ಮೈಸೂರು

ಮಕ್ಕಳಲ್ಲಿರುವ ಸುಪ್ತವಾದ ಪ್ರತಿಭೆಯನ್ನು ಅನಾವರಣಗೊಳಿಸಲು ಪೋಷಕರು ಮಕ್ಕಳಿಗೆ ಸಹಕರಿಸಿ : ಎಸ್.ಸ್ವಾಮಿ

ಮೈಸೂರು,ಡಿ.22:-  ಮಕ್ಕಳಲ್ಲಿರುವ ಸುಪ್ತವಾದ ಪ್ರತಿಭೆಯನ್ನು ಅನಾವರಣಗೊಳಿಸಲು ಪೋಷಕರು ಮಕ್ಕಳಿಗೆ ಸಹಕರಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸ್ವಾಮಿ ಕರೆ ನೀಡಿದರು.

ತಿ.ನರಸೀಪುರ ಪಟ್ಟಣದ ಸೆಂಟ್ ಮೇರಿಸ್ ಆಂಗ್ಲ ಪ್ರೌಢಶಾಲೆಯಲ್ಲಿ ನಡೆದ 27ನೇ ವರ್ಷದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಪ್ರತಿಯೊಂದು ಮಕ್ಕಳಲ್ಲೂ ಅನನ್ಯವಾದ ಶಕ್ತಿ, ಅಗಾಧವಾದ ಪ್ರತಿಭೆ ಇರುತ್ತದೆ. ಪೋಷಕರು ಇದನ್ನು ಗುರುತಿಸದೆ ಇನ್ನಿತರೆ ಮಕ್ಕಳೊಂದಿಗೆ ತಮ್ಮ ಮಕ್ಕಳನ್ನು ಹೋಲಿಕೆ ಮಾಡುವ ಮನೋಭಾವನೆ ಬೆಳಸಿಕೊಂಡಿರುತ್ತಾರೆ. ತಮ್ಮ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸದೆ ವಿಫಲರಾಗುತಿದ್ದಾರೆ. ಪೋಷಕರು ಮಕ್ಕಳನ್ನು ಅವರು ಪಡೆಯುವ ಅಂಕಗಳಿಂದ ಅಳೆಯದೆ ಅವರ ಪ್ರತಿಭೆಯನ್ನು ಗುರುತಿಸಿ ಗಣನೀಯ ಸಾಧನೆ ಮಾಡಲು ಕಾಳಜಿ ವಹಿಸಬೇಕು. ಮಕ್ಕಳ ಕಲಿಕೆಗೆ ಒತ್ತಡ ಹೇರದೆ ಸಂತೋಷದಿಂದ ಕಲಿಯಲು ಪ್ರೇರೇಪಿಸಬೇಕು ಎಂದು ಕಿವಿಮಾತು ಹೇಳಿದರು.

ವೃತ್ತ ನಿರೀಕ್ಷಕ ಎಂ.ಆರ್ ಲವ ಮಾತನಾಡಿ ಪ್ರಸಕ್ತ ದಿನಗಳಲ್ಲಿ ಸಣ್ಣ ಪುಟ್ಟ ಶಾಲಾ ಮಕ್ಕಳು ಕೂಡ ಸಾಮಾಜಿಕ ಜಾಲತಾಣಕ್ಕೆ ದಾಸರಾಗುತ್ತಿದ್ದು ಇದು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಮಾರಕವಾಗಿದೆ. ಪೋಷಕರು ಕನಿಷ್ಠ ಪಕ್ಷ ಮಕ್ಕಳು ಪದವಿ ವ್ಯಾಸಂಗ ಮಾಡುವವರೆಗೂ ಅವರಿಗೆ ಮೊಬೈಲ್ ಕೊಡಿಸದಿರುವ ನಿರ್ಧಾರಕ್ಕೆ ಬಂದಾಗ ಮಾತ್ರ ಮಕ್ಕಳ ಶೈಕ್ಷಣಿಕ ಬೆಳವಣಿಗೆ ಉತ್ತಮವಾಗುತ್ತದೆ ಎಂದು ತಿಳಿಸಿದರು.

ಇದೇ ಸಂದರ್ಭ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಶಾಲೆಯ ವಿದ್ಯಾರ್ಥಿನಿ ಮೇಘನ,ದೀಪಕ್,ಅಕ್ಷಿತ ಅವರನ್ನು ಶಾಲಾ ಆಡಳಿತ ಮಂಡಳಿ ಸನ್ಮಾನಿಸಿತು. ಶಾಲಾ ಮಕ್ಕಳು ನಡೆಸಿ ಕೊಟ್ಟ ವಿವಿಧ ನೃತ್ಯಗಳು ಪೋಷಕರನ್ನು ರಂಜಿಸಿದವು.

ತಹಶೀಲ್ದಾರ್ ಎಚ್.ಎಸ್ ಪರಮೇಶ್,ಪುರಸಭೆ ಸದಸ್ಯೆ ರೂಪ ಪರಮೇಶ್,ದೈಹಿಕ ಶಿಕ್ಷಣ ಸಂಯೋಜಕ ಸಂಪತ್ ದೊರೆ ರಾಜ್, ಶಿಕ್ಷಣ ಸಂಯೋಜಕ ವಿಶ್ವನಾಥ್‍ ರೆಡ್ಡಿ, ಕೆಪಿಎಸ್ಸಿ ಮಾಜಿ ಸದಸ್ಯ ಬಿ.ಎಸ್ ಕೃಷ್ಣಪ್ರಸಾದ್,ಶಿಕ್ಷಣ ಸಂಸ್ಥೆ ಕಾರ್ಯದರ್ಶಿ, ಬೆನ್ ವೆಂಗಿನಿಕಲ್,ಜೇವಿಯರ್ ಆಂಥೋಣಿ,ಕ್ರಿಸ್ಟಿಯಾನಾ ಡಿಸೋಜಾ,ನಿರ್ದೆಶಕ ರೇನಿವರ್ಗಿಸ್,ಮರಿಯಮ್ಮ, ಅಡಿಟರ್ ಅಚ್ಚುತನ್, ಉಪ ಪ್ರಾಂಶುಪಾಲ ಗೋವಿಂದ್, ಕರುಣಾಕರ್,ಶಾಂತಮಣಿ,ಆಶಾ, ಮತ್ತಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: