ಕರ್ನಾಟಕಮೈಸೂರು

ಬೈಲಕುಪ್ಪೆ ಬಳಿ ಬುಡಕಟ್ಟು ಜನರ ಮೇಲೆ ದಬ್ಬಾಳಿಕೆ: ದೂರು ಕೊಟ್ಟರೂ ಕೇಳುವವರಿಲ್ಲ ಸ್ಥಳೀಯರ ಅಳಲು

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದಲ್ಲಿರುವ ಜೇನುಕುರುಬ, ಭೋವಿ ಹಾಗೂ ಡುಂಗ್ರಿ ಗರಾಸಿಯಾ ಕಾಲೋನಿಯಿದ್ದು, ಈ ಜನಾಂಗಗಳು ಅಲೆಮಾರಿ ಸಮುದಾಯವಾಗಿವೆ. ಇವರು ಸ್ಥಿರವಾಗಿ ಒಂದು ಕಡೆ ನೆಲೆಸಲೆಂದು ಸರಕಾರದ ವತಿಯಿಂದ ನಿವೇಶನ, ಮನೆಗಳನ್ನು ನೀಡಿ ಈ ಜನರಿಗೆ ನವೀನ ಬದುಕು ಕಟ್ಟಿಕೊಳ್ಳಲು ಸಹಕಾರ ನೀಡಿತ್ತು.

ಇಲ್ಲಿ ಜೆನುಕುರುಬ ಹಾಗೂ ಭೋವಿ ಜನಾಂಗದ ಕಡುಬಡ ಕುಟುಂಬಗಳು ಸಹ ನೆಲೆ ನಿಂತಿವೆ, ದಿನನಿತ್ಯ ಗಲ್ಲಿ-ಗಲ್ಲಿಗೆ ತೆರಳಿ ಪ್ಲಾಸ್ಟಿಕ್ ಹಾಗೂ ಚಿಂದಿ ಆಯುವುದೇ ಇವರ ಮುಖ್ಯ ಕೆಲಸವಾಗಿದೆ. ಆದರೆ ಇತ್ತಿಚಿನ ದಿನಗಳಲ್ಲಿ ಕಾಲಕ್ಕೆ ತಕ್ಕಂತೆ ಬದಲಾವಣೆಗೊಂಡ ಇಲ್ಲಿನ ಯುವಕರು ಸಾಧ್ಯವಾದಷ್ಟು ಶಿಕ್ಷಣ ದಕ್ಕಿಸಿಕೊಂಡಿದ್ದಾರೆ. ಸಾಮಾಜಿಕವಾಗಿ ಗೌರವಯುತ ಜೀವನ ನಡೆಸುವ ಹಂಬಲದಲ್ಲಿದ್ದಾರೆ.

ಇಲ್ಲಿರುವ ಸ್ಥಳೀಯರಿಗೆ ಉದ್ಯೋಗ ದೊರಕಿಸಿಕೊಡುವ ಸಲುವಾಗಿ ಸರಕಾರವು ನೀರಾವರಿಗಾಗಿ ಬಳಸುವ ಪೈಪ್ ತಯಾರಿಕಾ ಕಾರ್ಖಾನೆಯನ್ನು ಆರಂಭಿಸಿದೆ. ಇಷ್ಟೆ ಆಗಿದ್ದರೆ ಸ್ಥಳೀಯರು ಸಂತೋಷವಾಗಿರುತ್ತಿದ್ದರೆನೋ. ಆದರೆ ಇದೇ ಗ್ರಾಮದಲ್ಲಿರುವ ಧರ್ಮ ಬಿನ್ ಮಾರುತಿ ಎಂಬ ವ್ಯಕ್ತಿ ಸ್ಥಳೀಯರಿಗೆ ಯಾವುದೇ ಸೌಲಭ್ಯ ದಕ್ಕಿಸಿಕೊಡದೆ ಸರ್ಕಾರಿ ಸವಲತ್ತುಗಳನ್ನು ಸ್ಥಳಿಯರ ಹೆಸರಲ್ಲಿ ತಾನೇ ಕಬಳಿಸುತ್ತಿರುವುದು ಇಲ್ಲಿನ ಜನರಿಗೆ ದೊಡ್ಡ ತಲೆನೋವಾಗಿದೆ.

ಸ್ಥಳೀಯ ಜನರ ಆರೋಪಗಳಿವು:

>> ಭೋವಿ ಜನಾಂಗದವರಿಗೆ ಸರ್ಕಾರ ನೀಡಿದ್ದ ನಿವೇಶನಗಳನ್ನು ತನ್ನ ಪ್ರಭಾವ ಬಳಸಿ ವಶಕ್ಕೆ ತೆಗೆದುಕೊಂಡಿರುವ ಈತನ ಸಹಚರರು, ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ಜೇನು ಕುರುಬ ಜನಾಂಗದವರ ನಿವೇಶನಗಳನ್ನು ತಾವೇ ಆಕ್ರಮಿಸಿಕೊಂಡಿದ್ದಾರೆ.

>> ಸುಮಾರು 65 ಕುಟುಂಬಗಳ ಪಡಿತರ ಚೀಟಿಗಳನ್ನು ಬಲವಂತವಾಗಿ ವಶಪಡಿಸಿಕೊಂಡು ಸರ್ಕಾರ ಜನರಿಗೆ ಕೊಡುವ ಸೌಲಭ್ಯಗಳನ್ನು ತಾನೇ ಪಡೆದುಕೊಳ್ಳುತ್ತಿದ್ದಾನೆ.

>> ಡೊಂಗ್ರಿ ಗರಾಸಿಯಾ ಜನಾಂಗದಲ್ಲಿ ನಡೆಯುವ ಬಾಲ್ಯ ವಿವಾಹಗಳಿಗೆ ಬೆಂಬಲವಾಗಿ ಈತ ನಿಂತಿದ್ದಾನೆ. ಆ ನಂತರ ಬಲವಂತವಾಗಿ ವಿಚ್ಛೇದನಕ್ಕೆ ಒಳಪಡಿಸುವುದು, ವಿಚ್ಛೇದಿತ ಮಹಿಳೆಗೆ ಮರು ವಿವಾಹ ಮಾಡಿಸುವುದು, ಬಹುಪತ್ನಿತ್ವಕ್ಕೆ ಕುಮ್ಮಕ್ಕು ಕೊಡುವುದು ಈತನ ದಿನನಿತ್ಯದ ದಂಧೆಯಾಗಿದೆ.

>> ವಿದ್ಯೆ ಕಲಿತ ಯುವಕರು ಇಂತಹ ಪಾಪ ಕೃತ್ಯಗಳನ್ನು ಪ್ರಶ್ನಿಸಲು ಹೋದರೆ ಅಂತಹವರ ವಿರುದ್ಧ ಸುಳ್ಳು ದೂರು ದಾಖಲಿಸುವುದು ಈತನಿಗೆ ನೀರು ಕುಡಿದಷ್ಟು ಸುಲಭ. ಇವನ ದೌರ್ಜನ್ಯ, ದಬ್ಬಾಳಿಕೆಗಳಿಂದ ಈ ಗ್ರಾಮವು ಅಕ್ಷರಶ ಗೊಂಡಾರಣ್ಯದಂತಾಗಿದೆ.

>> ಪಕ್ಕದಲ್ಲಿರುವ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಸರ್ಕಾರಿ ಪ್ರಾಥಮಿಕ ಶಾಲೆಗೆ ಈತ ನಡೆಸುವ ಕಾರ್ಖಾನೆಯಿಂದ ಹೊರಡುವ ವಿಪರೀತ ಶಬ್ದದಿಂದಾಗಿ ಮಕ್ಕಳ ವ್ಯಾಸಂಗಕ್ಕೂ ತೊಂದರೆಯಾಗಿದೆ.  ಶಾಲೆಯ ವತಿಯಿಂದ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಭಾನುವಾರ (ಸೆ.18) ದೂರು ದಾಖಲಿಸಲಾಗಿದ್ದು, ಈ ಶಬ್ದ ಮಾಲಿನ್ಯದಿಂದ ಮಕ್ಕಳನ್ನು ರಕ್ಷಿಸುವಂತೆ ಕೋರಲಾಗಿದೆ.

>> ದೇವಸ್ಥಾನವನ್ನೂ ಅತಿಕ್ರಮಿಸಿಕೊಂಡಿರುವ ಈತ, ಸಾರ್ವಜನಿಕರಿಗೂ ಪ್ರವೇಶ ಕೊಡದೆ ತನ್ನ ಕಾರ್ಖಾನೆಯ ಸರಕು ಸರಂಜಾಮುಗಳನ್ನು ಸಂಗ್ರಹಿಸಿಡಲು ದೇವಸ್ಥಾನದ ಜಾಗ ಬಳಸಿಕೊಳ್ಳುತ್ತಿದ್ದಾನೆ. — ಇವು ಸ್ಥಳೀಯರಿಂದ ಕೇಳಿ ಬಂದಿರುವ ಆರೋಪಗಳು.

ವಿಷಯಕ್ಕೆ ಸಂಬಂಧಪಟ್ಟಂತೆ ಬೈಲಕುಪ್ಪೆ ಠಾಣೆಯಲ್ಲಿ ದೂರು ದಾಖಲಾಗಿದ್ದರೂ, ಇಲ್ಲಿನ ಪೋಲಿಸರು ಯಾವುದೆ ಕ್ರಮ ಕೈಗೊಂಡಿಲ್ಲ.

ಇವನು ನಡೆಸಿದ ದಬ್ಬಳಿಕೆ, ದೌರ್ಜನ್ಯಗಳು, ಸ್ಥಳಿಯರ ಮೆಲೆ ನಡೆಸಿದ ಹಲ್ಲೆಯ ಬಗ್ಗೆ ಸ್ಥಳೀಯ ಆರಕ್ಷಕ ಠಾಣೆ, ಪಿರಿಯಾಪಟ್ಟಣ ವೃತ್ತ ನೀರಿಕ್ಷಕರ ಕಛೇರಿ, ತಾಲೂಕು ಕಛೇರಿ, ಉಪವಿಭಾಗಧಿಕಾರಿ ಕಛೇರಿ, ಜಿಲ್ಲಾಧಿಕಾರಿ ಕಛೇರಿ, ಕರ್ನಾಟಕ ರಾಜ್ಯ ಸರ್ಕಾರ ವಿಧಾನಸೌಧ ಬೆಂಗಳೂರು ಕಛೇರಿ ಸೇರಿದಂತೆ ಎಲ್ಲ ಕಡೆ ದೂರು ನೀಡಿದರೂ  ಜನರ ಸಮಸ್ಯೆಗೆ  ಮಾತ್ರ ಪರಿಹಾರ ಸಿಕ್ಕಿಲ್ಲ.

ಇನ್ನು ಮುಂದಾದರೂ ಹಿಂದೆ ನಡೆದಿರುವ ಅಸ್ವಾಭಾವಿಕ ಹಾಗೂ ಅನುಮಾನಾಸ್ಪದ ಸಾವುಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ, ಇಡಿ ಗ್ರಾಮದಲ್ಲಿ ಸರ್ಕಾರ ನೀಡಿರುವ ನಿವೇಶನಗಳ ಸರ್ವೆ ನಡೆಸಿ ನಿಜವಾದ ಫಲಾನುಭವಿಗಳಿಗೆ ದೊರುಕಿಸಿ ಕೊಡಬೇಕು.  ಜಿಲ್ಲಾ ಮಟ್ಟದ ಸಂಭಂದಿಸಿದ ಅಧಿಕಾರಿಗಳು ಭೇಟಿ ನೀಡಿ, ಈ ಗ್ರಾಮದ ಜನರಿಗೆ ಸೂಕ್ತ ರಕ್ಷಣೆ ಒದಗಿಸಿ, ಉಪಟಳ ನೀಡುತ್ತಿರುವವರ ಮೆಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳಿಯ ನಿವಾಸಿಗಳ ಮನವಿ.

ವರದಿ: ಬಿ.ಆರ್. ರಾಜೇಶ್

Leave a Reply

comments

Related Articles

error: