ಮೈಸೂರು

ಡಿಪೋದಲ್ಲಿ ಅಳವಡಿಸಲಾಗಿದ್ದ ವಾಲ್ಮೀಕಿ ಭಾವಚಿತ್ರತೆರವುಗೊಳಿಸಿದ್ದಕ್ಕೆ ಪ್ರತಿಭಟನೆ

ಮೈಸೂರು,ಡಿ.19:- ಮೈಸೂರು ವಿಭಾಗದ ಕ.ರಾ.ರ.ಸಾ. ನಿಗಮದ ಡಿಪೋದಲ್ಲಿ ಅಳವಡಿಸಲಾಗಿದ್ದ ವಾಲ್ಮೀಕಿಯವರ ಭಾವಚಿತ್ರವನ್ನು ಏಕಾಏಕಿ ತೆರವುಗೊಳಿಸಲಾಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ನಾಯಕರ ಹಿತ ರಕ್ಷಣಾ ವೇದಿಕೆಯ ಕಾರ್ಯಕರ್ತರು ಇಂದು ಬೆಳಿಗ್ಗೆ ಬನ್ನಿಮಂಟಪದಲ್ಲಿರುವ ಡಿಪೋ ಮುಂಭಾಗ ಪ್ರತಿಭಟನೆ ನಡೆಸಿದರು.

ಈ ಸಂಧರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ದ್ಯಾವಪ್ಪ ನಾಯಕ ಮೈಸೂರು ವಿಭಾಗದ ನಿಯಂತ್ರಣಾಧಿಕಾರಿ ಅಶೋಕ್ ಕುಮಾರ್ ಅವರು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಡಿಪೋಗಳಲ್ಲಿ ಇರಿಸಿರುವ ವಾಲ್ಮೀಕಿಯವರ ಭಾವಚಿತ್ರಗಳನ್ನು ತೆರವುಗೊಳಿಸುವಂತೆ ಆದೇಶಿಸಿದ್ದ ಹಿನ್ನೆಲೆಯಲ್ಲಿ ಈಗಾಗಲೇ ಹುಣಸೂರು ಮತ್ತು ಮತ್ತೆರಡು ಡಿಪೋಗಳಲ್ಲಿ ಭಾವಚಿತ್ರಗಳನ್ನು ತೆರವು ಮಾಡಲಾಗಿದೆ. ಇದು ನೌಕರರ ನಡುವೆ ಮತ ಭೇದ ತೋರುವ ತಾರತಮ್ಯವಾಗಿದೆ ಎಂದು ಆರೋಪಿಸಿದರು. ಅಶೋಕ್ ಕುಮಾರ್ ಅವರ ಈ ವರ್ತನೆ ಖಂಡನೀಯ. ಅವರ ಈ ನಿರ್ಣಯಕ್ಕೆ ನಿಖರ ಕಾರಣ ಏನು ಎಂಬುದನ್ನು ಮೊದಲು ಅವರು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದ ದ್ಯಾವಪ್ಪನಾಯಕ ಈ ಕೂಡಲೇ ಇಲಾಖೆಯ ಉನ್ನತಾಧಿಕಾರಿಗಳು ಈ ತೆರವು ಕಾರ್ಯದ ಕಡೆ ಗಮನ ಹರಿಸಿ, ತನಿಖೆಯನ್ನು ನಡೆಸಿ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಹುಣಸೂರು, ಮಧುಮತಿ ಆರ್, ರಮ್ಮನಹಳ್ಳಿ ಜವರಪ್ಪ, ಮಂಜಯ್ಯ, ಯಶವಂತ್, ಮಹಂತೇಶ್ ಸೇರಿದಂತೆ ಹಲವಾರು ನಾಯಕ ಜನಾಂಗದ ಮುಖಂಡರು ಪಾಲ್ಗೊಂಡಿದ್ದರು.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: