ಮೈಸೂರು

ಕಲೆ ವ್ಯಕ್ತಿತ್ವ ವಿಕಸನದೊಂದಿಗೆ ಬದುಕು ಕಟ್ಟಿಕೊಡಲಿದೆ : ಡಾ.ಹೆಚ್.ಕೆ.ರಾಮನಾಥ

ಕಲೆ ವ್ಯಕ್ತಿತ್ವವನ್ನು ವಿಕಸನಗೊಳಿಸಿ ಬದುಕನ್ನು ಕಟ್ಟಿಕೊಡುವುದಲ್ಲದೇ ಸಾಮರಸ್ಯವನ್ನು ಸೃಷ್ಟಿಸುತ್ತದೆ ಎಂದು ಹಿರಿಯ ರಂಗಕರ್ಮಿ ಡಾ.ಹೆಚ್.ಕೆ.ರಾಮನಾಥ ತಿಳಿಸಿದರು.

ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ಸೋಮವಾರ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ವತಿಯಿಂದ ಆಯೋಜಿಸಲಾದ ವಲಯ ಮಟ್ಟದ ಕಾಲೇಜು ನಾಟಕ ಮತ್ತು ಜಾನಪದ ಸ್ಪರ್ಧೆಯನ್ನು ಡಾ.ಹೆಚ್.ಕೆ.ರಾಮನಾಥ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕಲೆ ಮನಸುಗಳನ್ನು ಒಂದು ಮಾಡಲಿದ್ದು, ಇದನ್ನು ಯಾರೂ ಹಗುರವಾಗಿ ಕಾಣಬಾರದು. ಸಂಗೀತ, ನಾಟಕ, ನೃತ್ಯ ಪ್ರದರ್ಶಕ ಕಲೆಗಳಾಗಿವೆ. ಕಲೆಗೆ ಸಾವಿಲ್ಲ. ಕಲೆ ಸಾರ್ವಕಾಲಿಕ.  ಕಲೆಯಿರುವುದು ವಿಕಾಸಕ್ಕೇ ಹೊರತು ವಿಲಾಸಕ್ಕಲ್ಲ. ಕಲೆಯಿಂದ ಆತ್ಮವಿಕಸನಗೊಳ್ಳುವುದಲ್ಲದೇ ಕನಸನ್ನು ನನಸು ಮಾಡುವ ಸಾಮರ್ಥ್ಯವಿದೆ. ಮನಸನ್ನು ಹಗುರ ಮಾಡಿಕೊಳ್ಳಲೂ ಇದು ಸಹಾಯಕವಾಗಲಿದೆ ಎಂದರು.

ವಿದ್ಯಾರ್ಥಿಗಳು ಕೇವಲ ಅಂಕಗಳಿಸಿದರೆ ಸಾಲದು. ಯಾವುದಾದರೂ ಒಂದು ಕಲೆಯಲ್ಲಿ ತೊಡಗಿಸಿಕೊಂಡಾಗ ಬದುಕು ಪರಿಪೂರ್ಣಗೊಳ್ಳಲಿದೆ. ಇವತ್ತು ಕೆಲವರು ಕಲೆಯನ್ನು ಕಲಿತು ಟಿವಿ, ಸಿನಿಮಾಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇಲ್ಲಿ ನೆಲೆಯೂರುತ್ತಿಲ್ಲ. ಎಷ್ಟೇ ಎತ್ತರಕ್ಕೆ ಬೆಳೆದರೂ ರಂಗಭೂಮಿಯನ್ನು ಮರೆಯಬಾರದು. ವಿದ್ಯಾರ್ಥಿಗಳು ರಂಗಭೂಮಿಯ ಕುರಿತಾಗಿರುವ ಕೀಳರಿಮೆಯನ್ನು ಬಿಡಬೇಕು. ಮನಸನ್ನು ನನಸು ಮಾಡಿಕೊಳ್ಳುವತ್ತ ಮುನ್ನಡೆಯಬೇಕು. ಕಲೆಗೆ ಬಡವ- ಬಲ್ಲಿದ, ಮೇಲು-ಕೀಳು, ಭೇದವಿಲ್ಲ. ವಯಸ್ಸಿನ ತಾರತಮ್ಯವಿಲ್ಲ. ವಿದ್ಯಾರ್ಥಿಗಳು ಶಿಸ್ತನ್ನು ಬೆಳೆಸಿಕೊಂಡು ಕಲೆಯಲ್ಲಿ ತೊಡಗಿಸಿಕೊಂಡರೆ ಬದುಕು ಮತ್ತು ವ್ಯಕ್ತಿತ್ವ ಎರಡೂ ಹಸನಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿತೆರೆ, ಕಿರುತೆರೆ ನಟ ಮಂಡ್ಯ ರಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಕೆ.ಎ.ದಯಾನಂದ, ರಂಗಾಯಣ ಉಪನಿರ್ದೇಶಕಿ ನಿರ್ಮಲಾ ಮಠಪತಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: