ದೇಶ

ಶಬರಿಮಲೆ ಪ್ರವೇಶಕ್ಕೆ ಅಡ್ಡಿಪಡಿಸಿದ ಪ್ರಕರಣ: 200 ಮಂದಿ ವಿರುದ್ಧ ಪ್ರಕರಣ ದಾಖಲು

ಪತ್ತನಂತಿಟ್ಟ,ಡಿ.24-ಶಬರಿಮಲೆ ಅಯ್ಯಪ್ಪ ದರ್ಶನಕ್ಕಾಗಿ ಆಗಮಿಸಿದ ಮಹಿಳೆಯರಿಗೆ ಅಡ್ಡಿಪಡಿಸಿದ ಪ್ರಕರಣದಲ್ಲಿ 200 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಮರಕ್ಕೂಟದಲ್ಲಿ ಮಹಿಳೆಯರನ್ನು ತಡೆದ 100 ಮಂದಿ ವಿರುದ್ಧ ಮತ್ತು ಸನ್ನಿಧಾನದಲ್ಲಿ ನಾಮಜಪ ಮಾಡಿದ 50 ಮಂದಿ ವಿರುದ್ಧ ಸನ್ನಿಧಾನದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅದೇ ವೇಳೆ ಅಪ್ಪಾಚ್ಚಿಮೇಟ್ಟುನಲ್ಲಿ ತಡೆಯೊಡ್ಡಿದ 40 ಮಂದಿ ವಿರುದ್ಧ ಪಂಪಾ ಪೊಲೀಸರು ಕೇಸು ದಾಖಲಿಸಿದ್ದಾರೆ.

ಕಂಡರೆ ಗುರುತು ಪತ್ತೆ ಹಚ್ಚಬಹುದಾದ 150 ಮಂದಿ ವಿರುದ್ಧ ಈ ಕೇಸು ದಾಖಲಾಗಿದೆ. ಹೆಚ್ಚಿನ ತನಿಖೆ ನಂತರವೇ ಇವರ ವಿವರಗಳನ್ನು ಹೇಳಲಾಗುವುದು ಎಂದಿದ್ದಾರೆ ಪೊಲೀಸರು.

ಸನ್ನಿಧಾನದಲ್ಲಿ ನಿಷೇಧಾಜ್ಞೆ ಇದ್ದರೂ ಅಲ್ಲಿ ನಾಮಜಪ ಪ್ರತಿಭಟನೆ ಕೈಗೊಂಡವರ ವಿರುದ್ಧ ಮತ್ತು ಮರಕ್ಕೂಟ್ಟದಲ್ಲಿ ಪ್ರತಿಭಟನೆ ನಡೆಸಿದವರ ವಿರುದ್ಧ ಸನ್ನಿಧಾನ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕೋಯಿಕ್ಕೋಡ್ ಕೊಯಿಲಾಂಡಿ ನಿವಾಸಿ ಬಿಂದು, ಮಲಪ್ಪುರಂ ನಿವಾಸಿ ಕನಕ ದುರ್ಗಾ ಎಂಬವರು ಬೆಳಿಗ್ಗೆ 7 ಗಂಟೆ ಹೊತ್ತಿಗೆ ಶಬರಿಮಲೆಗೆ ತಲುಪಿದ್ದರು. ಇವರು ಮಲೆ ಹತ್ತಲು ಆರಂಭಿಸಿ ಅರ್ಧ ಗಂಟೆಯಾದಾಗ ಅಲ್ಲಿ ಪ್ರತಿಭಟನೆ ಶುರುವಾಗಿತ್ತು. ಆಮೇಲೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಸಂಘರ್ಷವೇರ್ಪಟ್ಟಿದೆ. ಪ್ರತಿಭಟನಾಕಾರರನ್ನು ಪೊಲೀಸರು ಅಲ್ಲಿಂದ ತೆರವುಗೊಳಿಸಿದ್ದರೂ, ಪ್ರತಿಭಟನೆ ತೀವ್ರವಾದಾಗ ಶಬರಿಮಲೆ ಏರಲು ಬಂದ ಮಹಿಳೆಯರನ್ನು ಪೊಲೀಸರು ವಾಪಸ್ ಕಳುಹಿಸಿದ್ದರು.

ಅಲ್ಲದೆ, ಶಬರಿಮಲೆ ಪ್ರವೇಶಿಸಲು ಯತ್ನಿಸಿದ ಮನಿತಿ ಸಂಘಟನೆಯ ಮೂವರು ಸದಸ್ಯರ ವಿರುದ್ಧ ತಿರುವನಂತಪುರಂ ರೈಲ್ವೆ ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. (ಎಂ.ಎನ್)

Leave a Reply

comments

Related Articles

error: