ಮೈಸೂರು

ಅಂತಾರಾಷ್ಟ್ರೀಯ ನಾಟಕೋತ್ಸವ ಉದ್ಘಾಟನೆಗೆ ಪರಾಕ್ರಮ ನಿರಿಯೆಲ್ಲ

ಮೈಸೂರಿನ ರಂಗಾಯಣದಲ್ಲಿ ಜನವರಿ 13ರಿಂದ 18ರವರೆಗೆ ನಡೆಯಲಿರುವ  ಬಹುರೂಪಿ ಅಂತಾರಾಷ್ಟ್ರೀಯ ನಾಟಕೋತ್ಸವದ ಟಿಕೇಟ್ ಗಳನ್ನು  ಸೋಮವಾರ ಬಿಡುಗಡೆಗೊಳಿಸಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ದಯಾನಂದ ಟಿಕೇಟ್ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ವಿದೇಶಿ ನಾಟಕಗಳಿಗೆ 100 ರೂ. ಮತ್ತು ದೇಶೀಯ ನಾಟಕಗಳಿಗೆ 50 ರೂ. ಟಿಕೇಟ್ ದರ ನಿಗದಿ ಪಡಿಸಲಾಗಿದ್ದು, ಆಸಕ್ತರು ರಂಗಾಯಣದ ಕಛೇರಿ ಅಥವಾ bloom.com ನಲ್ಲಿ ಟಿಕೇಟ್‍ಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಓಂ ಪುರಿ ಅವರನ್ನು ನಾಟಕೋತ್ಸವ ಉದ್ಘಾಟನೆಗೆ ಆಹ್ವಾನಿಸಲಾಗಿತ್ತು. ಆದರೆ ಅವರ  ನಿಧನದ ಹಿನ್ನೆಲೆಯಲ್ಲಿ ಶ್ರೀಲಂಕಾದ ಹಿರಿಯ ರಂಗಕರ್ಮಿ ಪರಾಕ್ರಮ ನಿರಿಯೆಲ್ಲ ಅವರನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಹಿರಿತೆರೆ ಕಿರುತೆರೆ ನಟ ಮಂಡ್ಯ ರಮೇಶ್, ರಂಗಾಯಣ  ಉಪನಿರ್ದೇಶಕಿ ನಿರ್ಮಲಾ ಮಠಪತಿ ಮತ್ತಿತರರು ಉಪಸ್ಥಿತರಿದ್ದರು.

1ಪರಾಕ್ರಮ ನಿರಿಯೆಲ್ಲ

ಶ್ರೀಲಂಕಾ ದೇಶದ ಪ್ರಮುಖ ನಿರ್ದೇಶಕರಲ್ಲೊಬ್ಬರಾದ ಪರಾಕ್ರಮ ನಿರಿಯೆಲ್ಲ ಸುಮಾರು ನಾಲ್ಕು ದಶಕಗಳಿಂದ ಶ್ರೀಲಂಕಾ ರಂಗಭೂಮಿಯಲ್ಲಿ ನಿರಂತರವಾಗಿ ದುಡಿಯುತ್ತಿದ್ದಾರೆ. ಸುಸಂಸ್ಕೃತ ಸಮಾಜವೊಂದನ್ನು ನಿರ್ಮಾಣ ಮಾಡುವಲ್ಲಿ ರಂಗಭೂಮಿ ಮೊದಲ ಹಾಗೂ ಮಹತ್ವದ ಪಾತ್ರವಹಿಸುತ್ತದೆ ಎಂದು ಬಲವಾಗಿ ನಂಬಿದ ಇವರು ಈ ನಿಟ್ಟಿನಲ್ಲಿ ಶ್ರೀಲಂಕಾ ದೇಶದಲ್ಲಿ ಸಾಮಾನ್ಯನ ಬಳಿಗೂ ಸಾರಿ ಸಂದೇಶವನ್ನು ಸಾರುವ ಬೀದಿನಾಟಕವನ್ನು ಮನೆ ಮನೆ, ಗಲ್ಲಿ ಗಲ್ಲಿಗಳಲ್ಲಿ ಏರ್ಪಡಿಸಿ ಶ್ರೀಲಂಕಾ ದೇಶದಲ್ಲೇ ಮೊದಲ ಬಾರಿಗೆ ಬೀದಿನಾಟಕ ಪ್ರಕಾರವನ್ನು ಪ್ರಚುರಪಡಿಸಿದರು.

ಕೊಲಂಬೋದ ಲಿಯೋನಲ್ ವೆಂಟ್ ಮೆಮೋರಿಯಲ್ ಸೆಂಟರ್‍ನ ಆರ್ಟ್ ಥಿಯೇಟರ್ ಅಕಾಡೆಮಿಯಲ್ಲಿ ರಂಗಭೂಮಿಯ ಬಗ್ಗೆ ಅಧ್ಯಯನ ನಡೆಸಿದ ಪರಾಕ್ರಮ ನಿರಿಯೆಲ್ಲ ಚಲನಚಿತ್ರ ಹಾಗೂ ದೂರದರ್ಶನ ಮಾಧ್ಯಮಗಳಲ್ಲೂ ದುಡಿದರು. ಮೂರು ಮಾಧ್ಯಮಗಳಲ್ಲಿ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾದರು. ಆದರೆ ಈ ಮೂರು ಮಾಧ್ಯಮಗಳ ಪೈಕಿ ರಂಗಭೂಮಿಯೇ ಶ್ರೇಷ್ಠ ಎಂದು ಮನಗಂಡು ರಂಗಭೂಮಿಗೆ ತಮ್ಮ ಜೀವನವನ್ನು ಮುಡುಪಾಗಿರಿಸಿದರು. ಇವರ ಸೃಜನಶೀಲ ರಂಗಚಟುವಟಿಕೆಗಳಿಗೆ ಒಂದಲ್ಲ, ಎರಡಲ್ಲ ಸತತ ಏಳು ಬಾರಿ ಅತ್ಯುತ್ತಮ ನಿರ್ದೇಶಕನೆಂದು ಪ್ರಶಸ್ತಿ ಪಡೆದರು. ಇವರ ನಾಟಕಗಳ ಮೂಲದ್ರವ್ಯ ಶ್ರೀಲಂಕಾ ಮಾತ್ರವಲ್ಲದೆ ವಿಶ್ವದೆಲ್ಲೆಡೆ ದಿನದಿನಕ್ಕೂ ಬೆಳೆಯುತ್ತಿರುವ ಸಮುದಾಯದ ಸಂಘರ್ಷ, ಮಾನವೀಯತೆ ಮತ್ತು ಸಮಾಜದಲ್ಲಿ ಸಮಾನತೆಯನ್ನು ಬೆಳೆಸುವುದಾಗಿದೆ. ಇವರು ಸ್ಥಾಪಿಸಿದ ಶ್ರೀಲಂಕಾದ ಪ್ರತಿಷ್ಠಿತ ರಂಗಸಂಸ್ಥೆ ಜನಕರಾಲಿಯ ಇಂದಿಗೂ ಈ ನಿಟ್ಟಿನಲ್ಲಿ ಸತತವಾಗಿ ಕೆಲಸ ಮಾಡುತ್ತಿದೆ. ಶ್ರೀಲಂಕಾ ದೇಶದ ಬೇರೆ ಬೇರೆ ಪ್ರದೇಶ, ಬೇರೆ ಬೇರೆ ಭಾಷೆ, ಬೇರೆ ಬೇರೆ ಧರ್ಮ ಮತ್ತು ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯ ಯುವಕರನ್ನು ಒಂದುಗೂಡಿಸಿ ಅವರಿಗೆ ತಮ್ಮ ಉದ್ದೇಶಕ್ಕನುಗುಣವಾಗಿ ಸೂಕ್ತ ತರಬೇತಿ ನೀಡಿ ಮತ್ತೆ ಶ್ರೀಲಂಕಾದ ಮೂಲೆ ಮೂಲೆಗಳಲ್ಲಿ ಸಂಚಾರಿ ನಾಟಕಗಳನ್ನು ಏರ್ಪಡಿಸುವ ಮೂಲಕ ತಮ್ಮಲ್ಲಿ ತರಬೇತಿ ಪಡೆದ ಯುವಕರನ್ನು ಮಾನವೀಯತೆಯ ರಾಯಬಾರಿಗಳನ್ನಾಗಿ ಮಾಡಿದ್ದಾರೆ. ಇಂದಿಗೂ ಮಾಡುತ್ತಲೇ ಇದ್ದಾರೆ.

ಇವರು ರಂಗಾಯಣದಲ್ಲಿ ಒಂದು ವಾರಗಳ ಕಾಲ ನಡೆಯಲಿರುವ ಬಹುರೂಪಿ ನಾಟಕೋತ್ಸವವನ್ನು ಉದ್ಘಾಟಿಸಲಿದ್ದಾರೆ.

Leave a Reply

comments

Related Articles

error: