ಮೈಸೂರು

ಅತೃಪ್ತಿಯ ಬೆಂಕಿ ತಣಿಸಲು ಸಾಹಿತ್ಯವೇ ಸಾಧನ : ಬಿ.ಆರ್. ಜಯರಾಮರಾಜೇ ಅರಸ್ ವ್ಯಾಖ್ಯಾನ

ಬೈಲಕುಪ್ಪೆ: ಈ ಕಾಲಘಟ್ಟದಲ್ಲಿ ಮನುಷ್ಯ ಶಾಂತಿ ನೆಮ್ಮದಿ ಇಲ್ಲದೆ ತೊಳಲಾಡುತ್ತಿದ್ದಾನೆ ಎಂದು ಸಮ್ಮೇಳನಾಧ್ಯಕ್ಷ, ಸಾಹಿತಿ, ಹಾಗೂ ಚಿಂತಕರೂ ಆದ ಬಿ.ಆರ್. ಜಯರಾಮರಾಜೇ ಅರಸ್ ನುಡಿದರು.

ಪಿರಿಯಾಪಟ್ಟಣ ತಾಲ್ಲೂಕಿನ ಹೋಬಳಿ ಕೇಂದ್ರವಾದ ರಾವಂದೂರು ಗ್ರಾಮದಲ್ಲಿ ಶನಿವಾರ ನಡೆದ ತಾಲ್ಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

02
ಸಮ್ಮೇಳನದ ಮೆರವಣಿಗೆಯಲ್ಲಿ ಪ್ರದರ್ಶನ ನೀಡಿದ ಜಾನಪದ ಕಲಾವಿದರು.

ನಾವೆಲ್ಲರೂ ಮುಖವಾಡಗಳನ್ನು ಹಾಕಿಕೊಂಡು ಬದುಕುತ್ತಿದ್ದೇವೆ. ನಮ್ಮ ನಿಜ ಮುಖಗಳನ್ನು ಯಾರಿಗೂ ತೋರಿಸುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತತ್ವಜ್ಞಾನಿ ಜಿಡ್ಡು ಕೃಷ್ಣಮೂರ್ತಿಯವರು ಹೇಳಿರುವುದು ಎಷ್ಟು ಸತ್ಯ ಎಂದರೆ ಅಂತರಂಗ ಬಹಿರಂಗವಾಗಿದೆ ಎಂಬುದಕ್ಕೆ ಮನಸ್ಸು ತನ್ನೊಳಗೆ ಸಮರ ಹೂಡಿರುವುದು ಪ್ರತಿಯೊಬ್ಬನಲ್ಲೂ ಎದ್ದು ಕಾಣುತ್ತಿದೆ ಎಂದರು.

ಪ್ರಪಂಚದ ಕುದಿತಗಳ ನಡುವೆ ಶಾಂತಿ, ಸಮಾಧಾನಗಳು ಮರೀಚಿಕೆಯಾಗಿವೆ. ಅತೃಪ್ತಿಯ ಬೆಂಕಿಯಲ್ಲಿ ಸದಾ ಬೇಯುತ್ತಿರುವ ಮನುಷ್ಯನನ್ನು ಸಾಂತ್ವನಗೊಳಿಸುವ ಸಾಧನ ಎಂದರೆ ಸಾಹಿತ್ಯವಾಗಿದ್ದು, ನಿಜವಾಗಿಯೂ ಅಂತಹ ಸಾಧನಗಳಾಗುವುದು ಸಾಹಿತಿಗಳು ತಮ್ಮ ಕೃತಿಗಳನ್ನು ಜಾತಿ ಮತಗಳ ಗೋಜಲಿಗೆ ಸಿಲುಕದೆ ಸೃಜಿಸಿದಾಗ ಮಾತ್ರ ನಮ್ಮ ಮನಸ್ಸನ್ನು ವಿಶಾಲಗೊಳಿಸುವುದು ಎಂದರು.

ಕನ್ನಡ ನಾಡಿನ ಅರಸರ ಮನೆತನಗಳಾದ ತಲಕಾಡಿನ ಗಂಗರು, ಬಾದಾಮಿಯ ಚಾಲುಕ್ಯರು, ಮಾನ್ಯಖೇಡದ ರಾಷ್ಟ್ರಕೂಟರು, ವಿಜಯನಗರದ ಅರಸರು, ಮೈಸೂರಿನ ಒಡೆಯರ್ ವಂಶಸ್ಥರು ಕನ್ನಡ ಭಾಷೆಗೆ ಪ್ರಾಶಸ್ತ್ಯ ನೀಡಿ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ವಿವರಿಸಿದರು.

ಸಮ್ಮೇಳನಕ್ಕೂ ಮುನ್ನ ರಾವಂದೂರಿನ ಪ್ರಮುಖ ಬೀದಿಗಳಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರನ್ನು ಹೊತ್ತ ಕನ್ನಡದ ತೇರು ಮೆರವಣಿಗೆಯಲ್ಲಿ ವಿವಿಧ ಸಾಂಸ್ಕೃತಿಕ ತಂಡಗಳೊಂದಿಗೆ ಹಾಗೂ ಶಾಲಾ ವಿದ್ಯಾರ್ಥಿಗಳೊಂದಿಗೆ ವೇದಿಕೆಗೆ ಬರಮಾಡಕೊಳ್ಳಲಾಯಿತು.

ಸಮಾರಂಭದಲ್ಲಿ ಜಾನಪದ ವಿದ್ವಾಂಸ ಹಾಗೂ ಚಿಂತಕ ಡಾ.ಕಾಳೇಗೌಡ ನಾಗವಾರ, ರಾವಂದೂರು ಮುರುಘಾ ಮಠದ ಶ್ರೀ ಮೋಕ್ಷಪತಿ ಸ್ವಾಮೀಜಿ, ಮೈಸೂರು ಮತ್ತು ಕೊಡಗು ಲೋಕಸಭಾ ಸದಸ್ಯ ಪ್ರತಾಪಸಿಂಹ, ಮಾಜಿ ಶಾಸಕ ಹೆಚ್.ಸಿ.ಬಸವರಾಜು, ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ತಾಲ್ಲೂಕು ಕ.ಸಾ.ಪ. ಅಧ್ಯಕ್ಷ ಬಿ.ಎಂ.ಶಿವಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಮನೆ ಮನೆ ಕವಿಗೋಷ್ಠಿ ಬಳಗದ ಅಧ್ಯಕ್ಷ ಕಂಪ್ಲಾಪುರ ಮೋಹನ್ ಮಾತನಾಡಿದರು.

ತಾ.ಪಂ.ಅಧ್ಯಕ್ಷೆ ಕೆ.ಆರ್.ನಿರೂಪಾ ರಾಜೇಶ್, ಉಪಾಧ್ಯಕ್ಷೆ ಜಯಮ್ಮ ಜವರಪ್ಪ, ಸೇರಿದಂತೆ ಜಿ.ಪಂ. ಹಾಗೂ ತಾ.ಪಂ. ಸದಸ್ಯರುಗಳು, ಸಾಹಿತಿಗಳು, ಚಿಂತಕರು, ಕನ್ನಡಾಭಿಮಾನಿಗಳು ಹಾಜರಿದ್ದರು. ಪತ್ರಕರ್ತ ರಾ.ಶಾ.ವೀರೇಶ್ ಕುಮಾರ್ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

ವರದಿ: ರಾಜೇಶ್

Leave a Reply

comments

Related Articles

error: