ಮೈಸೂರು

ಮೋದಿ ಜನರಿಗೆ ಮೋಸ ಮಾಡಿದ್ದಾರೆ : ಕಾಂಗ್ರೆಸ್ ಪ್ರತಿಭಟನೆಯಲ್ಲಿ ಆರೋಪ

congress-protest-3-webಗರಿಷ್ಠ ಮುಖಬೆಲೆಯ ನೋಟು ರದ್ದುಪಡಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಮೈಸೂರು ಜಿಲ್ಲಾ ಮತ್ತು ನಗರ ಕಾಂಗ್ರೆಸ್ ವತಿಯಿಂದ ಸೋಮವಾರ ಮೈಸೂರಿನಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು.

ಮೈಸೂರಿನ ರೈಲ್ವೆ ನಿಲ್ದಾಣದ ಕಾಂಗ್ರೆಸ್ ಕಚೇರಿ ಬಳಿಯಿಂದ ರ್ಯಾಲಿಗೆ ಚಾಲನೆ ನೀಡಲಾಗಿದ್ದು, ದಾಸಪ್ಪ ವೃತ್ತ, ಗಾಯತ್ರಿಭವನ ರಸ್ತೆ, ನಾರಾಯಣಶಾಸ್ತ್ರಿ ರಸ್ತೆ, ದೇವರಾಜ ಅರಸು ರಸ್ತೆ ಮೂಲಕ ತೆರಳಿ ಜಿಲ್ಲಾಧಿಕಾರಿ ಕಚೇರಿಯನ್ನು ತಲುಪಿತು.

ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ನೋಟ್ ಅಮಾನ್ಯ ಮಾಡಿದಂದಿನಿಂದ ಅಂದರೆ ನವೆಂಬರ್ 8ರಿಂದ ಇಲ್ಲಿಯವರೆಗೆ  ಕಾರ್ಮಿಕ ವಲಯದಲ್ಲಿ ಎರಡು ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ವಿಮೆಯಲ್ಲಿ ಕಾರ್ಯನಿರ್ವಹಿಸುವವರು ನಾಲ್ಕು ಲಕ್ಷ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ದೇಶ ಅಭಿವೃದ್ಧಿ ಆಗಲಿದೆ ಎಂಬ ಹೇಳಿಕೆಯನ್ನು ನೀಡಿ ಮೋದಿ ಜನರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.

ನೋಟು ಅಮಾನ್ಯಗೊಂಡು 50ದಿನ ಕಳೆದರೂ ಇನ್ನೂ ಪರಿಸ್ಥಿತಿ ಸುಧಾರಿಸಿಲ್ಲ. ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. 130ಕೋಟಿ ಜನಸಂಖ್ಯೆಯಲ್ಲಿ ಶೇ.80ರಷ್ಟು ಮಂದಿ ಸಂಘಟಿತವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತೊಂದರೆ ಅನುಭವಿಸುತ್ತಿದ್ದಾರೆ. ಹೊಸ ನೋಟು ಮುದ್ರಣ ಹಾಗೂ ವಿತರಣೆಗೆ ಇಲ್ಲಿಯವರೆಗೆ 20ಸಾವಿರ ಕೋಟಿ ಹಣ ಖರ್ಚಾಗಿದ್ದು, ಸಾರ್ವಜನಿಕರ ಹಣವನ್ನು ಸರ್ಕಾರ ದುರುಪಯೋಗ ಮಾಡುತ್ತಿದೆ ಎಂದು ದೂರಿದರು.

ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ರ್ಯಾಲಿಯಲ್ಲಿ ಕೇಂದ್ರ ಸರ್ಕಾರದ ಅಣಕು ಶವಯಾತ್ರೆಯನ್ನು ನಡೆಸಲಾಯಿತು.

ಪ್ರತಿಭಟನೆಯಲ್ಲಿ ಸಚಿವರುಗಳಾದ ಡಾ.ಹೆಚ್.ಸಿ.ಮಹದೇವಪ್ಪ, ತನ್ವೀರ್ ಸೇಠ್, ಶಾಸಕರುಗಳಾದ ಎಂ.ಕೆ.ಸೋಮಶೇಖರ್, ಪಿ.ವಾಸು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು. ರ್ಯಾಲಿಯಲ್ಲಿ ಎರಡು ಸಾವಿರಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.

 

Leave a Reply

comments

Related Articles

error: