ ನಿಜವಾದ ಧರ್ಮ ಪಾಲನೆ. ದಯೆ, ಕರುಣೆಯನ್ನು ಸಾರುವ ಉದ್ದೇಶದಿಂದ ಗೌತಮ ಬುದ್ಧ ಬೌದ್ಧ ಧರ್ಮವನ್ನು ಸಂಸ್ಥಾಪಿಸಿದ. ಇದನ್ನು ಜಗತ್ತೇ ಅನುಸರಿಸುತ್ತಿದೆ. ಅದರಂತೆ ಭಗವದ್ಗೀತೆಯೂ ನಾಡಿನಾದ್ಯಂತ ಪಸರಿಸಬೇಕು. ಶರೀರ ಸ್ಥಿರವಲ್ಲದಿದ್ದರೂ ಆತ್ಮ ಅಮರ ಅಂತ ಕೃಷ್ಣ ಪರಮಾತ್ಮ ಹೇಳಿದ್ದಾನೆ. ಹೀಗಾಗಿ ನಾವು ಅಮರತ್ವದ ಸಂತಾನಗಳಿದ್ದಂತೆ. ನಾವು ಯಾರ ತಂಟೆಗೂ ಹೋಗಬಾರದು. ಧರ್ಮ ಸಂಸ್ಥಾಪನೆಗೆ ನಾನು ಮತ್ತೆ ಹುಟ್ಟಿ ಬರುತ್ತೇನೆ ಅಂತ ಕೃಷ್ಣ ಹೇಳಿದ್ದಾರೆ. ಮಾನವನಲ್ಲಿನ ದುಷ್ಟತನವನ್ನ ನಾಶ ಮಾಡಲು ಅವತಾರ ಎತ್ತುತ್ತೇನೆ ಅನ್ನೋದೇ ಈ ಕೃಷ್ಣನ ಮಾತಿನ ಸಾರ. ಕೃಷ್ಣ ಬರುತ್ತಾನೋ ಇಲ್ಲವೋ ಗೊತ್ತಿಲ್ಲ. ಆದರೆ ಭಗವದ್ಗೀತೆ ಪಠಣದಿಂದ ಮಾನವನಲ್ಲಿನ ದುಷ್ಟ ಗುಣ ದೂರ ಮಾಡಬಹುದು. ನಮ್ಮಲ್ಲಿರುವ ಹಣದಿಂದ ಬಡ, ಅನಾಥರಿಗೆ ಸಹಾಯ ಮಾಡಬೇಕು.ಅವಿದ್ಯಾವಂತರಿಗೆ ಶಿಕ್ಷಣ ಕೊಡಬೇಕು. ಇದನ್ನೆಲ್ಲ ಸಾರುವ ಪವಿತ್ರ ಅಭಿಯಾನ ನಡೆಯುತ್ತಿರೋದು ಸಂತಸದ ಸಂಗತಿ. ಈ ಅಭಿಯಾನವನ್ನ ಮುನ್ನಡೆಸುವ ಮೂಲಕ ನಮ್ಮ ನಮ್ಮ ಜವಾವ್ದಾರಿಯನ್ನು ಮೆರೆಯಬೇಕು. ನಮ್ಮ ಸಂಸ್ಕೃತಿ ಜಗತ್ತಿನಲ್ಲೇ ಒಳ್ಳೆ ಸಂಸ್ಕೃತಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: