ಪ್ರಮುಖ ಸುದ್ದಿ

ಮನೆಗಳವು, ಸರಗಳವು, ವಾಹನ ಕಳವು ಮಾಡುತ್ತಿದ್ದ ಐವರು ಆರೋಪಿಗಳ ಬಂಧನ : 47,64,000 ಸಾವಿರ ಮೌಲ್ಯದ ಚಿನ್ನ-ಬೆಳ್ಳಿ ಆಭರಣ ವಶ

ರಾಜ್ಯ(ಬೆಂಗಳೂರು)ಡಿ.21;- ಮನೆಗಳವು, ಸರಗಳವು, ವಾಹನ ಕಳವು ಮಾಡುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಿರುವ ರಾಮಮೂರ್ತಿ ನಗರ ಪೊಲೀಸರು 47,64,000 ಸಾವಿರ ಮೌಲ್ಯದ ಚಿನ್ನ-ಬೆಳ್ಳಿ ಆಭರಣಗಳು, ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮನೆಗಳವು ಮಾಡುತ್ತಿದ್ದ ಷಣ್ಮುಗ ಅಲಿಯಾಸ್ ಕಾಮುಕ(42)ನನ್ನು ಬಂಧಿಸಿ 7 ಮನೆಗಳವು ಪ್ರಕರಣಗಳನ್ನು ಪತ್ತೆಹಚ್ಚಿ 10 ಲಕ್ಷ 8 ಸಾವಿರ ಮೌಲ್ಯದ 336 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡರೆ, ಮತ್ತೊಬ್ಬ ಕನ್ನಗಳ್ಳ ಜ್ಞಾನಪ್ರಕಾಶ್ ಅಲಿಯಾಸ್ ಅಜ್ಜು (40)ನನ್ನು ಬಂಧಿಸಿ 16 ಕನ್ನಗಳವು ಪ್ರಕರಣಗಳಿಗೆ ಸಂಬಂಧಿಸಿದ 32 ಲಕ್ಷ 61 ಸಾವಿರ ಮೌಲ್ಯದ 1 ಕೆಜಿ 87 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಾಹನಗಳವು ಮಾಡುತ್ತಿದ್ದ ಪಣೀಶ್ ಅಲಿಯಾಸ್ ಐವಾರ (23)ನನ್ನು ಬಂಧಿಸಿ 3 ದ್ವಿಚಕ್ರ ವಾಹನಗಳ ಕಳವು ಪ್ರಕರಣಗಳನ್ನು ಪತ್ತೆ ಹಚ್ಚಿ 3 ಲಕ್ಷ 60 ಸಾವಿರ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.

ಸರಗಳ್ಳತನ ಮಾಡುತ್ತಿದ್ದ ರೂಬನ್ ಅಲಿಯಾಸ್ ಪ್ಯಾಮ್ (22) ಎಂಬಾತನನ್ನು ಬಂಧಿಸಿ 1 ಲಕ್ಷ 35 ಸಾವಿರ ಮೌಲ್ಯದ 40 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳನ್ನು ರಾಮಮೂರ್ತಿ ನಗರ ಪೊಲೀಸ್ ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು. ಡಿಸಿಪಿ ರಾಹುಲ್‌ಕುಮಾರ್ ಶಹಪುರವಾಡ ಅವರಿದ್ದರು.

ನಾಗವಾರ ಪಾಳ್ಯದ ಬಳಿ ಕಳೆದ ಡಿ. 3 ರಂದು ಮಧ್ಯರಾತ್ರಿ ಸುಲಿಗೆ ಮಾಡಲು ಪ್ರತಿರೋಧ ತೋರಿದ ಕ್ಯಾಬ್ ಚಾಲಕ ಮೋಹನ್ ಕುಮಾರ್ ಅವರನ್ನು ಕೊಲೆಗೈದ ಜೋಗುಪಾಳ್ಯದ ಪೀಟರ್ (22)ನನ್ನು ಬಂಧಿಸಿ ತನಿಖೆ ಕೈಗೊಳ್ಳಲಾಗಿದೆ. ಆರೋಪಿಯು ಕೃತ್ಯಕ್ಕೆ ಬಳಸಿದ ಸ್ಕೂಟರ್, ಸುಲಿಗೆ ಮಾಡಿದ ಮೊಬೈಲ್‌ನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ರಾಹುಲ್ ಕುಮಾರ್ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: