ಪ್ರಮುಖ ಸುದ್ದಿಮೈಸೂರು

ಭಾಷೆ ಉಳಿಸಲು ಬೆಳಸಲು ‘ಕನ್ನಡ’ ಬಳಸಿ : ಸಾಹಿತಿ ರಾಗೌ ಕರೆ

ಮೈಸೂರು, ಡಿ.19 : ಇತ್ತೀಚಿನ ದಿನಗಳಲ್ಲಿ ಕನ್ನಡ ಅಂಕಿ ಬಳಕೆ ಮರೆಯಾಗುತ್ತಿರುವ ಅಪಾಯ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲರೂ ಕನ್ನಡ ಅಂಕಿ ಬಳಕೆಗೆ ಆದ್ಯತೆ ನೀಡಬೇಕೆಂದು ಹಿರಿಯ ಸಾಹಿತಿ ಡಾ. ರಾಗೌ ಸಲಹೆ ನೀಡಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸಂವಹನ ಪ್ರಕಾಶನ ಹೊರತಂದಿರುವ 2019ರ ‘ಕನ್ನಡ ವರ್ಣರಂಜಿತ ದಿನದರ್ಶಿಕೆ’ ಬಿಡುಗಡೆಗೊಳಿಸಿ ನಂತರ ಮಾತನಾಡಿದ ಅವರು, ಕನ್ನಡದ ಬೆಳವಣಿಗೆ ದೃಷ್ಟಿಯಿಂದಲೂ ಕನ್ನಡ ಅಂಕಿ ಬಳಕೆ ಅಗತ್ಯವಿದೆ. ಇನ್ನು ಕನ್ನಡ ಅಂಕಿ ಬಳಕೆ ನಮಗೆ ಹೊಸತೇನಲ್ಲ. ಹಿಂದಿ ಭಾಷೆ ಬಿಟ್ಟರೆ, ತನ್ನದೇ ಆದ ಅಂಕಿ ಹೊಂದಿರುವ ಭಾರತೀಯ ಭಾಷೆಗಳಲ್ಲಿ ಕನ್ನಡವೂ ಪ್ರಮುಖವಾದುದಾಗಿದ್ದು, ಈ ಹಿಂದೆ ವಿಜಯನಗರದ ಅರಸರು, ಮೈಸೂರು ಒಡೆಯರ್‌ಗಳು ಎಲ್ಲರೂ ಕನ್ನಡದ ಅಂಕಿಯನ್ನೇ ಬಳಸಿದ್ದು, ಈಗ ಅದು ಮರೆಯಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಎಲ್ಲರೂ ಕನ್ನಡದ ಅಂಕಿಗೆ ಪುನಶ್ಚೇತನ ನೀಡಬೇಕಾಗಿದೆ ಎಂದು ಮನವಿ ಮಾಡಿದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಾಶಿಸುವ ಮೂಲಕ ಕನ್ನಡ ಓದುಗರಿಗೆ ತನ್ನದೇ ಸೇವೆ ಸಲ್ಲಿಸುತ್ತಿರುವ ಸಂವಹನ ಪ್ರಕಾಶನವು ಹಲವು ವರ್ಷಗಳಿಂದ ಕನ್ನಡ ಪ್ರೋತ್ಸಾಹಕ್ಕಾಗಿ ದಿನದರ್ಶಿಕೆ ಹೊರತರುತ್ತಿರುವುದು ಪ್ರಶಂಸನೀಯ, ಅಲ್ಲದೇ ಕ್ಯಾಲೆಂಡರ್ ನಲ್ಲಿ ಹಲವು ಪ್ರಸಿದ್ಧ ಸಾಹಿತಿಗಳ ಸೂಕ್ತಿಗಳನ್ನು ಹಾಕಲಾಗಿದ್ದು, ಕನ್ನಡ ಸಂಖ್ಯೆಗಳನ್ನು ಪ್ರಚೂರಗೊಳಿಸುವ ಹೆಚ್ಚಿನ ಕಾರ್ಯವಾಗಬೇಕೆಂದು ಆಶಿಸಿದರು.

ಈ ಸಂದರ್ಭದಲ್ಲಿ ಪ್ರಕಾಶನದ ಲೋಕಪ್ಪ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: