ಪ್ರಮುಖ ಸುದ್ದಿಮೈಸೂರು

ರೌಡಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾದ ಡಾ.ಸುಬ್ರಹ್ಮಣ್ಯೇಶ್ವರರಾವ್

ಮೈಸೂರಿನಲ್ಲಿ ಮತ್ತೆ ರೌಡಿಸಂ ಮರುಕಳಿಸಿದೆ. ಭಾನುವಾರ ರೋಲ್ ಕಾಲ್ ನೀಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿದ ರೌಡಿ ಶೀಟರ್ ನನ್ನು ಜಯಲಕ್ಮಿಪುರಂ ಠಾಣೆಯ ಪೊಲೀಸರು ಬಂಧಿಸಿದ್ದು, ಇದೀಗ ನಗರ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರರಾವ್ ರೌಡಿಶೀಟರ್ ಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲು  ಮುಂದಾಗಿದ್ದಾರೆ.

ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರರಾವ್ ನಗರದ ಎಲ್ಲ ಠಾಣೆಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಯಾವುದೇ ಏರಿಯಾಗಳಲ್ಲಿ ರೌಡಿಸಂ ನಡೆಯಬಾರದು. ಎಲ್ಲ ಠಾಣೆಗಳ ವ್ಯಾಪ್ತಿಯಲ್ಲಿರುವ ರೌಡಿಶೀಟರ್ ಗಳನ್ನು ಠಾಣೆಗೆ ಕರೆಸಿ ಬುದ್ಧಿ ಹೇಳಿ ಎಚ್ಚರಿಕೆ ನೀಡಿ. ಮತ್ತೆ ಅವರು ರೌಡಿಸಂ ನಡೆಸುತ್ತಿದ್ದರೆ ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಿ, ಕ್ರಮಕೈಗೊಳ್ಳದಿದ್ದಲ್ಲಿ ಠಾಣಾಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂಬ ಎಚ್ಚರಿಕೆ ನೀಡಿದ್ದಾರೆ.

ಯಾವುದೇ ಕಾಲೇಜಿನ ಎದುರು ಪುಂಡುಪೋಕರಿಗಳು ಹುಡುಗಿಯರನ್ನು ಚುಡಾಯಿಸುವುದು ಅಥವಾ ದಾಂಧಲೆ ನಡೆಸುವುದನ್ನು ಮಾಡಬಾರದು.  ಅಂಗಡಿ ಮುಂಗಟ್ಟುಗಳ ಮುಂದೆ ಗುಂಪುಗುಂಪಾಗಿ ನಿಂತು ಗಲಾಟೆ ನಡೆಸುತ್ತಿರುವುದು ಕಂಡು ಬಂದಲ್ಲಿ ತಕ್ಷಣ ಮಾಹಿತಿ ನೀಡಿ, ಅಂಥಹವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಕಳೆದ ತಿಂಗಳಿನಲ್ಲಿ ಕುವೆಂಪುನಗರ ಠಾಣಾವ್ಯಾಪ್ತಿಯಲ್ಲಿ ಕೇಟರಿಂಗ್ ನಲ್ಲಿಯೂ ರೌಡಿಶೀಟರ್ ಗಳು ನುಗ್ಗಿ ದಾಂಧಲೆ ನಡೆಸಿದ್ದರು. ಇದೀಗ ಮತ್ತೆ ಅದೇ ಘಟನೆ ಪುನರಾವರ್ತನೆಯಾಗಿದೆ. ಕೆಲವು ವರ್ಷಗಳ ಹಿಂದೆ ಮಹಿಳೆಯ ಕೊಲೆಯೊಂದರಲ್ಲಿ ಭಾಗಿಯಾಗಿ, 6ತಿಂಗಳು ಶಿಕ್ಷೆ ಅನುಭವಿಸಿ ಹೊರಬಂದ ರೌಡಿಶೀಟರ್  ಭಾನುವಾರ ಎಸ್ ಜೆಇಸಿ ರಸ್ತೆಯಲ್ಲಿರುವ ಕಣ್ಣನ್ ಬೇಕರಿಗೆ ಹೋಗಿದ್ದು, ರೋಲ್ ಕಾಲ್ ನೀಡುವಂತೆ ಕೇಳಿದ್ದಾನೆ ಎನ್ನಲಾಗಿದೆ. ಮಾಲಕ ಕೊಡದಿರುವುದಕ್ಕೆ ಆತನ ತಲೆಗೆ ಪೆಪ್ಸಿ ಬಾಟಲಿಯಿಂದ ಬಲವಾಗಿ ಹೊಡೆದಿದ್ದಾನೆ. ಇದರಿಂದ ತೀವ್ರ ಗಾಯಗೊಂಡಿರುವ ಬೇಕರಿ ಮಾಲಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಕುರಿತಂತೆ ಜಯಲಕ್ಷ್ಮಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರಿನಲ್ಲಿ ಈ ರೀತಿ ಪದೇ ಪದೇ ರೌಟಿಶೀಟರ್ ಗಳ ದಾಂಧಲೆ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರರಾವ್ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಿದ್ದು, ಇನ್ನು ಮುಂದೆ ರೌಡಿಗಳಿಗೆ ಸಿಂಹಸ್ವಪ್ನವಾಗಲಿದ್ದಾರೆ.

Leave a Reply

comments

Related Articles

error: