ಮೈಸೂರು

ಜಯದೇವ್ ಆಸ್ಪತ್ರೆಗೆ ಭೇಟಿ ನೀಡಿದ ಸಿಂಧ್ಯ : ವೆಚ್ಚ ಭರಿಸುವುದಾಗಿ ಭರವಸೆ

ಮೈಸೂರಿನ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಡೆದ ಜಾಂಬೂರಿ ಸಮಾವೇಶದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿನಿಗೆ ಲಘು ಹೃದಯಾಘಾತ ಸಂಭವಿಸಿ ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಲಾಗಿತ್ತು. ಇದೀಗ ಆಕೆ ಚೇತರಿಸಿಕೊಂಡಿದ್ದು, ಮಂಗಳವಾರ ಡಿಸ್ಚಾರ್ಜ್ ಆಗಲಿದ್ದಾಳೆ. ಮನೆಗೆ ಕಳುಹಿಸುವ ಎಲ್ಲ ವೆಚ್ಚವನ್ನು ತಾವೇ ಭರಿಸುವುದಾಗಿ ರಾಜ್ಯ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮುಖ್ಯ ಆಯುಕ್ತ ಪಿ.ಜಿ.ಆರ್ ಸಿಂಧ್ಯ ತಿಳಿಸಿದರು.

ಹಿಮಾಚಲ ಪ್ರದೇಶ ಮೂಲದ ಪಿ.ಯು.ಸಿ ವಿದ್ಯಾರ್ಥಿನಿ ಶಬ್ನಮ್ ಠಾಕೂರ್ ಎಂಬುವಳಿಗೆ ಲಘು ಹೃದಯಾಘಾತ ಸಂಭವಿಸಿ ವಾರ ಕಳೆದರೂ ಆಸ್ಪತ್ರೆ ಬಳಿ ತಿರುಗಿಯೂ ನೋಡದ ಜಾಂಬೂರಿ ಆಯೋಜಕರು ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.  ಜನವರಿ 2ರಂದೇ ಆಸ್ಪತ್ರೆಗೆ ದಾಖಲಾಗಿದ್ದರೂ ಮಾನವೀಯತೆಗೂ ಕೂಡ ಜಾಂಬೂರಿಯ ಆಯೋಜಕರಾಗಲಿ ಅಧಿಕಾರಿಗಳಾಗಲಿ ಅತ್ತ ಸುಳಿದಿಲ್ಲ ಎಂಬ ಮಾತುಗಳು ಕೇಳಿ ಬಂದಿತ್ತು. ಸೋಮವಾರ ಸಂಜೆ ಜಯದೇವ ಆಸ್ಪತ್ರೆಗೆ ಭೇಟಿ ನೀಡಿದ ಪಿ.ಜಿ.ಆರ್ ಸಿಂಧ್ಯ ಶಬ್ನಮ್ ಆರೋಗ್ಯ ವಿಚಾರಿಸಿದರಲ್ಲದೇ, ವೆಚ್ಚ ಭರಿಸುವುದಾಗಿ ತಿಳಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿನಿ ಆರೋಗ್ಯವಾಗಿದ್ದಾಳೆ. ನಾಳೆಯೇ ಅವಳನ್ನು ಸುರಕ್ಷಿತವಾಗಿ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.

ಒಟ್ಟಿನಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ರಾಜ್ಯ ಆಯುಕ್ತರು ಮೈಸೂರಿನಲ್ಲಿದ್ದರೂ ಕೂಡ ವಿದ್ಯಾರ್ಥಿನಿಗೆ ಸಾಂತ್ವನ ಹೇಳದೆ ಅಮಾನವೀಯತೆ ಪ್ರದರ್ಶನ ಮಾಡಿದ್ದಾರೆ ಎಂಬ ಮಾತಿಗೆ ಇದೀಗ ಪೂರ್ಣವಿರಾಮ ದೊರಕಿದಂತಾಗಿದೆ.

Leave a Reply

comments

Related Articles

error: