ಕರ್ನಾಟಕಮನರಂಜನೆಮೈಸೂರು

ಮೈಸೂರು ರಂಗಾಯಣದಿಂದ ಬೆಂಗಳೂರಿನಲ್ಲಿ ನಾಟಕೋತ್ಸವ

ಮೈಸೂರು ರಂಗಾಯಣವು ಬೆಂಗಳೂರಿನ ರಂಗಶಂಕರದಲ್ಲಿ ಸೆಪ್ಟೆಂಬರ್ 20 ರಿಂದ 22ರ ವರೆಗೆ ಮೂರು ದಿನಗಳ ನಾಟಕೋತ್ಸವ ಹಮ್ಮಿಕೊಂಡಿದೆ. ‘ತಲೆದಂಡ’ ‘ಸಂಸ್ಕಾರ’ ಮತ್ತು ‘ಜೂಲಿಯಸ್ ಸೀಸರ್’ ನಾಟಕಗಳು ಈ ನಾಟಕೋತ್ಸವದಲ್ಲಿ ಪ್ರದರ್ಶನಗೊಳ್ಳಲಿದ್ದು, ಸಂಜೆ 7.30ಕ್ಕೆ ಪ್ರದರ್ಶನಗಳು ಆರಂಭಗೊಳ್ಳಲಿವೆ.

ಸೆ. 20 ರಂದು ಗಿರೀಶ್ ಕಾರ್ನಾಡ್ ಅವರ ತಲೆದಂಡ ನಾಟಕವು ಪ್ರದರ್ಶನಗೊಳ್ಳಲಿದೆ. ಕರ್ನಾಟಕದ ಇತಿಹಾಸದಲ್ಲಿ 12 ನೇ ಶತಮಾನವನ್ನು ಪರಿವರ್ತನೆಯ ಯುಗ ಎಂದು ಕರೆಯಲಾಗುತ್ತದೆ. ಅಲ್ಲದೇ ಬಸವಣ್ಣ ಮತ್ತು ವಚನಯುಗವೆಂದು ಸಹ ಕರೆಯಲಾಗುತ್ತದೆ. ಶರಣ ಚಳುವಳಿ ಮತ್ತು ರಾಜಕೀಯ ವ್ಯವಸ್ಥೆಗಳ ಮುಖಾಮುಖಿಯಾಗಿ ಆಧ್ಯಾತ್ಮ, ಅನುಭವ, ಸಮಾಜ ಸುಧಾರಣೆ ಮತ್ತು  ವಿವಿಧ ರಾಜಕೀಯ ಪ್ರಶ್ನೆಗಳ ಹುಟ್ಟಿಗೆ ಕಾರಣವಾಗುವುದನ್ನು ಇಲ್ಲಿ ಕಾಣಬಹುದಾಗಿದೆ. ಈ ನಾಟಕವು ನೋಡುಗರಿಗೆ 12ನೇ ಶತಮಾನದ ಸಾಮಾಜಿಕ ಸಂಘರ್ಷದ ಪರಿಚಯ ಮಾಡಿಸುತ್ತದೆ.

samskaara

ಡಾ. ಯು.ಆರ್. ಅನಂತಮೂರ್ತಿಯವರ ಸಂಸ್ಕಾರ ನಾಟಕವು ಸೆ. 21 ರಂದು ಪ್ರದರ್ಶನಗೊಳ್ಳಲಿದೆ. ಸಂಸ್ಕಾರ ನಾಟಕವು ಪೂವ್ರಾಗ್ರಹಪೀಡಿತ ಭಾರತೀಯ ಸಮಾಜದ ದರ್ಶನ ಮಾಡಿಸುತ್ತದೆ. ಸಾಂಪ್ರದಾಯಿಕ ಆಚರಣೆ-ಪದ್ಧತಿಗಳು ಮತ್ತು ನವ್ಯ ಆಲೋಚನೆಗಳ ನಡುವೆ ನಡೆಯುವ ಘರ್ಷಣೆ ಈ ನಾಟಕದಲ್ಲಿ ಎದ್ದುಕಾಣುವ ಅಂಶ. ಕೇವಲ ಅಗ್ರಹಾರಕ್ಕೆ ಸೀಮಿತವಾಗದೆ ಸಾಮಾಜಿಕ ಕಟ್ಟುಪಾಡುಗಳಿಂದ ಬಂಧಮುಕ್ತವಾಗುವ ಹೊಸ ಸಾಮಾಜಿಕ ಮೌಲ್ಯಗಳ ಹುಟ್ಟಿಗೂ ಪ್ರೇರಣೆಯಾಗಿದೆ. ರಂಗಾಯಣವು ‘ಸಂಸ್ಕಾರ’ದ ಮೂಲಕ ಜನರಲ್ಲಿ ಸಾಮಾಜಿಕ ನ್ಯಾಯದ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದೆ.

ಸೆ. 22 ರಂದು ಷೇಕ್ಸ್’ಪಿಯರ್‍ನ ಜೂಲಿಯಸ್ ಸೀಸರ್ ನಾಟಕ ಪ್ರದರ್ಶನಗೊಳ್ಳಲಿದೆ. ಇದು ರೋಮ್‍ನಲ್ಲಿ ನಡೆದ ಕಥೆಯಾಗಿದೆ. ಪ್ರಪಂಚದ ವಿವಿಧ ದೇಶಗಳು ರಾಜರು ಮತ್ತು ಸರ್ವಾಧಿಕಾರಿಗಳ ಆಳ್ವಿಕೆಗೆ ಒಳಪಟ್ಟಿದ್ದಾಗ ರೋಮ್ ಪ್ರಜಾಪ್ರಭುತ್ವ ರಾಷ್ಟ್ರವಾಗಿತ್ತು. ಬ್ರಿಟಿಷ್ ಸಮಾಜದಲ್ಲಿ ಐತಿಹಾಸಿಕ ನಾಟಕಗಳ ಅಬ್ಬರವಿದ್ದಾಗ ರಾಜಕೀಯ ಆಂತರ್ಯ ವಿವರಿಸುವ ಮೊದಲ ನಾಟಕವಾಗಿ ‘ಜೂಲಿಯಸ್ ಸೀಸರ್‍’ ಗುರುತಿಸಲ್ಪಟ್ಟಿತು.

ಮೂರು ದಿನಗಳ ಕಾಲ ನಡೆಯುವ ಈ ನಾಟಕೋತ್ಸವವನ್ನು ಯಶಸ್ವಿಗೊಸಿಬೇಕೆಂದು ರಂಗಾಯಣವು ಕಲಾಪ್ರಿಯರನ್ನು ಆಹ್ವಾನಿಸಿದೆ.

Leave a Reply

comments

Related Articles

error: