ಮೈಸೂರು

ಆರ್ಥಿಕವಾಗಿ, ಶೈಕ್ಷಣಿಕವಾಗಿ ಸ್ವಾವಲಂಬಿಯಾಗಬೇಕು: ಸಿ.ಎಚ್. ವಿಜಯ್ ಶಂಕರ್

ಮೈಸೂರು,ಡಿ.24:-  ನಾವು, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸ್ವಾವಲಂಬಿಗಳಾಗಿ, ಅದರ ಪ್ರಯೋಜನ ಸಮಾಜಕ್ಕೆ ದೊರೆಯದಿದ್ದರೆ ದಾರ್ಶನಿಕರ ಹೆಸರಲ್ಲಿ ಮಾಡುವ ಕಾರ್ಯಕ್ರಮಗಳು ಅರ್ಥಪೂರ್ಣವಾಗುವುದಿಲ್ಲ ಎಂದು ಮಾಜಿ ಸಚಿವ ಸಿ.ಎಚ್. ವಿಜಯ್ ಶಂಕರ್ ಹೇಳಿದರು.

ಮೈಸೂರಿನ ಹೆಬ್ಬಾಳದಲ್ಲಿರುವ ಶ್ರೀ ಕನಕದಾಸ ಹಿತರಕ್ಷಣಾ ಸಮಿತಿ ವತಿಯಿಂದ ನಿನ್ನೆ ಹೆಬ್ಬಾಳದಲ್ಲಿ ಆಯೋಜಿಸಿದ್ದ ಕನಕದಾಸರ 531ನೇ ಜಯಂತ್ಯೋತ್ಸವ ಹಾಗೂ ಎಸ್.ಎಸ್.ಎಲ್.ಸಿ., ಪಿ.ಯು.ಸಿ.ಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿಂದುಳಿದ ವರ್ಗಗಳ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಹಲವಾರು ಯೋಜನೆಗಳಿವೆ. ಹಿಂದುಳಿದ ವರ್ಗಗಳ ಯುವಕರ ಹಾಗೂ ಮಹಿಳೆಯರ ಆರ್ಥಿಕಾಭಿವೃದ್ಧಿಗೆ ಅವುಗಳನ್ನು ಬಳಸಿಕೊಳ್ಳಲು ಸಂಘ ಸಂಸ್ಥೆಗಳು ನೆರವಾಗಬೇಕು ಎಂದು ಹೇಳಿದರು.

ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಕೊಡುವ, ಮಹಿಳೆಯರನ್ನು ಸ್ವಾವಲಂಬಿಯಾಗುವಂತೆ ಆರ್ಥಿಕ ಶಕ್ತಿ ತುಂಬಿವ ಕೆಲಸವನ್ನು ಸಮಿತಿ ಮಾಡಬೇಕು. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ನೆರವನ್ನು ಪಡೆದುಕೊಳ್ಳಬೇಕು. ಯುವಕರಿಗೆ ಮಾಹಿತಿಯ ಕೊರತೆ ಇದೆ. ಹಿತ ರಕ್ಷಣಾಸಮಿತಿ ಈ ಸಮಸ್ಯೆ ನಿವಾರಣೆಗೆ ಕೆಲಸ ಮಾಡುವಂತೆ ಸಲಹೆ ನೀಡಿದರು.

ಕನಕದಾಸ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷರಾದ ವಿ. ಮಂಜೇಗೌಡ ಮಾತನಾಡಿ, ಕನಕದಾಸ ಹಿತರಕ್ಷಣಾ ಸಮಿತಿ ವತಿಯಿಂದ ಸಮಾಜಕ್ಕೆ ಪೂರಕವಾಗುವಂತಹ ಕೆಲಸಗಳನ್ನು ಮಾಡುತ್ತಿದ್ದೇವೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವುದು, ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದು, ಸರ್ಕಾರದ ಸೌಲಭ್ಯಗಳ ಬಗ್ಗೆ ಸಮಾಜದ ನಿರುದ್ಯೋಗಿ ಯುವಕರಿಗೆ ಮಾಹಿತಿ ನೀಡುವುದು, ವಧುವರರ ಆನ್ವೇಷಣೆಗೆ ವೇದಿಕೆ ಕಲ್ಪಿಸುವುದು ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಸಮಿತಿಯ ಎಲ್ಲಾ ಪದಾಧಿಕಾರಿಗಳ ಹಾಗೂ ಸದಸ್ಯರ ಸಹಕಾರದೊಂದಿಗೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಮೈಸೂರು ಜಿಲ್ಲಾ ರೇಷ್ಮೆ ಉಪ ನಿರ್ದೇಶಕ ಜವರೇಗೌಡ, ಆರಕ್ಷಕ ವೃತ್ತ ನಿರೀಕ್ಷಕ  ಧನರಾಜ್, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಆರ್. ರಾಜು ಅವರಿಗೆ ಸನ್ಮಾನ ಮಾಡಲಾಯಿತು. ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ, ಮಾಜಿ ಪ್ರಧಾನ ಕಾರ್ಯದರ್ಶಿ ದೊಡ್ಡಸ್ವಾಮಿಗೌಡ, ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕ ಹಾಗೂ ಮಹಾನಗರ ಪಾಲಿಕೆ ಸದಸ್ಯ ಜೆ. ಗೋಪಿ, ಮಹಾನಗರ ಪಾಲಿಕೆ ಸದಸ್ಯ ಕೆ.ವಿ. ಶ್ರೀಧರ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಂಕರ್, ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿ ಬಿ.ಶಿವಸ್ವಾಮಿ, ಕನಕದಾಸ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ಡಾ. ಬಸವರಾಜು ಎಸ್., ಜೆ.ಕೆ.ಟೈರ್ಸ್ ಕಾಳಿದಾಸ ಜಾಗೃತ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್. ಕುಮಾರ್, ಮುಖಂಡರಾದ ಜೌಹಳ್ಳಿ ಪುಟ್ಟಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: