ಮೈಸೂರು

ವಿದ್ಯಾರ್ಥಿಗಳಲ್ಲಿ ನಿರಂತರ ಪರಿಶ್ರಮವಿರಬೇಕು : ರಾಜಶೇಖರ ಕೋಟಿ

ವಿದ್ಯಾರ್ಥಿಗಳಲ್ಲಿ ಸತತ ಪರಿಶ್ರಮ ಮತ್ತು ನಿರಂತರ ಅಭ್ಯಾಸಗಳಿದ್ದರೆ ಮಾತ್ರ ಸರಸ್ವತಿ ಒಲಿಯಲು ಸಾಧ‍್ಯ ಎಂದು ಆಂದೋಲನ ದಿನಪತ್ರಿಕೆಯ ಸಂಪಾದಕ ರಾಜಶೇಖರ ಕೋಟಿ ಹೇಳಿದರು.

ಸೋಮವಾರ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ 2016-17 ನೇ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ರಾಜಶೇಖರ ಕೋಟಿ ಉದ್ಘಾಟಿಸಿದರು. ಬಳಿಕ  ಮಾತನಾಡಿದ ಅವರು, ಈ ಕಾಲೇಜು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಹೊಂದುತ್ತಾ, ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡಲು ದಾಪುಗಾಲು ಹಾಕುತ್ತಿರುವುದು ಅಭಿಮಾನದ ಸಂಗತಿ. ಇದರಲ್ಲಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ಪಾತ್ರವೂ ದೊಡ್ಡದಿದೆ. ಸರ್ಕಾರಿ ಕಾಲೇಜು ಎಂದು ನಿರ್ಲಕ್ಷ್ಯಿಸದೇ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.

ವಿದ್ಯಾರ್ಥಿಗಳು ಶ್ರದ್ಧೆಯಿಂದ ಉತ್ತಮ ಶಿಕ್ಷಣ ಕಲಿತರೆ ಜೀವನ ಎಂಬ ಪರೀಕ್ಷೆಯಲ್ಲಿ ಯಶಸ್ಸು ಗಳಿಸಬಹುದಾಗಿದೆ. ಕಲಿಯುವಾಗ ನಾವು ಬುದ್ಧಿವಂತರಲ್ಲ, ಬಡವರು, ಗ್ರಾಮೀಣ ಭಾಗದವರು ಎಂಬ ಕೀಳರಿಮೆ ಬಿಟ್ಟು  ಆಸಕ್ತಿಯಿಂದ ಲಕ್ಷ್ಯ ವಹಿಸಿದರೆ ವಿದ್ಯೆ ತಾನಾಗಿಯೇ ಒಲಿಯುತ್ತದೆ. ಬುದ್ಧಿವಂತಿಕೆಯು ಸತತ ಪರಿಶ್ರಮದಿಂದ ಬರುತ್ತದೆ. ಸುಜ್ಞಾನ ಪಡೆದು ಸುಜ್ಞಾನಿಗಳಾಗಿ ಸಮಾಜಕ್ಕೆ ಮತ್ತು ತಂದೆ-ತಾಯಿಗೆ ಕೀರ್ತಿ ತರಬೇಕು. ಅಂಬೆಗಾಲಿಡುವ ಮಗುವು ನಡೆಯಲು ಪ್ರಯತ್ನಿಸುವಂತೆ ವಿದ್ಯಾರ್ಥಿಗಳಾದ ನೀವು ವಿದ್ಯೆ ಎಂಬ ಪರ್ವತವನ್ನು ಏರಲು ಪ್ರಯತ್ನಿಸಬೇಕು. ಅಂತೆಯೇ ಜೀವನದಲ್ಲಿ ಏನಾದರೊಂದು ಸಾಧಿಸುತ್ತೇನೆ ಎಂಬ ಛಲ ಹೊಂದಿರಬೇಕು. ದೇಶದ ಉಜ್ವಲ ಭವಿಷ್ಯ ನಿಮ್ಮ ಕೈಯಲ್ಲಿದೆ. ನೀವು 4 ಗೋಡೆಗಳ ಮಧ್ಯೆ ಜೀವನ ನಡೆಸದೇ ಸದಾ ಸಮಾಜದ ಒಂದು ಭಾಗವಾಗಿರಬೇಕು ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.

ಸಾಹಿತಿ ಲತಾ ರಾಜಶೇಖರ್ ಮಾತನಾಡಿ “ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ನಡುವೆ ಉತ್ತಮ ಬಾಂಧವ್ಯ ಮತ್ತು ಆತ್ಮೀಯ ವಾತಾವರಣ ಇದ್ದರೆ ಶಿಕ್ಷಣ ವ್ಯವಸ್ಥೆ ಸುಧಾರಿಸುತ್ತದೆ. ಜ್ಞಾನಕ್ಕೆ ಸಮನಾದದ್ದು ಯಾವುದೂ ಇಲ್ಲ. ಶ್ರದ್ಧೆ, ಆಸಕ್ತಿ ಇಲ್ಲದೇ ಜ್ಞಾನ ಸಂಪಾದನೆ ಮಾಡಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಶಿಸ್ತು, ಏಕಾಗ್ರತೆ, ವಿನಯಶೀಲತೆ, ಗುರು-ಹಿರಿಯರಿಗೆ ಗೌರವ ಕೊಡುವ ಉತ್ತಮ ವ್ಯಕ್ತಿತ್ವ ಮತ್ತು ದೇಶ ಭಾಷೆಯ ಮೇಲೆ ಪ್ರೀತಿ-ಅಭಿಮಾನವನ್ನು ಬೆಳೆಸಿಕೊಂಡು ಭವ್ಯ ಭಾರತವನ್ನು ನಿರ್ಮಿಸಿ” ಎಂದು ಹೇಳಿದರು.

ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಯಪ್ರಕಾಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಚಾರ್ಯೆ ಆರ್. ವೈದ್ಯರಾಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾಲೇಜಿನ ಎಲ್ಲಾ ಉಪನ್ಯಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಣೆ ಮಾಡಲಾಯಿತು. ಉಪನ್ಯಾಸಕಿ ಜಯಂತಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: