ಪ್ರಮುಖ ಸುದ್ದಿ

ರೈತರ ಸಾಲ ಮನ್ನಾದಿಂದ ಆರ್ಥಿಕ ಪರಿಸ್ಥಿತಿ ಮೇಲೆ ಯಾವುದೇ ಪರಿಣಾಮ ಇಲ್ಲ : ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟನೆ

ರಾಜ್ಯ(ಬೆಂಗಳೂರು) ಡಿ.24:- ರೈತರ ಸಾಲ ಮನ್ನಾದಿಂದ ಆರ್ಥಿಕ ಪರಿಸ್ಥಿತಿಗೆ ತೊಂದರೆಯಾಗುತ್ತದೆ ಎಂಬ ವರದಿಗಳ ವಿರುದ್ಧ ಕಿಡಿಕಾರಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ರೈತರ ಸಾಲ ಮನ್ನಾದಿಂದ ಆರ್ಥಿಕ ಪರಿಸ್ಥಿತಿ ಮೇಲೆ ಯಾವುದೇ ಪರಿಣಾಮ ಇಲ್ಲ ಎಂದು ಸ್ಪಷ್ಟಪಡಿಸಿದರು.

ನಗರದ ನ್ಯಾಷನಲ್ ಕಾಲೇಜಿನಲ್ಲಿಂದು 7ನೇ ಘಟಿಕೋತ್ಸವ ಭಾಷಣ ಮಾಡಿದ ಅವರು, ಕೆಲವು ವಾಹಿನಿಗಳಲ್ಲಿ ರೈತರ ಸಾಲ ಮನ್ನಾದಿಂದ ದೇಶದ ಆರ್ಥಿಕ ವ್ಯವಸ್ಥೆ ಅಲ್ಲೋಲ ಕಲ್ಲೋಲವಾಗುತ್ತದೆ ಎಂಬ ವರದಿಗಳನ್ನು ಗಮನಿಸಿದ್ದೇನೆ. ಇದರಿಂದ ಬೇಸರವಾಯಿತು ಎಂದರು.

ರಾಜ್ಯದಲ್ಲಿ ರೈತರ ಸಾಲ ಮನ್ನಾದಿಂದ ಯಾವುದೇ ಆರ್ಥಿಕ ಶಿಸ್ತು ಉಲ್ಲಂಘನೆಯಾಗಿಲ್ಲ. ಕಳೆದ ಐದು ವರ್ಷಗಳಿಂದ ಸತತ ಬರದಿಂದ ರೈತ ಸಂಕಷ್ಟದಲ್ಲಿದ್ದ ಆತನ ನೆರವಿಗೆ ಸಾಲ ಮನ್ನಾ ಮಾಡಿದ್ದೇವೆ. ಇದರಿಂದ ಆರ್ಥಿಕ ಪರಿಸ್ಥಿತಿಗೆ ತೊಂದರೆಯಾಗುತ್ತದೆ ಎಂಬ ಸುದ್ದಿಗಳು ನೋವು ತರಿಸಿವೆ. ಅನ್ನದಾತ ರೈತನ ಕಷ್ಟಕ್ಕೆ ಸ್ಪಂದಿಸಿದ್ದೇನೆ ಎಂದರು.

ರೈತರ ಸಾಲ ಮನ್ನಾದಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ವಿತ್ತೀಯ ಕೊರತೆ ಇತಿಮಿತಿಯಲ್ಲಿದೆ ಎಂದು ಹೇಳಿದರು. ದೇಶದ ಬ್ಯಾಂಕ್‌ಗಳಲ್ಲಿ ಸಾಲ ಉಳಿಸಿಕೊಂಡ ದೊಡ್ಡ ದೊಡ್ಡ ಉದ್ಯಮಿಗಳು ಮತ್ತು ಕಂಪೆನಿಗಳಿಗೆ ರಿಯಾಯ್ತಿ ನೀಡಲಾಗುತ್ತಿದೆ. ನಮ್ಮ ಸರ್ಕಾರ ರೈತರ ನೆರವಿಗೆ ಬಂದಿರುವುದು ತಪ್ಪೇ ಎಂದು ಪ್ರಶ್ನಿಸಿದರು. ಈ ಕಾಲೇಜಿನ ವಿದ್ಯಾರ್ಥಿಯಾಗಿ ಹೆಸರು ತರುವಂತ ಗೌರವದ ಕೆಲಸೆ ಮಾಡುತ್ತೇನೆ. ಮುಂದೆ ಇತಿಹಾಸದಲ್ಲಿ ನಾಡಿನ ಜನರಿಗೆ ನೆಮ್ಮದಿಯ ಬದುಕು ಕಟ್ಟಿಕೊಳ್ಳುವಂತಹ ಯೋಜನೆಯನ್ನು ರೂಪಿಸಿದವರು ಎಂಬ ರೀತಿಯಲ್ಲಿ ಹೆಸರು ಬರುವಂತೆ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ನ್ಯಾಷನಲ್ ಕಾಲೇಜಿನ ಬಳಿ ಇರುವ ಮೆಟ್ರೋ ನಿಲ್ದಾಣಕ್ಕೆ ಡಾ. ಹೆಚ್.ನರಸಿಂಹಯ್ಯ ಹೆಸರನ್ನು ಇಡಲು ಶಿಫಾರಸ್ಸು ಮಾಡುವುದಾಗಿಯೂ ಹೇಳಿದರು.

ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ತಮ್ಮದು ತಂತಿಯ ಮೇಲಿನ ನಡಿಗೆ. ಸಮ್ಮಿಶ್ರ ಸರ್ಕಾರ ನಡೆಸುವುದು ಅಷ್ಟೊದು ಸುಲಭವಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷವೂ ಭಾಗಿ. ಅದಕ್ಕೆ ಅದರದ್ದೇ ಆದ ಅಜೆಂಡಾ ಇರುತ್ತದೆ. ನನ್ನದಂತೂ ಯಾವುದೇ ಸ್ವಾರ್ಥ ಅಜೆಂಡಾ ಇಲ್ಲ ಎಂದ ಅವರು, ಜನರಿಗೆ ಒಳ್ಳೆಯದು ಮಾಡಬೇಕು, ಯುವಕರಿಗೆ ಕೆಲಸ ಕೊಡಿಸಬೇಕು ಎಂಬುದು ನನ್ನ ಆದ್ಯತೆ. ನನಗೆ ಜಾತಿ ಇಲ್ಲ. ಎಲ್ಲರೂ ನಮ್ಮವರೇ ಎಂದು ಹೇಳಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: