ಪ್ರಮುಖ ಸುದ್ದಿ

ರೈತ ದಿನಾಚರಣೆ : ರೈತ ಸಂಪರ್ಕ ಕೇಂದ್ರಗಳನ್ನು ಸದುಪಯೋಗಪಡಿಸಿಕೊಳ್ಳಿ : ತಾ.ಪಂ ಅಧ್ಯಕ್ಷೆ ತೆಕ್ಕಡೆ ಶೋಭಾ ಕರೆ

ರಾಜ್ಯ( ಮಡಿಕೇರಿ) ಡಿ.25 :- ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಹಾಗೂ ಜಿಲ್ಲಾ ಕೃಷಿಕ ಸಮಾಜ ಕೊಡಗು ಇವರ ಸಂಯುಕ್ತಾಶ್ರಯದಲ್ಲಿ ನಗರದ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ ಸೋಮವಾರ ರೈತ ದಿನಾಚರಣೆ ಮತ್ತು ರೈತ ವಿಜ್ಞಾನಿಗಳ ಸಂವಾದ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾ.ಪಂ.ಅಧ್ಯಕ್ಷರಾದ ತೆಕ್ಕಡೆ ಶೋಭಾ ಅವರು ರೈತರು ಕಾಫಿ ಬೆಳೆಗಳ ಜೊತೆಯಲ್ಲಿ ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ರೈತರಿಗೆ ರೈತ ಸಂಪರ್ಕ ಕೇಂದ್ರಗಳ ಮೂಲಕ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.

ಕೃಷಿ ಇಲಾಖೆಯಿಂದ ರೈತರಿಗೆ ರಿಯಾಯಿತಿ ದರದಲ್ಲಿ ಕೃಷಿಗೆ ಸಂಬಂಧಿಸಿದ ಯಂತ್ರೋಪಕರಣಗಳನ್ನು  ನೀಡುತ್ತಿದ್ದಾರೆ. ಅದರ ಪ್ರಯೋಜನವನ್ನು ಪ್ರತಿಯೊಬ್ಬ ರೈತರು ಪಡೆದುಕೊಳ್ಳುವಂತಾಗಬೇಕು ಎಂದು ಅವರು ಹೇಳಿದರು.

ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಚೌಟು ಕಾರ್ಯಪ್ಪ ಅವರು ಮಾತನಾಡಿ ತೋಟಗಾರಿಕೆ, ಕೃಷಿ ಇಲಾಖೆ ಅನೇಕ ಕಾರ್ಯಕ್ರಮಗಳ ಮುಖಾಂತರ ರೈತರ ಸಂಕಷ್ಟಗಳ ನಿವಾರಣೆಗೆ ಪ್ರಯತ್ನ ಮಾಡುತ್ತಿದ್ದಾರೆ. ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಂಬಲ ಬೆಲೆ ದೊರೆಯುತ್ತಿಲ್ಲ. ಇದರಿಂದ ರೈತರು ಕೃಷಿ ಚಟುವಟಿಕೆಯಿಂದ ದೂರವಾಗುತ್ತಿದ್ದಾರೆ ಎಂದು ಅತೃಪ್ತಿ ವ್ಯಕ್ತಪಡಿಸಿದರು.

ಕೃಷಿ ಮಾರುಕಟ್ಟೆಯಲ್ಲಿ ರೈತರು ಬೆಳೆದ ಬೆಳೆ ಸರಿಯಾದ ಸಮಯಕ್ಕೆ ಖರೀದಿಯಾಗದ ಕಾರಣ ರೈತರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಅವರಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಬೇಕು. ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ನೀಡಬೇಕು ಎಂದು ಅವರು ಹೇಳಿದರು.

ಪ್ರಗತಿಪರ ರೈತರಾದ ತೇಜಸ್ ನಾಣಯ್ಯ ಅವರು ಮಾತನಾಡಿ ರೈತರು ತಮ್ಮಲ್ಲಿ ಇರುವ ಭೂಮಿಯಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಬೆಳೆದ ಬೆಳೆಗಳಿಗೆ ಸಾವಯವ ಹಾಗೂ ವೈಜ್ಞಾನಿಕ ರೀತಿಯಲ್ಲಿ ಕ್ರಮಗಳನ್ನು ಅಳವಡಿಸಿಕೊಂಡು ಪೋಷಣೆ ಮಾಡಿ ಹೆಚ್ಚು ಇಳುವರಿ ಹಾಗೂ ಲಾಭ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಕೃಷಿ ಭೂಮಿಯ ಮಣ್ಣನ್ನು ಪರೀಕ್ಷೆಗೆ ಒಳಪಡಿಸಿ ಮಣ್ಣಿನಲ್ಲಿ ಸೂಕ್ತವಾದ ಬೆಳೆ ಬೆಳೆಯಲು ಕ್ರಮ ಅಳವಡಿಸಿಕೊಳ್ಳಬೇಕು. ರೈತರು ಕೃಷಿ ಚಟುವಟಿಕೆಗಳ ಜೊತೆಯಲ್ಲಿ ಹೈನುಗಾರಿಕೆ, ಮೀನು, ಹಂದಿ, ಕೋಳಿ, ಸಾಕಾಣಿಕೆ ಮಾಡಿ ಅವುಗಳ ಪೋಷಣೆಗೆ ಬೇಕಾದ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯರಾದ ಯಾಲದಾಳು ಪದ್ಮಾವತಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಶಿವ ಪ್ರಕಾಶ್, ರೈತರು  ಇತರರು ಇದ್ದರು. ಕೃಷಿ ಇಲಾಖೆಯ ನಂಜಪ್ಪ ಅವರು ಪ್ರಾರ್ಥಿಸಿದರು. ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಗಿರೀಶ್ ಸ್ವಾಗತಿಸಿ, ನಿರೂಪಿಸಿದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: