ಪ್ರಮುಖ ಸುದ್ದಿ

ಸಾಹಿತ್ಯ ಸಮ್ಮೇಳನಕ್ಕೆ ಸಾಂಸ್ಕೃತಿಕ ಕಲಾ ತಂಡಗಳ ಮೆರವಣಿಗೆಯ ಆಕರ್ಷಣೆ 

ರಾಜ್ಯ(ಮಡಿಕೇರಿ) ಡಿ.23 :- ತಂಡಿಯಂಡಮೋಳ್ ಶಿಖರದ ತಪ್ಪಲಿನ ಹಸಿರ ಪರಿಸರದ ನಡುವಿನ  ನಾಪೋಕ್ಲು, ಅರಶಿನ ಕುಂಕುಮ ಬಣ್ಣದೋಕುಳಿಯೊಂದಿಗೆ, ಕನ್ನಡ ನೆಲದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ ಕಲಾ ತಂಡಗಳ ಮೆರವಣಿಗೆಯ ಮೂಲಕ ಕನ್ನಡಾಂಬೆಗೆ ನುಡಿ ನಮನವನ್ನು ಸಲ್ಲಿಸಿ ಗಮನ ಸೆಳೆಯಿತು.

ಗಡಿ ಜಿಲ್ಲೆ ಕೊಡಗಿನ 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಾಪೋಕ್ಲುವಿನಲ್ಲಿ ಕನ್ನಡ ಧ್ವಜದ ಅರಶಿನ ಕುಂಕುಮ ಬಣ್ಣಗಳಿಂದ ಕಂಗೊಳಿಸುತ್ತಿದ್ದ ಮುಖ್ಯ ಹಾದಿಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾದ ಸಾಹಿತಿ ಭಾರದ್ವಾಜ ಕೆ. ಆನಂದ ತೀರ್ಥ ಅವರ ಮೆರವಣಿಗೆ ಅತ್ಯಮೋಘವಾಗಿ ನಡೆಯಿತು, ಸಮ್ಮೇಳನಾಧ್ಯಕ್ಷರಿಗೆ ತೆರೆದ ವಾಹನದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಲೋಕೇಶ್ ಸಾಗರ್, ಮಡಿಕೇರಿ ತಾಲ್ಲೂಕು ಕಸಾಪ ಅಧ್ಯಕ್ಷ ಕುಡೆಕಲ್ ಸಂತೋಷ್ ಸಾಥ್ ನೀಡಿದರು.

ಪುಟ್ಟ ಸುಂದರವಾದ ಕೊಡಗಿನ ಗ್ರಾಮೀಣ ಭಾಗ ನಾಪೋಕ್ಲು ಶನಿವಾರದ ಪ್ರಾಥಃಕಾಲದಿಂದಲೆ ಕನ್ನಡದ ನುಡಿಹಬ್ಬದ ಸಂಭ್ರಮದಲ್ಲಿ ಮುಳುಗಿತ್ತಾದರೆ, ನುಡಿ ಜಾತ್ರೆಗೆ ತ್ರಿವರ್ಣ ಧ್ವಜ, ಪರಿಷತ್ತಿನ ಧ್ವಜ ಮತ್ತು ನಾಡ ಧ್ವಜಾರೋಹಣದ ಮೂಲಕ ತಹಶೀಲ್ದಾರ್ ಕುಸುಮ, ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ನಾಪೋಕ್ಲು ಗ್ರಾಪಂ ಅಧ್ಯಕ್ಷ ಇಸ್ಮಾಯಿಲ್ ಕೆ.ಎ. ಚಾಲನೆಯನ್ನಿತ್ತರು.

ಮೆರವಣಿಗೆಗೆ ಸಾಂಸ್ಕೃತಿಕ ಮೆರುಗು

ನಾಪೋಕ್ಲು ಹಳೇ ತಾಲ್ಲೂಕಿನಿಂದ ಬೆಳಗ್ಗೆ ಆರಂಭಗೊಂಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ, ಕನ್ನಡ ನೆಲದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸ್ತಬ್ಧ ಚಿತ್ರಗಳು, ಮಂಗಳ ವಾದ್ಯಗಳು ವಿಶೇಷ ಮೆರುಗನ್ನು ನೀಡಿದವು.

ಶಾಲಾ ಕಾಲೇಜು ವಿದ್ಯಾರ್ಥಿಗಳು, ಸ್ತ್ರೀ ಶಕ್ತಿ ಸಂಘ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ, ಕನ್ನಡ ಪರ ಸಂಘಟನೆಗಳ ಸದಸ್ಯರು ಶಿಸ್ತು ಬದ್ಧವಾಗಿ ಕನ್ನಡ ಧ್ವಜಗಳೊಂದಿಗೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿ ನುಡಿ ಹಬ್ಬದ ಕಳೆ ಹೆಚ್ಚಿಸಿದರಾದರೆ, ಕನ್ನಡ ನಾಡಿನ ಸಂಸ್ಕೃತಿ ಪ್ರತಿಬಿಂಬಿಸುವ ಸ್ತಬ್ಧ ಚಿತ್ರಗಳು ಗಮನ ಸೆಳೆದವು.

ದ್ವಾರ, ವೇದಿಕೆಗಳ ಉದ್ಘಾಟನೆ

ಕನ್ನಡ ನುಡಿ ಹಬ್ಬದ ಸಂದರ್ಭದಲ್ಲಿ ನಾಪೋಕ್ಲುವಿನ ವಿವಿಧೆಡೆಗಳಲ್ಲಿ ನಿರ್ಮಿಸಿದ ಕಲಿಯಾಟ ಅಜ್ಜಪ್ಪ ದ್ವಾರ, ಮಂಡೀರ ಜಯಾ ಅಪ್ಪಣ್ಣ ದ್ವಾರ, ಕಾರ್ಗಿಲ್ ವೀರ ಯೋಧ ದಿ. ದೇವಪ್ಪ ಬಿ.ಎಂ. ದ್ವಾರ, ಡಿ. ಪಿ.ಪಿ. ಮಹಮ್ಮದ್ ಹಾಜಿ ದ್ವಾರ, ಶ್ರೀ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಮಹಾದ್ವಾರಗಳನ್ನು ಗಣ್ಯರು ಉದ್ಘಾಟಿಸಿದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: