ಮೈಸೂರು

ನ್ಯಾ. ಸದಾಶಿವ ಆಯೋಗ ವರದಿ ಜಾರಿ ಬೇಡ : ಭೋವಿ ಹಿತರಕ್ಷಣಾ ಸಮಿತಿ

ಸರ್ಕಾರ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೆ ತಂದಲ್ಲಿ ಭೋವಿ ಜನಾಂಗಕ್ಕೆ ಸರ್ಕಾರದ ಯಾವ ಸವಲತ್ತುಗಳೂ ಸಿಗದೇ ಸೌಲಭ್ಯದಿಂದ ವಂಚಿತರಾಗುತ್ತಾರೆ. ಇದರಿಂದ ಸದಾಶಿವ ಆಯೋಗದ ವರದಿಯನ್ನು ಸರ್ಕಾರ ತಿರಸ್ಕರಿಸಬೇಕು ಎಂದು ಒತ್ತಾಯಿಸಿ ಶ್ರೀಶಿವಯೋಗಿ ಸಿದ್ಧರಾಮೇಶ್ವರ ಭೋವಿ ಹಿತರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.

ಮೈಸೂರಿನ ಜಿಲ್ಲಾಧಿಕಾರಿಕಾರಿ ಕಚೇರಿ ಎದುರು ಸೋಮವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಭೋವಿ ಸಮುದಾಯ ರಾಜ್ಯ ಸರ್ಕಾರದ ಅಧಿನಿಯಮದ ಪ್ರಕಾರ ಎಸ್.ಸಿ ಗೆ ಸೇರಿದ್ದು, ಸರ್ಕಾರಿ ಸವಲತ್ತುಗಳು ದೊರೆಯುತ್ತಿವೆ. ಸರ್ಕಾರ ಸದಾಶಿವ ಆಯೋಗವನ್ನು ಮುಂದಿಟ್ಟುಕೊಂಡು ಭೋವಿ, ಕೊರಚ, ಕೊರಮ, ಲಂಬಾಣಿ ಇನ್ನು ಮುಂತಾದ ಪಂಗಡಗಳನ್ನು ಎಸ್.ಸಿ ವರ್ಗದಿಂದ ಕಡಿತಗೊಳಿಸಿ ನಮಗೆ ದೊರೆಯುತ್ತಿದ್ದ ಸವಲತ್ತುಗಳಿಗೆ ಕಡಿವಾಣ ಹಾಕಿ ತೊಂದರೆಗೆ ಸಿಲುಕುವಂತೆ ಮಾಡಲು ನಿರ್ಧರಿಸಿದೆ ಎಂದು ಆರೋಪಿಸಿದರು.

ಸದಾಶಿವ ಆಯೋಗದ ವರದಿ ಜಾರಿಗೆ ಬಂದರೆ ಭೋವಿ ಜನಾಂಗಕ್ಕೆ ತೊಂದರೆಯಾಗಲಿದೆ. ಆದ್ದರಿಂದ ಭೋವಿ ಸಮುದಾಯಕ್ಕೆ ಆಗುವ ತೊಂದರೆಯನ್ನು ತಪ್ಪಿಸಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ಅಧ್ಯಕ್ಷ ಜಿ.ನಾಗರಾಜು, ಉಪಾಧ್ಯಕ್ಷ ಜಿ.ವಿ. ಸೀತಾರಾಮು, ಕಾರ್ಯದರ್ಶಿ ಮಲ್ಲಯ್ಯ, ಸಹಕಾರ್ಯದರ್ಶಿ ಡಿ.ದೇವಯ್ಯ, ಖಜಾಂಚಿ ಪಿ.ಬಸವರಾಜು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

Leave a Reply

comments

Related Articles

error: