ಮೈಸೂರು

ಡಿ.26ರಿಂದ 28ರವರೆಗೆ ಜನಪ್ರಿಯ ಮಾಗಿ ಆಹಾರ ಮತ್ತು ಕೇಕ್ ಉತ್ಸವ : ಪಿ.ಶಿವಣ್ಣ

ಮೈಸೂರು ಡಿ.25:-  ಮೈಸೂರು ಮಾಗಿ ಉತ್ಸವದ ಅಂಗವಾಗಿ ‘’ ಮೈಸೂರು ಮಾಗಿ ಆಹಾರ ಮತ್ತು ಕೇಕ್ ಉತ್ಸವ 2018  ಕುವೆಂಪುನಗರದ ಉದಯ ರವಿ ರಸ್ತೆಯಲ್ಲಿರುವ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು  ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರಾದ ಪಿ.ಶಿವಣ್ಣ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಡಿ.26ರಿಂದ 28ರವರೆಗೆ ಜನಪ್ರಿಯ ಮಾಗಿ ಆಹಾರ ಮತ್ತು ಕೇಕ್ ಉತ್ಸವ ಪ್ರತಿದಿನ ಬೆಳಿಗ್ಗೆ 9ರಿಂದ ರಾತ್ರಿ 9.30ರವರೆಗೆ ನಡೆಯಲಿದೆ. ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ ವೈವಿಧ್ಯತೆಯನ್ನು ನೀಡಲು ಜಿಲ್ಲಾಡಳಿತವು ವಿವಿಧ ಸರ್ಕಾರಿ ಇಲಾಖೆಗಳ ಮತ್ತು ಸಂಘಸಂಸ್ಥೆಗಳ ನೆರವಿನೊಂದಿಗೆ ಈ ಉತ್ಸವವನ್ನು ಹಮ್ಮಿಕೊಂಡಿದೆ ಎಂದರು. ಕ್ರಿಸ್ಮಸ್ ಮತ್ತು ಹೊಸವರ್ಷಾಚರಣೆಯನ್ನು ಗಮನದಲ್ಲಿಟ್ಟು 2013ರಿಂದ ಮರೆಯಲಾರದ ಡಿಸೆಂಬರ್ ಮತ್ತು ಜನಪ್ರಿಯ ಕೇಕ್ ಉತ್ಸವವನ್ನು ಆರಂಭಿಸಲಾಗಿದ್ದು, ಈ ವರ್ಷ ವಿಭಿನ್ನವಾಗಿ ಸಂಕ್ರಾಂತಿ ಹಬ್ಬ ಮಾಗಿಯ ಆಹಾರ ಮತ್ತು ಕೇಕ್ ಉತ್ಸವವನ್ನು ಸಂಘಟಿಸಲಾಗುತ್ತಿದೆ. ಈ ಉತ್ಸವದಲ್ಲಿ ಪ್ರಸಿದ್ಧ ಬೇಕರಿಗಳು ಹಾಗೂ ಸಿಹಿತಿನಿಸುಗಳ ತಯಾರಕರು ಭಾಗವಹಿಸಲಿದ್ದಾರೆ. ಮಾಗಿ ಆಹಾರ ವಿಶೇಷಗಳು, ವಿವಿಧ ಬಗೆಯ ಕೇಕ್ ಮತ್ತು ಪೇಸ್ಟ್ರಿಗಳು, ಬ್ರೆಡ್ ಗಳು, ಬನ್ ಗಳು ಚಾಕಲೇಟುಗಳು, ಸಿಹಿತಿನಿಸುಗಳನ್ನು ಉಣಬಡಿಸಲಾಗುತ್ತದೆ.

ಜನಪ್ರಿಯ ಆಹಾರ ಮತ್ತು  ಕೇಕ್ ಉತ್ಸವದಲ್ಲಿ ಕೇಕ್ ತಿನ್ನುವ ಸ್ಪರ್ಧೆಯನ್ನು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಏರ್ಪಡಿಸಲಾಗಿದೆ. ಡಿ.26ರಂದು ಸಂಜೆ 4ಗಂಟೆಗೆ ಕಾಲೇಜು ವಿದ್ಯಾರ್ಥಿಗಳಿಗಾಗಿ, ಡಿ.27ರಂದು 5ಗಂಟೆಗೆ ಸಾರ್ವಜನಿಕ ಪುರುಷರಿಗಾಗಿ, ಡಿ.28ರಂದು ಬೆಳಿಗ್ಗೆ 11ಗಂಟೆಗೆ ಕಾಲೇಜು ವಿದ್ಯಾರ್ಥಿನಿಯರಿಗಾಗಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಈ ಮೂರು ದಿನಗಳ ಕಾಲ ಸಂಜೆ 6ರಿಂದ 9ರವರೆಗೆ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: