Uncategorized

ಸಂಭಾವ್ಯ ಸಾಲ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಒತ್ತು ನೀಡಿ: ಯಾಲಕ್ಕಿಗೌಡ

ಮಂಡ್ಯ (ಡಿ.20): ನಬಾರ್ಡ್ ಸಿದ್ದಪಡಿಸಿರುವ ಸಂಭಾವ್ಯ ಸಾಲ ಯೋಜನೆಯನ್ನು ಜಿಲ್ಲೆಯ ಎಲ್ಲಾ ಬ್ಯಾಂಕ್ ಅಧಿಕಾರಿಗಳು ಯಶಸ್ವಿ ಅನುಷ್ಟಾನ ಮತ್ತು ಗುರಿಸಾಧನೆಗೆ ಪೂರ್ಣ ಒತ್ತು ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣ ಅಧಿಕಾರಿ ಯಾಲಕ್ಕಿಗೌಡ ಅವರು ತಿಳಿಸಿದ್ದಾರೆ.

ಮಂಡ್ಯ ನಗರದ ವಿಜಯ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಕೇಂದ್ರದಲ್ಲಿ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್)ನ 2019-20 ಆರ್ಥಿಕ ವರ್ಷಕ್ಕೆ ಸಿದ್ಧಪಡಿಸಿದ ಯೋಜನೆಯನ್ನು ಬಿಡುಗಡೆಗೊಳಿಸಿ ಮಾತನಾಡಿ ಅವರು ನಬಾರ್ಡ್ ಸಿದ್ದಪಡಿಸಿರುವ ಸಂಭಾವ್ಯ ಸಾಲ ಯೋಜನೆ ಜಿಲ್ಲೆಯ ಅಭಿವೃದ್ಧಿಯ ಆಧ್ಯತಾ ಕ್ಷೇತ್ರದ ಮೇಲೆ ಸಾಕಷ್ಟು ಬೆಳಕು ಚೆಲ್ಲಿರುವುದು ಪ್ರಶಂಸನೀಯ ಪ್ರಯತ್ನ ಎಂದರು.

ನಬಾರ್ಡ್‍ನ ಜಿಲ್ಲಾ ಉಪ ಮಹಾಪ್ರಬಂಧಕರಾದ ಟಿ.ಸುಧೀರ್ ಅವರು ಮಾತನಾಡಿ ನಬಾರ್ಡ್ ಪ್ರತಿ ವರ್ಷವು ಸಂಭಾವ್ಯ ಸಾಲ ಯೋಜನೆಯನ್ನು ಸಿದ್ದಪಡಿಸುತ್ತದೆ. ಜಿಲ್ಲೆಯಲ್ಲಿನ ಹಾಲಿ ಇರುವ ಮೂಲಭೂತ ಸೌಕರ್ಯಗಳು, ಆರ್ಥಿಕ ಮತ್ತು ಹಣಕಾಸು ವ್ಯವಸ್ಥೆ, ಕೃಷಿ ಉತ್ಪಾದಕತೆ, ಬೆಳೆ ಸಾಲ, ಕೃಷಿ ಕ್ಷೇತ್ರದ ಮೂಲಭೂತ ಸೌಕರ್ಯಗಳು, ಸಣ್ಣ, ಅತಿಸಣ್ಣ ಮಧ್ಯಮಕೈಗಾರಿಕೆ ಸ್ಥಾಪನೆ, ಶಿಕ್ಷಣ, ವಸತಿ ಹೀಗೆ ಹಲವು ಕ್ಷೇತ್ರಗಳಲ್ಲಿ ಅಧ್ಯಯನ ಮಾಡಿ ಈ ಯೋಜನೆ ಸಿದ್ದಪಡಿಸಲಾಗಿದೆ. ಲೀಡ್ ಬ್ಯಾಂಕ್ ಈ ಸಂಭಾವ್ಯ ಸಾಲ ಯೋಜನೆ ಆಧಾರದ ಮೇಲೆ ಜಿಲ್ಲೆಯ ಬ್ಯಾಂಕ್‍ಗಳಿಗೆ ಮುಂದಿನ ವರ್ಷದ ಸಾಲ ವಿತರಣೆ ಗುರಿ ಸಿದ್ದಪಡಿಸುತ್ತದೆ ಎಂದು ತಿಳಿಸಿದರು.

2019-20ರ ರೂ 4821.87 ಕೋಟಿ ಸಂಭಾವ್ಯ ಸಾಲ ಯೋಜನೆಯು 2018-19ರ ಜಿಲ್ಲಾ ಸಾಲ ಯೋಜನೆಗಿಂತ ರೂ. 1132.32 ಕೋಟಿ ಹೆಚ್ಚಾಗಿದೆ. ಈ ಯೋಜನೆಯಲ್ಲಿ ಕೃಷಿ ಕ್ಷೇತ್ರಕ್ಕೆ ರೂ 3176.26 ಕೋಟಿ, ಕೃಷಿ ಮೂಲಭೂತ ಸೌಕರ್ಯಗಳಿಗೆ ರೂ 812.30ಕೋಟಿ, ಸಣ್ಣ, ಅತಿಸಣ್ಣ ಮತ್ತು ಮಧ್ಯಮಕೈಗಾರಿಕಾ ಕ್ಷೇತ್ರಕ್ಕೆ ರೂ 433.26 ಕೋಟಿ, ವಸತಿ ಕ್ಷೇತ್ರಕ್ಕೆ ರೂ 265.60 ಕೋಟಿ ಹಾಗೂ ಶಿಕ್ಷಣ ಸಾಲಗಳಿಗೆ 95.40 ಕೋಟಿ ರೂಗಳ ಸಾಲ ವಿತರಣೆಗೆ ಅವಕಾಶ ಇದೆ ಎಂದು ಹೇಳಿದರು.

ವಿಜಯ ಬ್ಯಾಂಕ್‍ನ ಕ್ಷೇತ್ರೀಯ ಪ್ರಬಂಧಕರಾದ ಸತ್ಯನಾರಾಯಣನಾಯಕ್, ರಿಸರ್ವ್ ಬ್ಯಾಂಕ್ ಅಧಿಕಾರಿ ಸರೋಜ್ ಭಾಟಿಯ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕರಾದ ಪ್ರಭುದೇವ್, ಬ್ಯಾಂಕ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. (ಎನ್.ಬಿ)

Leave a Reply

comments

Related Articles

error: