ಪ್ರಮುಖ ಸುದ್ದಿಮೈಸೂರು

ಡಿ.23,24ರಂದು ಪಿರಿಯಾಪಟ್ಟಣದಲ್ಲಿ ಮೈಸೂರು ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನ

ವಿವಿಧ ಗೋಷ್ಠಿಗಳಲ್ಲಿ ಝೇಂಕರಿಸಲಿದೆ ನಾಡು, ನುಡಿ, ನೆಲ-ಜಲ ವಿಚಾರಧಾರೆಗಳು

ಮೈಸೂರು,ಡಿ.20 : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ 16ನೇ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಿ.23,24ರಂದು ಪಿರಿಯಾಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಂದು ಬೆಳಗ್ಗೆ 8.30ಕ್ಕೆ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಶಾಸಕ ಕೆ.ಮಹದೇವ್, ಗೊರಳ್ಳಿ ಜಗದೀಶ್ ಇರಲಿದ್ದು, ನಂತರ ಸಮ್ಮೇಳನಾಧ್ಯಕ್ಷ ಇಂದೂಧರ ಹೊನ್ನಾಪುರ ಅವರ ಮೆರವಣಿಗೆ ಜಿ.ಪಂ. ಅಧ್ಯಕ್ಷ ನಯಿಮಾ ಸುಲ್ತಾನ್ ಚಾಲನೆ ನೀಡುವರು. ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಸಾಗಿ ವೇದಿಕೆ ತಲುಪಲಿದೆ ಎಂದು ತಿಳಿಸಿದರು.

ಬೆಳಗ್ಗೆ 10.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಸಮ್ಮೇಳನಕ್ಕೆ ಚಾಲನೆ ನೀಡುವರು. ಸಂಸದ ಪ್ರತಾಪ್ ಸಿಂಹ ಸಚಿವೆ ಜಯಮಾಲ, ಶಾಸಕ ಅಡಗೂರು ವಿಶ್ವನಾಥ್, ತನ್ವೀರ್ ಸೇಠ್, ಡಾ.ಯತೀಂದ್ರ ಸಿದ್ದರಾಮಯ್ಯ ಇನ್ನಿತರ ಗಣ್ಯರು ಹಾಜರಿರಲಿದ್ದಾರೆ.

ಮಧ್ಯಾಹ್ನ 2.30ಕ್ಕೆ ‘ಮೈಸೂರು ಜಿಲ್ಲಾ ದರ್ಶನ’ ವಿಷಯವಾಗಿ ಮೊದಲ ಗೋಷ್ಠಿ, ಹಂಪಿ ಕನ್ನಡ ವಿವಿಯ ಡಾ.ಎನ್.ಚಿನ್ನಸ್ವಾಮಿ ಸೋಸಲೆ, ಪ್ರೊ.ಎಸ್.ಜಿ.ಚೈತ್ರ ಇವರಿಂದ ವಿಷಯ ಮಂಡನೆ. ಸಂಜೆ 4 ಗಂಟೆಗೆ ‘ಪಿರಿಯಾಪಟ್ಟಣ ತಾಲ್ಲೂಕು-ಕನ್ನಡಿ,ಕೈದಿವಿಗೆ’ ವಿಷಯವಾಗಿ ಎರಡನೇ ಗೋಷ್ಠಿಯಲ್ಲಿ ಸಹಾಯಕ ಪ್ರಾಧ್ಯಾಪಕಿ ಡಾ.ಮನಾಪುರ ವಿಜಯಲಕ್ಷ್ಮಿ, ಡಾ.ಎನ್.ಆರ್.ಚಂದ್ರೇಗೌಡ ಅವರಿಂದ. ನಂತರ 5.15 ರಿಂದ ಹಿರಿಯ ಸಾಹಿತಿ ಡಾ.ಜಯಪ್ಪ ಹೊನ್ನಾಳಿ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ.

ಎರಡನೇ ದಿನ : ಡಿ.24ರಂದು ಬೆಳಗ್ಗೆ 10 ಗಂಟೆಯಿಂದ ‘ಜನಪರ ಚಳುವಳಿಗಳು ಮತ್ತು ವರ್ತಮಾನದ ಸವಾಲುಗಳು’ ವಿಚಾರಗೋಷ್ಠಿ

ರೈತ ಮುಖಂಡ ಪ್ರೊ.ಕೆ.ಸಿ.ಬಸವರಾಜು, ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್, ಕುಪ್ಪೆ ನಾಗರಾಜು, ಮೈವಿವಿಯ ಸಹಾಯಕ ಪ್ರಾಧ್ಯಾಪಕಿ ಡಾ.ಎನ್.ಕೆ.ಲೋಲಾಕ್ಷಿ ಇವರುಗಳು ವಿಷಯ ಮಂಡಿಸಲಿದ್ದಾರೆ.

11 ಗಂಟೆಗೆ ‘ಗ್ರಾಮೀಣ ಭಾರತದ –ಪ್ರಚಲಿತ ಸಮಸ್ಯೆಗಳು , ಪ್ರಗತಿಪರ ಚಿಂತಕರಾದ ಡಾ.ವಸಂತಕುಮಾರ ತಿಮಕಾಪುರ, ಡಾ.ಮುಜಾಫರ್ ಅಸ್ಸಾಧಿ, ಎನ್.ಕೇಶವಮೂರ್ತಿ ಮೊದಲಾದವರಿಂದ . ‘ನೀರಾವರಿ ಯೋಜನೆಗಳು’ ವಿಷಯವಾಗಿ ಡಾ.ಗುಬ್ಬಿಗೂಡು ರಮೇಶ್, ಅರ್ಜುನಹಳ್ಳು ಪ್ರಸನ್ನಕುಮಾರ್ ಅವರುಗಳು . ‘ಸಂಸ್ಕೃತಿ ಮತ್ತು ರಾಜಕಾರಣ’ ದ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ಹೆಚ್.ವಿಶ್ವನಾಥ್, ‘ಮಹಿಳೆ-ಸಮಕಾಲೀನ ಸವಾಲುಗಳು’ ವಿಷಯವಾಗಿ ಮಹಿಳಾ ಚಿಂತಕಿ ಅಖಿಲಾ ವಿದ್ಯಾಸಂದ್ರ ಅವರುಗಳು ಮಾತನಾಡುವರು.

ನಂತರ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ,  ‘ಕನ್ನಡ ಮತ್ತು ಹೊಸ ತಲೆಮಾರು ವಿಷಯವಾಗಿ ಗೋಷ್ಠಿ ನಡೆಯಲಿದ್ದು ಹಿರಿಯ ಪತ್ರಕರ್ತ ಮಂಜುನಾಥ ಆದ್ದೆ, ಲೇಖಕ ಶ್ರೀಪಾದ ಭಟ್, ಮುತ್ತುರಾಜು, ಬಿ.ಎಂ. ಚೈತ್ರ ಉಪನ್ಯಾಸ ನೀಡುವರು.

ಸಂಜೆ 6 ಗಂಟೆಗೆ ಸಮ್ಮೇಳನದ ಸಮಾರೋಪ ಸಮಾರಂಭ, ಬೆಟ್ಟದಪುರದ ಸಲಿಲಾಖ್ಯಮಠದ ಚೆನ್ನಬಸವ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಎಸ್.ಜಿ.ಸಿದ್ದರಾಮಯ್ಯ ಅವರಿಂದ ಸಮಾರೋಪ ಭಾಷಣ, ಶಾಸಕ ಕೆ.ಮಹದೇವ ಅಧ್ಯಕ್ಷತೆ. ಸಚಿವ ಸಾ.ರಾ.ಮಹೇಶ್ ಸೇರಿದಂತೆ ಹಲವಾರು ಗಣ್ಯರು ಹಾಜರಿರಲಿದ್ದಾರೆ ಎಂದು ತಿಳಿಸಿದರು.

ಸಾಹಿತಿ ಜಯಪ್ಪ ಹೊನ್ನಾಳಿ, ಕೆ.ಎಸ್.ನಾಗರಾಜು, ರಾಜಶೇಖರ ಕದಂಬ, ಎಂ.ಚಂದ್ರಶೇಖರ್, ಕೆ.ಎಸ್.ಶಿವರಾಂ, ಮಹ್ಮದ್ ಶಫಿ ಇನ್ನಿತರರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: