ಮೈಸೂರು

ಅಧಿಕಾರಾವಧಿಯಲ್ಲಿ ಯಾವುದೇ ತಪ್ಪು ಮಾಡಿಲ್ಲ; ತೃಪ್ತಿ ತಂದಿದೆ : ಪ್ರೊ.ರಂಗಪ್ಪ

ನನ್ನ ಅಧಿಕಾರಾವಧಿಯಲ್ಲಿ ಯಾವುದೇ ಭ್ರಷ್ಟಾಚಾರವನ್ನಾಗಲಿ, ತಪ್ಪನ್ನಾಗಲಿ ಮಾಡಿಲ್ಲ. ವಿವಿಯ ಘನತೆಯನ್ನು ವಿಶ್ವಮಟ್ಟದಲ್ಲಿ ಹೆಚ್ಚಿಸುವ ಕೆಲಸ ಮಾಡಿದ್ದು 4ವರ್ಷಗಳ ಅಧಿಕಾರಾವಧಿ ತೃಪ್ತಿ ತಂದಿದೆ ಎಂದು ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ತಿಳಿಸಿದರು.

ಸೋಮವಾರ ಕ್ರಾಫರ್ಡ್ ಭವನದ ಶಿಕ್ಷಣ ಮಂಡಳಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಲಪತಿಯಾಗಿ ಆಯ್ಕೆಯಾದಾಗಿನಿಂದ ಇಲ್ಲಿಯವರೆಗೆ ವಿವಿಯ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಶತಮಾನೋತ್ಸವವನ್ನು ಸ್ಮರಣೀಯವಾಗಿಸುವ ಸಲುವಾಗಿ ಅನೇಕ ಕಾರ್ಯಕ್ರಮಗಳನ್ನು ಆಯೋಜಸಿದ್ದು, ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿಯಾದಿಯಾಗಿ ಗಣ್ಯಾತಿಗಣ್ಯರು ವಿವಿಗೆ ಭೇಟಿ ನೀಡಿದ್ದಾರೆ. ನೊಬೆಲ್ ಪುರಸ್ಕೃತ ಪ್ರೊಫೆಸರ್‍ಗಳು ವಿಶೇಷ ಉಪನ್ಯಾಸ ನೀಡಿದ್ದಾರೆ. 10ಕ್ಕೂ ಹೆಚ್ಚು ನೊಬೆಲ್ ಪುರಸ್ಕೃತರು ವಿವಿಗೆ ಭೇಟಿ ನೀಡಿದ್ದಾರೆ. ಆದರೆ, ದೇಶದ ಯಾವ ವಿವಿಗಳಿಗೂ ಭೇಟಿ ನೀಡಿಲ್ಲ. ಅಲ್ಲದೆ, ಕೇಂದ್ರ ಸರ್ಕಾರ ಹಾಗೂ ವಿದೇಶಗಳಿಂದ ಹಣ ತಂದು ಕಟ್ಟಡ ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದ್ದೇನೆ. ವಿವಿಯನ್ನು ವಿಶ್ವದರ್ಜೆಗೇರಿಸಲು ಶ್ರಮಿಸಿದ್ದು ಯಾವ ತಪ್ಪನ್ನೂ ಮಾಡಿಲ್ಲ ಎಂದು ಹೇಳಿದರು.

650ಕೋಟಿಯಲ್ಲಿ ಕೆಎಸ್‍ಒಯು ಅಭಿವೃದ್ಧಿ: ನಾನು ಕರ್ನಾಟಕ ರಾಜ್ಯ ಮುಕ್ಯ ವಿವಿಯ ಕುಲಪತಿಯಾಗಿದ್ದಾಗ ಯಾವ ತೊಂದರೆಯೂ ಇರಲಿಲ್ಲ. 2013ರ ಬಳಿಕ ಸಮಸ್ಯೆ ಆರಂಭವಾಯಿತು. ಕೆಲವರು ತಮ್ಮ ಲಾಬಿಗಾಗಿ ಯುಜಿಸಿ ಮೇಲೆ ಒತ್ತಡ ತಂದು ಮಾನ್ಯತೆಯನ್ನೇ ರದ್ದುಗೊಳಿಸಿದರು. ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಯಿತು. ಒಂದೇ ಕಟ್ಟಡದಲ್ಲಿ ಗಬ್ಬುನಾರುತ್ತಿದ್ದ ವಿವಿಯಲ್ಲಿ ಹತ್ತಾರು ಕಟ್ಟಡಗಳನ್ನು ನಿರ್ಮಾಣ ಸೇರಿದಂತೆ, 650 ಕೋಟಿ ವೆಚ್ಚದಲ್ಲಿ ಸರ್ವಾಂಗೀಣ ಅಭಿವೃದ್ಧಿ ಮಾಡಿದ್ದೇನೆ. ಆದರೆ, ನನ್ನ ಅಭಿವೃದ್ಧಿ ಸಹಿಸದವರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

ರಾಜಕಾರಣಿಗಳು ವಿಶ್ವವಿದ್ಯಾಲಯಗಳಲ್ಲಿ ಹಸ್ತಕ್ಷೇಪ ಮಾಡಿದರೆ ಅದು ಯಾವುದೇ ಕಾರಣಕ್ಕೂ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ತಪ್ಪು ಮಾಡಿದವರನ್ನು ಅಮಾನತುಪಡಿಸಿದರೆ ಅವರ ಬೆನ್ನೆಲುಬಾಗಿ ನಿಂತುಕೊಳ್ಳುತ್ತಾರೆ. ಅಭಿವೃದ್ಧಿ ಕೆಲಸಗಳನ್ನು ಮಾಡುವಾಗ ಎಲ್ಲರನ್ನೂ ಒಪ್ಪಿಸಲು ಸಾಧ್ಯವಿಲ್ಲ.  ಕೆಲವರಿಗೆ ಇಷ್ಟವಾದರೆ ಇನ್ನು ಕೆಲವರಿಗೆ ಇಷ್ಟವಾಗುವುದಿಲ್ಲ ಎಂದ ಅವರು, ದೇವೇಗೌಡರ ಸಂಬಂಧಿಯಾಗಿರುವುದರಿಂದ ರಾಜಕೀಯಕ್ಕೆ ಪ್ರವೇಶ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ ಯಾವುದೇ ಕಾರಣಕ್ಕೂ ರಾಜಕೀಯ ಪ್ರವೇಶ ಮಾಡುವುದಿಲ್ಲ ಎಂದು ಹೇಳಿದರು.

ಮುಖ್ಯ ಸಲಹೆಗಾರರಾಗಿ ಆಯ್ಕೆ: ಕುಲಪತಿಯಾಗಿ ನನ್ನ ಅಧಿಕಾರಾವಧಿ ಜ.10ಕ್ಕೆ ಮುಗಿಯಲಿದ್ದು, ನನ್ನ ಸೇವೆಯಿಂದಲೂ ನಿವೃತ್ತನಾಗುತ್ತಿದ್ದೇನೆ. ಚೀನಾ ಮೂಲದ ಸಿನೋಟರ್ ಎಂಬ ಫಾರ್ಮಾಸ್ಯುಟಿಕಲ್ ಕಂಪನಿಗೆ ಮುಖ್ಯ ಸಲಹೆಗಾರನಾಗಿ ಆಯ್ಕೆಯಾಗಿದ್ದು ನನ್ನ 10 ಪೇಟೆಂಟ್‍ಗಳನ್ನು ಕ್ಯಾನ್ಸರ್, ಡಯಾಬಿಟಿಸ್ ಹಾಗೂ ಅಲ್ಜೈಮರ್ ಡಿಸೀಸ್‍ಗೆ ಸಂಬಂಧಿಸಿದಂತೆ ಕ್ಲಿನಿಕಲ್ ಟ್ರಯಲ್ ಮಾಡಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಆರ್.ರಾಜಣ್ಣ ಉಪಸ್ಥಿತರಿದ್ದರು.

 

 

Leave a Reply

comments

Related Articles

error: