ಪ್ರಮುಖ ಸುದ್ದಿ

13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಾಳೆ ಚಾಲನೆ

ರಾಜ್ಯ(ಮಡಿಕೇರಿ) ಡಿ.20 : – ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮಡಿಕೇರಿ ತಾಲೂಕಿನ ನಾಪೋಕ್ಲುವಿನಲ್ಲಿ ಇದೇ ಡಿ.22 ಮತ್ತು 23 ರಂದು ಹಿರಿಯ ಸಾಹಿತಿ ಭಾರದ್ವಾಜ್ ಕೆ. ಆನಂದ ತೀರ್ಥ ಅವರ ಸರ್ವಾಧ್ಯಕ್ಷತೆಯಲ್ಲಿ 13ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಕನ್ನಡ ಹಬ್ಬಕ್ಕಾಗಿ ಭರದ ಸಿದ್ಧತೆ ನಡೆಯುತ್ತಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್, ಜಿಲ್ಲಾ ಸಾಹಿತ್ಯ ಸಮ್ಮೇಳನ ನಾಪೋಕ್ಲುವಿನ ಸರ್ಕಾರಿ ಪದವಿ ಪೂರ್ವ ಕಾಲೇಜ್‍ನ ಪ್ರೌಢಶಾಲಾ ವಿಭಾಗದಲ್ಲಿ ನಡೆಯಲಿದ್ದು, ಡಿ.22ರಂದು ಬೆಳಗ್ಗೆ ತಹಶೀಲ್ದಾರ್ ಕುಸುಮ ಅವರು ರಾಷ್ಟ್ರ ಧ್ವಜಾರೋಹಣ, ನಾಪೋಕ್ಲು ಗ್ರಾಪಂ ಅಧ್ಯಕ್ಷ ಕೆ.ಎ. ಇಸ್ಮಾಯಿಲ್ ನಾಡ ಧ್ವಜ ಮತ್ತು ತಾನು ಪರಿಷತ್ತಿನ ಧ್ವಜಾರೋಹಣ ನೆರವೇರಿಸುವ ಮೂಲಕ ಕನ್ನಡದ ಉತ್ಸವಕ್ಕೆ ಚಾಲನೆ ನೀಡಲಿರುವುದಾಗಿ ತಿಳಿಸಿದರು.

ದ್ವಾರಗಳ ಉದ್ಘಾಟನೆ

ಸಮ್ಮೇಳನದ ಹಿನ್ನೆಲೆಯಲ್ಲಿ ರಚಿಸಲಾಗಿರುವ ಕಲಿಯಾಟ ಅಜ್ಜಪ್ಪ ದ್ವಾರ, ಮಂಡೀರ ಜಯಾ ಅಪ್ಪಣ್ಣ ದ್ವಾರ, ಕಾರ್ಗಿಲ್ ವೀರ ಯೋಧ ದಿ. ದೇವಪ್ಪ ಬಿ.ಎಂ. ದ್ವಾರ, ದಿ. ಪಿ.ಪಿ. ಮಹಮ್ಮದ್ ಹಾಜಿ ದ್ವಾರ, ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಮಹಾದ್ವಾರಗಳನ್ನು ಗಣ್ಯರು ಬೆಳಗ್ಗೆ 8.30 ಕ್ಕೆ ಉದ್ಘಾಟಿಸಲಿದ್ದಾರೆ ಎಂದರು.

ಸಾಂಸ್ಕೃತಿಕ ಮೆರವಣಿಗೆ

ಹಳೇ ತಾಲೂಕು ನಾಪೋಕ್ಲುವಿನಿಂದ ಬೆಳಗ್ಗೆ 9 ಗಂಟೆಗೆ ಸಮ್ಮೇಳನಾಧ್ಯಕ್ಷರಾದ ಭಾರದ್ವಾಜ್ ಕೆ. ಆನಂದ ತೀರ್ಥ ಅವರ ಮೆರವಣಿಗೆ ವೈವಿಧ್ಯಮಯ ಕಲಾ ತಂಡಗಳೊಂದಿಗೆ ನಡೆಯಲಿದ್ದು, ಮೆರವಣಿಗೆಯನ್ನು ಜಿಲ್ಲಾಧಿಕಾರಿ ಶ್ರೀವಿದ್ಯಾ ಉದ್ಘಾಟಿಸಲಿದ್ದಾರೆ ಎಂದರು. ಮೆರವಣಿಗೆಯ ಬಳಿಕ ಪುಸ್ತಕ, ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆ ಮತ್ತು ಸುದ್ದಿಮನೆ ಉದ್ಘಾಟನೆ ಕಾರ್ಯಕ್ರಮ ಆಯೋಜಿತವಾಗಿದೆ ಎಂದರು.

ಸಮ್ಮೇಳನ ಉದ್ಘಾಟನೆ -ಶ್ರೀ ಜಗದಾತ್ಮಾನಂದಜೀ ಮಹಾರಾಜ್ ಸಭಾಂಗಣದ ಶ್ರೀ ಮಹಾಬಲೇಶ್ವರ ಭಟ್ ಪ್ರಧಾನ ವೇದಿಕೆಯಲ್ಲಿ ನಡೆಯುವ ಸಮ್ಮೇಳನವನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಮನು ಬಳಿಗಾರ್ ಉದ್ಘಾಟಿಸಲಿದ್ದಾರೆ. ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು ಸಾನಿಧ್ಯ ವಹಿಸಲಿದ್ದಾರೆ. ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಆಶಯ ನುಡಿಗಳನ್ನಾಡಲಿದ್ದು, ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಕೇಚಮಾಡ ಸುಬ್ಬಮ್ಮ ತಿಮ್ಮಯ್ಯ ಮಾತನಾಡಲಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ.ಎಸ್.ಜಿ. ಸಿದ್ದರಾಮಯ್ಯ ವಿವಿಧ ಕೃತಿಗಳನ್ನು ಬಿಡುಗಡೆಮಾಡಲಿದ್ದಾರೆ. ಸ್ಮರಣ ಸಂಚಿಕೆಯನ್ನು ಸಾಹಿತಿ  ಡಾ. ಭೈರಮಂಗಲ ರಾಮೇಗೌಡ ಅನಾವರಣಗೊಳಿಸಿದ ಬಳಿಕ ಸಮ್ಮೇಳನಾಧ್ಯಕ್ಷರು ಸಭಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಸಮ್ಮೇಳನದಂದು ಮಧ್ಯಾಹ್ನ 1.30ಕ್ಕೆ ಕನ್ನಡ ಭಾವ ಸಂಗಮ ಕಾವ್ಯ ಕುಂಚ ಗಾಯನ ಕಾರ್ಯಕ್ರಮ ಆಯೋಜಿತವಾಗಿದೆ. ಇದಾದ ಬಳಿಕ ಹಿರಿಯ  ಸಾಹಿತಿ ಕಿಗ್ಗಾಲು ಗಿರೀಶ್ ಅಧ್ಯಕ್ಷತೆಯಲ್ಲಿ ಕವಿ ಗೋಷ್ಠಿ, ಸಂಜೆ 4.30ಕ್ಕೆ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಅಧ್ಯಕ್ಷತೆಯಲ್ಲಿ ‘ಪುಸ್ತಕ ಅವಲೋಕನ’ ಕಾರ್ಯಕ್ರಮ, ಸಂಜೆ 5.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿತವಾಗಿದೆ ಎಂದು ತಿಳಿಸಿದರು.

ಸಮ್ಮೇಳನದ ಎರಡನೇ ದಿನವಾದ ಡಿಸೆಂಬರ್ 23 ರಂದು ಬೆಳಗ್ಗೆ 9.30ಕ್ಕೆ ‘ಜನಪದೋತ್ಸವ’ ನಡೆಯಲಿದ್ದು, ಬೆಳಗ್ಗೆ 10.15ಕ್ಕೆ ಸಾಹಿತಿ ಗೀತಾ ಬಾವೆ ಅಧ್ಯಕ್ಷತೆಯಲ್ಲಿ ‘ಮಹಿಳಾ ಗೋಷ್ಠಿ’ ಆಯೋಜನೆಯಾಗಿದೆ. ಬಳಿಕ ಹಿರಿಯ ಸಾಹಿತಿ ನಾಗೇಶ್ ಕಾಲೂರು ಅಧ್ಯಕ್ಷತೆಯಲ್ಲಿ ‘ಸಾಹಿತ್ಯ ಮತ್ತು ಬದುಕು’ ವಿಷಯದ ಕುರಿತು ವಿಚಾರ ಗೋಷ್ಠಿ ನಡೆಯಲಿದೆ. ವಿಶೇಷವಾಗಿ ಮಧ್ಯಾಹ್ನ 1.15 ಗಂಟೆಗೆ ‘ಕನ್ನಡ ಜನಪದ ಗೀತೆಗಳು’ ಕಾರ್ಯಕ್ರಮ ನಡೆಯಲಿದ್ದು, ಇದನ್ನು ಶಾಂತಳ್ಳಿ ಗಣೇಶ್ ಉದ್ಘಾಟಿಸಲಿದ್ದಾರೆ, ಸಮ್ಮೇಳನದ ಕೊನೆಯ ಗೋಷ್ಠಿ ‘ಆಧುನಿಕ ಕೃಷಿಯಲ್ಲಿ ಬದುಕು’ ವಿಷಯದ ಮೇಲೆ ಪ್ರೊ. ಕಲ್ಯಾಟಂಡ ಪೂಣಚ್ಚ ಅಧ್ಯಕ್ಷತೆಯಲ್ಲಿ ಮಧ್ಯಾಹ್ನ 2 ಗಂಟೆಗೆ ನಡೆಯಲಿದ್ದು, ಬಹಿರಂಗ ಅಧಿವೇಶನ ತನ್ನ ಅಧ್ಯಕ್ಷತೆಯಲ್ಲೆ 3.30 ಗಂಟೆಗೆ ನಡೆಯಲಿದೆಯೆಂದು ಲೋಕೇಶ್ ಸಾಗರ್ ತಿಳಿಸಿದರು.

ಸಮಾರೋಪ ಸಮಾರಂಭ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿಗಳ ಸಾನಿಧ್ಯದಲ್ಲಿ ಸಂಜೆ 4 ಗಂಟೆಗೆ ನಡೆಯಲಿದೆ. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುತ್ತದೆ ಮತ್ತು ಪ್ರಾಕೃತಿಕ ವಿಕೋಪದ ಸಂದರ್ಭ ಸಂಕಷ್ಟಗಳ ಬಗೆಹರಿಕೆಗೆ ಶ್ರಮಿಸಿದ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರಿಗೆ ವಿಶೇಷ ಸನ್ಮಾನವನ್ನು ಏರ್ಪಡಿಸಲಾಗಿದೆ. ಇದರೊಂದಿಗೆ ಪ್ರಾಕೃತಿಕ ವಿಕೋಪ ಸಂದರ್ಭ ಕರ್ತವ್ಯ ನಿರ್ವಹಿಸಿದ ಕೊಡಗು ಚೆಸ್ಕಾಂನ ಎಲ್ಲಾ ಲೈನ್‍ಮ್ಯಾನ್‍ಗಳಿಗೆ ವಿಶೇಷ ಗೌರವಾರ್ಪಣೆ  ನಡೆಯಲಿದೆ ಎಂದರು.

ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುತ್ತಿದ್ದು, ಸಾಹಿತ್ಯ  ಕ್ಷೇತ್ರದಲ್ಲಿ ಸ್ಮೀತಾ ಅಮೃತ್‍ರಾಜ್, ಶಿಲ್ಪಕಲೆಯಲ್ಲಿ ಮಡಿಕೇರಿಯ ರವಿ, ಚಿತ್ರಕಲೆಯಲ್ಲಿ ಕ್ಲಿಫರ್ಡ್ ಗಾಡ್‍ವಿನ್ ಡೆಮೆಲೋ, ಸಮಾಜ ಸೇವೆ ಕ್ಷೇತ್ರದಲ್ಲಿ ಶ್ರೀನಿವಾಸ್‍ರಾವ್, ಸಂಗೀತ ಕ್ಷೇತ್ರದಲ್ಲಿ ಚಕ್ಕೇರ ತ್ಯಾಗರಾಜ್, ನಾಟಕ ಕಲೆ ಕ್ಷೇತ್ರದಲ್ಲಿ ಅಡ್ಡಂಡ ಅನಿತ ಕಾರ್ಯಪ್ಪ, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಸುಧಾಕರ್ ಶೆಟ್ಟಿ, ಶಿಕ್ಷಣ ಕ್ಷೇತ್ರದಲ್ಲಿ ಪೂಜಾರೀರ ಎಂ. ದೇವಕಿ, ಯುವ ಪ್ರತಿಭೆ ಕೆ.ಎಸ್. ಪ್ರಗತಿ,  ಅಂತರಾಷ್ಟ್ರೀಯ ಹಾಕಿ ಆಟಗಾರ ಎಸ್.ವಿ. ಸುನೀಲ್ ಅವರನ್ನು ಸನ್ಮಾನಿಸಲಾಗುವುದು.

ಹಿರಿಯ ಸಾಧಕರಾದ ಬೊಪ್ಪೇರ ಶ್ರೀ ಕಾವೇರಪ್ಪ, ಮಾಧ್ಯಮ ಕ್ಷೇತ್ರದಲ್ಲಿ ಕೆ.ಎಂ. ರಮೇಶ್ ನಾಪೋಕ್ಲು, ವಾದ್ಯ ಸಂಗೀತ ಕ್ಷೇತ್ರದಲ್ಲಿ ಸತೀಶ್, ಉನ್ನತ ಶಿಕ್ಷಣ (ನ್ಯಾಯಶಾಸ್ತ್ರ) ಕ್ಷೇತ್ರದಲ್ಲಿ ಹೊಸೋಕ್ಲು ಸಚಿನ್, ಬುಡಕಟ್ಟು ಜನಪದ ಕ್ಷೇತ್ರದಲ್ಲಿ ಕುಡಿಯರ ಗೋಪಮ್ಮ,  ಜನಪದ ಸಂಶೋಧನ ಕ್ಷೇತ್ರದಲ್ಲಿ ನಂಜುಂಡಸ್ವಾಮಿ, ಯಕ್ಷಗಾನ ಕ್ಷೇತ್ರದಲ್ಲಿ ಕೆ.ಕೆ. ದೇವಪ್ಪ ಸಂಪಾಜೆ, ಸಮಾಜಿಕ ಚಟುವಟಿಕೆಯಲ್ಲಿ ಎಂ. ಇ. ಮಹಮ್ಮದ್, ಕೃಷಿ ಕ್ಷೇತ್ರದಲ್ಲಿ ಬಿದ್ದಾಟಂಡ ರೋಜಿ ಚಿಣ್ಣಪ್ಪ, ಪೌರ ಕಾರ್ಮಿಕ ಬಾಲು, ಸಿನಿಮಾ ಕ್ಷೇತ್ರದಲ್ಲಿ ಬೇಪಡಿಯಂಡ ಡ್ಯಾನಿ ಕಟ್ಟಪ್ಪ, ಸಾರ್ವಜನಿಕ ಹಿರಿಯ ಸೇವೆಗೆ ಬಾಬುಚಂದ್ರ ಉಳ್ಳಾಗಡ್ಡಿ ಅವರನ್ನು ಸನ್ಮಾನಿಸಲಾಗುವುದು.

ಅಲ್ಲದೆ ವಿಶೇಷವಾಗಿ ಜಿಲ್ಲಾಧಿಕಾರಿ ಶ್ರೀವಿದ್ಯಾ ಹಾಗೂ ನಾಟಿ ವೈದ್ಯೆ ಸರೋಜಮ್ಮ ಮತ್ತು ಪ್ರವಾಹ ಸಂದರ್ಭದಲ್ಲಿ ಸೈನಿಕರಂತೆ ಕರ್ತವ್ಯ ನಿರ್ವಹಿಸಿದಂತೆ ಕೊಡಗಿನ ಎಲ್ಲಾ ಚೆಸ್ಕಾಂನ ಮಾರ್ಗದಾಳು (ಲೈನ್‍ಮ್ಯಾನ್) ವಿಶೇಷ ಗೌರವಾರ್ಪಣೆ ನೀಡಲಾಗುವುದೆಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಕೆ.ಎಸ್.ರಮೇಶ್, ಮಡಿಕೇರಿ ತಾಲ್ಲೂಕು ಕಸಾಪ ಅಧ್ಯಕ್ಷ ಕುಡೆಕಲ್ ಸಂತೋಷ್, ಜಿಲ್ಲಾ ಕಸಾಪ ಪದಾಧಿಕಾರಿ ಕೋಡಿ ಚಂದ್ರಶೇಖರ್ ಹಾಗೂ  ಸಮ್ಮೇಳನದ ಪ್ರಚಾರ ಸಮಿತಿ ಸಂಚಾಲಕ ಪಿ.ವಿ.ಪ್ರಭಾಕರ್ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: