ದೇಶ

ಬಾಲಕಿಗೆ ಬೆಂಕಿ ಹಚ್ಚಿದ ಪ್ರಕರಣ: ಬಾಲಕಿ ಸಾವು

ನವದೆಹಲಿ,ಡಿ.20-ದುಷ್ಕರ್ಮಿಗಳಿಬ್ಬರ ಕೃತ್ಯಕ್ಕೆ ಬಲಿಯಾಗಿದ್ದ ಶಾಲಾ ಬಾಲಕಿ ಇಂದು ಸಾವನ್ನಪ್ಪಿದ್ದಾಳೆ. ಎರಡು ದಿನಗಳ ಹಿಂದೆ ಬೈಕ್ ನಲ್ಲಿ ಬಂದಿದ್ದ ಅಪರಿಚಿತ ದುಷ್ಕರ್ಮಿಗಳಿಬ್ಬರು ಶಾಲೆಯಿಂದ ಮನೆಗೆ ತೆರಳುತ್ತಿದ್ದ ಬಾಲಕಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಆಕೆ ಇಂದು ಇಲ್ಲಿನ ಸಫ್ದರ್‌ ಜಂಗ್‌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ನೌಮೀಲ್‌ನ ಅಸ್ರಫಿ ದೇವಿ ಛಿಡ್ಡಾ ಸಿಂಗ್ ಇಂಟರ್ ಕಾಲೇಜಿನಲ್ಲಿ ಹತ್ತನೇ ತರಗತಿ ಓದುತ್ತಿದ್ದ ಸಂಜಲಿ ಕುಮಾರಿ (15) ಮೃತಪಟ್ಟ ಬಾಲಕಿ. ಆಗ್ರಾದ ಹೊರವಲಯದಲ್ಲಿ ಈ ಘಟನೆ ನಡೆದಿತ್ತು.

ಸುಟ್ಟಗಾಯಗಳಾದ ಬಾಲಕಿಯನ್ನು ಮೊದಲು ಎಸ್.ಎನ್.ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶೇಕಡ 70ರಷ್ಟು ಸುಟ್ಟ ಗಾಯಗಳಾಗಿರುವ ಬಾಲಕಿಯನ್ನು ನಂತರ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಬಾಲಕಿ ಇಂದು ಸಾವನ್ನಪ್ಪಿದ್ದಾಳೆ.

ದುಷ್ಕರ್ಮಿಗಳು ಬಾಲಕಿ ಮೇಲೆ ಯಾಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು ಎಂಬುದು ಇನ್ನು ತಿಳಿದಿಲ್ಲ. ದುಷ್ಕರ್ಮಿಗಳನ್ನು ಸೆರೆ ಹಿಡಿಯುವ ಪೊಲೀಸರ ಯತ್ನ ಈವರೆಗೆ ಯಶಸ್ವಿಯಾಗಿಲ್ಲ. (ಎಂ.ಎನ್)

 

Leave a Reply

comments

Related Articles

error: