ಮೈಸೂರು

ತಿ.ನರಸೀಪುರ ಬಸ್ ನಿಲ್ದಾಣದಲ್ಲಿ ಪುಂಡು ಪೋಕರಿಗಳ ಹಾವಳಿ : ಇಲ್ಲ ಭದ್ರತೆ

ಮೈಸೂರು,ಡಿ.20:- ಕೋಟ್ಯಂತರ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ತಿ.ನರಸೀಪುರ ಪಟ್ಟಣದ ಹೈಟೆಕ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಉಂಟಾಗಿದೆ.

ಬಸ್ ನಿಲ್ದಾಣವು ಪಟ್ಟಣದಿಂದ ಹೊರ ವಲಯದಲ್ಲಿರುವ ಕಾರಣ ಪರ ಊರುಗಳಿಗೆ ತೆರಳಲು ರಾತ್ರಿ ವೇಳೆ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ರಾತ್ರಿ ವೇಳೆ ಬಸ್ ನಿಲ್ದಾಣದಲ್ಲಿ ಕುಡುಕರ ಹಾವಳಿ ಹೆಚ್ಚಾಗಿರುವುದರಿಂದ ಮಹಿಳೆಯರಿಗೆ ಭದ್ರತೆಯ ಕೊರತೆ ಎದುರಾಗಿದೆ.

ಬಸ್ ನಿಲ್ದಾಣದಲ್ಲಿ ಪೊಲೀಸ್ ಚೌಕಿ ಇದೆಯಾದರೂ ಅದನ್ನು ಬಳಸಿ ಕೊಳ್ಳುವಲ್ಲಿ ಇಲಾಖೆ ವಿಫಲವಾಗಿದೆ. ಸಾರಿಗೆ ಸಂಸ್ಥೆಯ ಅಧಿಕಾರಿಗಳು ಸಂಬಂಧ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೊಜನವಾಗಿಲ್ಲ. ನಿಲ್ದಾಣದಲ್ಲಿ ಪೊಲೀಸ್ ಭದ್ರತೆ ಇಲ್ಲದ ಕಾರಣ ಪುಂಡುಪೋಕರಿಗಳಿಗೆ ಲಗಾಮು ಇಲ್ಲದಂತಾಗಿದ್ದು ಅವರಾಡಿದ್ದೇ ಆಟವಾಗಿದೆ. ಬಸ್ ನಿಲ್ದಾಣದಲ್ಲಿ ಸಿಸಿಟಿವಿ ಅಳವಡಿಸದ ಹಿನ್ನೆಲೆಯಲ್ಲಿ ರಾತ್ರಿವೇಳೆ ಅನೈತಿಕ ಚಟುವಟಿಕೆಗಳು ಎಗ್ಗಿಲದೆ ನಡೆಯುತಿವೆ. ಶಾಲಾ ಕಾಲೇಜು ಆರಂಭಗೊಳ್ಳುವ ಹಾಗೂ ಬಿಡುವ ವೇಳೆಯಲ್ಲಿ ಬಸ್ ನಿಲ್ದಾಣದಲ್ಲಿ ಪುಂಡಪೋಕರಿಗಳ ಹಾವಳಿ ಮಿತಿಮಿರಿದ್ದು ವಿದ್ಯಾರ್ಥಿನಿಯರಿಗೆ ಮುಜುಗರದ ಸನ್ನಿವೇಶ ಎದುರಾಗುತ್ತಿದೆ.

ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ ಆಟೋದವರು ನಿಲ್ದಾಣ ಮಾಡಿ ಕೊಂಡಿದ್ದು ಇವರಿಂದಲೇ ಕೆಲವು ವೇಳೆ ಅಪರಾಧ ಪ್ರಕರಣಗಳು ಸಂಭವಿಸುತ್ತಿವೆ ಎಂಬುದು ಸಾರಿಗೆ ಇಲಾಖೆ ಅಧಿಕಾರಿಗಳ ದೂರಾಗಿದೆ. ಇತ್ತೀಚೆಗಷ್ಟೆ ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಇಲಾಖಾ ಅಧಿಕಾರಿಗಳೂ ಅವೈಜ್ಞಾನಿಕವಾಗಿ ಟೆಂಡರ್ ನೀಡಿರುವುದು ಕಂಡುಬಂದಿದೆ. ಬಸ್ ನಿಲ್ದಾಣದ ಒಳಗೆ ಪಾರ್ಕಿಂಗ್ಗೆ ಅವಕಾಶ ಕಲ್ಪಿಸಲಾಗಿದೆಯಾದರೂ ನಿಲ್ದಾಣಕ್ಕೆ ಪ್ರವೇಶ ಪಡೆಯುವ ಬಸ್ಗಳು ತಿರುವು ಪಡೆದುಕೊಳ್ಳುವ ವೇಳೆ ಸ್ಥಳಾವಕಾಶದ ಕೊರತೆ ಎದುರಾಗಿದೆ. ಒಟ್ಟಾರೆ ಹೈಟೆಕ್ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ಕೊರತೆ ಸೇರಿದಂತೆ ಹಲವಾರು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಕೊಡಲು ಸಾರಿಗೆ ಇಲಾಖೆ ಹಾಗೂ ತಾಲೂಕು ಆಡಳಿತ ಮುಂದಾಗಬೇಕಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: