ಮೈಸೂರು

ಅನೇಕ ಐತಿಹಾಸಿಕ ವಿಚಾರಗಳನ್ನು ಸಾರುವ ಸ್ವಾರಸ್ಯಕರ ಸಂಗತಿಗಳನ್ನು ತನ್ನ ಒಡಲಿನಲ್ಲಿಟ್ಟುಕೊಂಡಿದೆ ಪಿರಿಯಾಪಟ್ಟಣ

ಮೈಸೂರು,ಡಿ.25:- ಪಿರಿಯಾಪಟ್ಟಣ ಅನೇಕ ಐತಿಹಾಸಿಕ ವಿಚಾರಗಳನ್ನು ಸಾರುವ ಸ್ವಾರಸ್ಯಕರ ಸಂಗತಿಗಳನ್ನು ತನ್ನ ಒಡಲಿನಲ್ಲಿಟ್ಟುಕೊಂಡಿದ್ದು ಅನೇಕ ಪ್ರವಾಸಿ ತಾಣಗಳನ್ನು ಹೊಂದಿದೆ.

ಅರಣ್ಯ ಪ್ರದೇಶ ಸೇರಿದಂತೆ ಅನೇಕ ಗಿರಿಶಿಖರ ಶ್ರೇಣಿಗಳ ಮನೋಹರ ನೋಟ, ವಿವಿಧ ಸಾಹಿತ್ಯ, ಸಾಂಸ್ಕೃತಿಕ ಸಂಪತ್ತನ್ನು ಹೊಂದಿರುವ ಚಂಗಾಳ್ವರು ಆಳಿದ ಈ ಭೂಮಿಯಲ್ಲಿ ಸಮೃದ್ಧವಾದ ನಿಸರ್ಗ ಕಂಗೊಳಿಸುತ್ತಿದೆ.

ಹಿಂದೆ ಸಿಂಗಪಟ್ಟಣವೆಂದು ಗುರುತಿಕೊಂಡಿದ್ದು ಈ ಪ್ರದೇಶವು ಕ್ರಮೇಣ ಪೆರಿಯರಾಜ ಮಣ್ಣಿನ ಕೋಟೆಯ ಬದಲಿಗೆ ಕಲ್ಲಿನ ಕೋಟೆ ನಿರ್ಮಿಸಿ ಪೆರಿಯಾಪಟ್ಟಣ ಎಂಬ ಹೆಸರಿನಲ್ಲಿ ರಾಜ್ಯಬಾರ ನಡೆಸಿದ್ದರಿಂದ ಇಂದು ಪಿರಿಯಾಪಟ್ಟಣವಾಗಿ ಗುರುತಿಸಲಸ್ಪಟ್ಟಿದೆ. ಪ್ರಸ್ತುತ ತಾಲೂಕು ಕೇಂದ್ರವಾಗಿದ್ದು ಅಂದಿನ ರಾಜರು ಕಟ್ಟಿಸಿದ ಕೋಟೆ, ಕೊತ್ತಲುಗಳು, ದೇವಾಲಯಗಳ, ಕೆರೆ, ಕಟ್ಟೆಗಳು, ರಾಜ ಪ್ರಮುಖರ ಹೆಸರಿನ ಹಳ್ಳಿಗಳು, ಜೈನ ಬಸದಿಗಳಿಂದ ಕೂಡಿದ್ದು ಚಂಗಾಳ್ವರಿಂದ ಆಳಲ್ಪಟ್ಟಿದ್ದ ಗಂಡು ಭೂಮಿ ಇದಾಗಿದೆ.

ಮಂಜು ಮುಸುಕಿ ಮನೋಹರವಾಗಿ ಕಾಣುವ ಅರಣ್ಯ ಪ್ರದೇಶದಿಂದ ಕೂಡಿರುವ ಮಾವುಕಲ್ಲಯ್ಯನ ಬೆಟ್ಟ, ಬೆಟ್ಟದಪುರದ ಶ್ರೀ ಸಿಡಿಲು ಮಲ್ಲಿಕಾರ್ಜುನಸ್ವಾಮಿಬೆಟ್ಟ ಹಾಗೂ ಬೆಟ್ಟದಪುರದ ವಿರಕ್ತ ಮಠ, ರಾವಂದೂರಿನ ಶ್ರೀ ಮುರುಘಾಮಠ, ಬೈಲುಕುಪ್ಪೆಯ ಗೋಲ್ಡನ್ ಟೆಂಪಲ್, ಪಿರಿಯಾಪಟ್ಟಣದ ಶ್ರೀ ಮಸಣೀಕಮ್ಮ ಹಾಗೂ ಶ್ರೀ ಕನ್ನಂಬಾಡಿ ಅಮ್ಮನವರ ದೇವಾಲಯಗಳೂ ಸಹಾ ಪ್ರಮುಖ ಪ್ರವಾಸಿ ಕೇಂದ್ರಗಳಾಗಿವೆ.

ಜೋಳ, ರಾಗಿ, ಭತ್ತ, ಸೇರಿದಂತೆ ವಿವಿಧ ಕಾಳುಗಳು ಸೇರಿದಂತೆ ಸಾಂಬಾರ ಪದಾರ್ಥಗಳು ಸಾಂಪ್ರದಾಯಕ ಬೆಳೆಗಳಾಗಿದ್ದರೂ ಪ್ರಸ್ತುತ ವಿಶ್ವ ಮಟ್ಟದಲ್ಲಿಯೇ ಗುರುತಿಸಿಕೊಂಡಿರುವ ತಂಬಾಕು ಬೆಳೆ ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾಗಿದೆ.  ತಾಲೂಕಿನ ಒಂದು ಭಾಗಕ್ಕೆ ಮಾತ್ರ ಕಾವೇರಿ ನದಿ ಹರಿಯುತ್ತಿರುವುದನ್ನು ಕಾಣಬಹುದು. ಪಿರಿಯಾಪಟ್ಟಣ ಚಂಗಾಳ್ವರ ಆಳ್ವಿಕೆಯಿಂದ ಕೈತಪ್ಪಿ ಮೈಸೂರಿನವರ ಕೈಸೇರಿದ ಅನೇಕ ಘಟನಾವಳಿಗಳನ್ನು ಜಾನಪದ ಗಾಯನದಲ್ಲಿ ಕೇಳಬಹುದು.

ಪಿರಿಯಾಪಟ್ಟಣ ಪ್ರದೇಶದಲ್ಲಿ ತನ್ನ ಇತಿಹಾಸದ ಪುಟಗಳಲ್ಲಿ ನವ ಶಿಲಾಯುಗದ ಮೊದಲ್ಗೊಂಡು ಬೃಹತ್ ಶಿಲಾಯುಗದ ವರೆಗಿನ ಶಿಲಾಯುಧಗಳು, ಮಡಿಕೆ, ಕುಡಿಕೆಗಳು, ಕಬ್ಬಿಣದ ಆಯುಧಗಳು ಹಾಗೂ ಸಮಾದಿಗಳು, ಜೈನರ ಬಸದಿಗಳು ಇಲ್ಲಿ ದೊರೆತಿವೆ. ತಾಲೂಕಿನಲ್ಲಿ ನಡೆಯುವ ಬೆಟ್ಟದಪುರದ ದೀವಟಿಗೆ ಸೇವೆ, ಸೂಳೆಕೋಟೆಯ ಆಂಜನೇಯಸ್ವಾಮಿ ಆರಾಧನೆ, ಪಿರಿಯಾಪಟ್ಟಣದ ಶ್ರೀ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವ, ಅತ್ತಿಗೋಡಿನ ಶ್ರೀ ಮಹದೇಶ್ವರಸ್ವಾಮಿ ಕೊಂಡೋತ್ಸವ ಸೇರಿದಂತೆ ಅನೇಕ ಸಾಂಪ್ರದಾಯಿಕ ಜಾನಪದ ಆಚರಣೆಗಳು ಇಂದಿಗೂ ನಡೆದುಕೊಂಡು ಬರುತ್ತಿವೆ. ಚಿತ್ರ ನಿದೇರ್ಶಕ ಪುಟ್ಟಣ ಕಣಗಾಲ್ ಇದೇ ತಾಲೂಕಿನವರೇ ಆಗಿದ್ದು ಅನೇಕ ಸಾಹಿತಿಗಳನ್ನು, ಕವಿಗಳನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಹಿರಿಮೆ ತಾಲೂಕಿನದಾಗಿದೆ. ಪಿರಿಯಾಪಟ್ಟಣದ ಚರಿತ್ರೆಯ ಬಗ್ಗೆ ಸಾಕಷ್ಟು ಅಧ್ಯಯನಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ನಡೆಯಬೇಕಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: