ಕರ್ನಾಟಕ

ಹತ್ತು ವರ್ಷದ ಮಗಳಿಗೆ ಮದುವೆ ಮಾಡಲು ಹೊರಟ ತಾಯಿ-ಪ್ರಿಯಕರನ ಬಂಧನ

ಬೆಂಗಳೂರು: ಹತ್ತು ವರ್ಷದ ಬಾಲಕಿಗೆ ಆಕೆಯ ತಾಯಿಯೇ ಕಿರುಕುಳ ನೀಡಿ ವಯಸ್ಸಾದ ತನ್ನ ಪ್ರಿಯಕರನ ಜೊತೆ ಮದುವೆ ಮಾಡಲು ಯತ್ನಿಸಿದ ಪ್ರಕರಣವನ್ನು ಬೇಧಿಸಿರುವ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ.

ಮಂಡ್ಯ ಮೂಲದ ರತ್ನ ಎಂಬಾಕೆ ತಾನು ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿ ಮಂಜು ಎಂಬ ವ್ಯಕ್ತಿಯೊಂದಿಗೆ ಮದುವೆಯಾಗುವಂತೆ ಒತ್ತಾಯಿಸುತ್ತಿಳು ಎಂದು ಆಕೆಯ ಮಗಳು ಹತ್ತು ವರ್ಷದ ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ.

ಆರೋಪಿ ಮಂಜು ಮೇಲೆ ಮಂಡ್ಯ ಜಿಲ್ಲೆಯ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಕೊಲೆ ಕೇಸು ಬಾಕಿ ಇದ್ದು, ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲೂ ಈತ ಹಲವಾರು ಪ್ರಕರಣದಲ್ಲಿ ಬೇಕಾಗಿದ್ದ ವ್ಯಕ್ತಿ ಎಂದು ತಿಳಿದುಬಂದಿದೆ.

ಬಾಲಕಿ ಅಪಹರಣ; ಮದುವೆಯಾಗುವಂತೆ ಪೀಡನೆ

ಬಾಲಕಿ ನೀಡಿರುವ ಹೇಳಿಕೆ ಪ್ರಕಾರ, ಶಾಲೆಯಲ್ಲಿ ಓದುತ್ತಿದ್ದ ಬಾಲಕಿಯನ್ನು ಮಕ್ಕಳ ದಿನಾಚರಣೆ ದಿನವೇ “ನಿಮ್ಮ ತಾತ ಮೃತಪಟ್ಟಿದ್ದಾರೆ” ಎಂದು ಹೇಳಿ ಕರೆದುಕೊಂಡು ಹೋದ ಆರೋಪಿ ಮಂಜು, ನಂತರ ಆಕೆಯನ್ನು ಅಪಹರಿಸಿ ಮಂಡ್ಯದ ಲಾಡ್ಜ್’ವೊಂದರಲ್ಲಿ ತಿಂಗಳ ಕೂಡಿ ಹಾಕಿ ಮದುವೆಯಾಗುವಂತೆ ಪೀಡಿಸಲಾಗಿದೆ.

ನಂತರ ಮಲೈಮಹದೇಶ‍್ವರ ಬೆಟ್ಟಕ್ಕೆ ಕರೆದೊಯ್ದು ಮದುವೆ ಮಾಡುವ ಪ್ರಯತ್ನ ಮಾಡಲಾಗಿದೆ. ಆದರೆ ಬಾಲಕಿ ತೀವ್ರ ಪ್ರತಿರೋಧ ತೋರಿಸಿದಾಗ, ಸಾರ್ವಜನಿಕರಿಗೆ ತಿಳಿಯಬಹುದು ಎಂದು ಅಲ್ಲಿಂದ ಕಾಲ್ಕಿತ್ತ ಆರೋಪಿಗಳು, ಬೆಂಗಳೂರಿನ ಮಲ್ಲಸಂದ್ರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸ ಮಾಡಲು ಆರಂಭಿಸಿದ್ದಾರೆ.

ಬಾಲಕಿಯ ಸಹಾಯಕ್ಕೆ ಬಂದ ಮನೆ ಮಾಲಕಿ:

ಬಾಡಿಗೆ ಮನೆಯಲ್ಲಿ ತಾಯಿಯೊಂದಿಗೆ ವಾಸವಿದ್ದ ಬಾಲಕಿಯನ್ನು ನಿತ್ಯ ಪೀಡಿಸುತ್ತಿದ್ದ ಶಬ್ದ ಕೇಳಿಸಿಕೊಂಡಿದ್ದ ಮನೆಯ ಮಾಲಕಿ ಜಯಲಕ್ಷ್ಮಮ್ಮ ಅವರು, ಬಾಲಕಿಯನ್ನು ವಿಚಾರಿಸಿದಾಗ ವಿಷಯ ಬೆಳಕಿಗೆ ಬಂದಿದೆ.

ನೆರವಿಗೆ ಬಂದ ಜಯಲಕ್ಷ್ಮಮ್ಮ ಅವರು, ಸಮಯ ನೋಡಿ ಬಾಲಕಿಗೆ 200 ರೂ. ಹಣ ನೀಡಿ ಊರಿನ ಬಸ್ಸು ಹತ್ತಿಸಿದ್ದಾರೆ. ಊರಿಗೆ ಬಂದ ಬಾಲಕಿ ತಂದೆಯ ಬಳಿ ಬಂದು ಊರಿನವರಿಗೆ ವಿಷಯ ತಿಳಿಸಿದ್ದಾಳೆ.

ಪೀಣ್ಯ ಪೊಲೀಸರ ಕಾರ್ಯಾಚರಣೆ:

ಮಾನವಹಕ್ಕು ಹೋರಾಟಗಾರ ಅಂದಾನಿ ಅವರ ನೆರವಿನೊಂದಿಗೆ ಗ್ರಾಮಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಳ ಬೆನ್ನು ಹತ್ತಿದ ಬೆಂಗಳೂರಿನ ಪೀಣ್ಯ ಪೊಲೀಸರು, ಮೊದಲು ಬಾಲಕಿಯ ತಾಯಿ ರತ್ನಾಳನ್ನು ಬಂಧಿಸಿದ್ದಾರೆ. ನಂತರ ಆಕೆಯ ಪ್ರಿಯಕರ ಮಂಜುನನ್ನು ಬಂಧಿಸಿದ್ದು, ಕೋರ್ಟ್‍ಗೆ ಹಾಜರುಪಡಿಸಿದ್ದಾರೆ.

ಕೋರ್ಟ್‍ನಲ್ಲಿ ಬಾಲಕಿ ತನ್ನ ತಾಯಿ ಮತ್ತು ಆರೋಪಿ ಮಂಜು ನೀಡಿದ ಹಿಂಸೆಯ ಕುರಿತು ಸಮಗ್ರ ಮಾಹಿತಿ ನೀಡಿ, ತನ್ನ ತಾಯಿಯ ಜೊತೆ ಹೋಗಲು ನಿರಾಕರಿಸಿದ್ದಾಳೆ ಎಂದು ತಿಳಿದು ಬಂದಿದೆ. ಪೊಲೀಸರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ಮುಂದಿನ ಕ್ರಮ ಜರುಗಿಸಿದ್ದಾರೆ.

ಆದರೆ, ಸತತ ಕಿರುಕುಳ ಅನುಭವಿಸಿದ ಬಾಲಕಿ ಭಯಗೊಂಡಿದ್ದು ಶಾಲೆಗೆ ಮರಳಲು ನಿರಾಕರಿಸಿದ್ದಾಳೆ. ಆರೋಪಿ ಮಂಜುವನ್ನು ಪೊಲೀಸರು ಬಂಧಿಸಿದ ಸುದ್ದಿ ತಿಳಿದ ನಂತರ ಬಾಲಕಿ ಕೊಂಚ ನಿರಾಳವಾದಂತೆ ಕಂಡುಬಂದಳು. ಆದರೆ, ಹಳೆಯ ಶಾಲೆಗೆ ಮರಳಲು ನಿರಾಕರಿಸಿ ಹೊಸ ಶಾಲೆಗೆ ಹೋಗುವುದಾಗಿ ತಿಳಿಸಿದ್ದಾಳೆ.

Leave a Reply

comments

Related Articles

error: