ದೇಶಪ್ರಮುಖ ಸುದ್ದಿ

ಗಡಿ ಕಾಯುವ ಯೋಧರಿಗೆ ಕಳಪೆ ಆಹಾರ ವಿಡಿಯೊ: ಪ್ರಕರಣದ ಬಗ್ಗೆ ವರದಿ ಕೇಳಿದ ಕೇಂದ್ರ ಗೃಹ ಸಚಿವ

ನವದೆಹಲಿ: ಹಿಮಗಡ್ಡೆಗಳ ಮಧ್ಯೆ ದೇಶದ ಗಡಿ ಕಾಯುವ ಯೋಧರಿಗೆ ಹಿರಿಯ ಅಧಿಕಾರಿಗಳು ಯಾವ ರೀತಿಯ ಆಹಾರ ಕೊಡುತ್ತಾರೆ ಎಂಬುದರ ಬಗ್ಗೆ ಬಿಎಸ್ಎಫ್ ಯೋಧರೊಬ್ಬರು ವಿಡಿಯೊ ಮಾಡಿ ಭಾನುವಾರ ಫೇಸ್’ಬುಕ್’ನಲ್ಲಿ ಹರಿಯಬಿಟ್ಟಿದ್ದರು. ಈ ವಿಡಿಯೋ ಸೋಮವಾರ ರಾತ್ರಿಯಷ್ಟರಲ್ಲಿ 7 ಮಿಲಿಯನ್ ವೀಕ್ಷಣೆಯೊಂದಿಗೆ ತೀವ್ರ ಸಂಚಲನವನ್ನೇ ಮೂಡಿಸಿತ್ತು. ಯೋಧರ ಬಗ್ಗೆ ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷ್ಯದ ಬಗ್ಗೆ ದೇಶಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು.

ಈ ವಿಡಿಯೊ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಗಮನಕ್ಕೂ ಬಂದಿತ್ತು, ಪ್ರಕರಣದ ಬಗ್ಗೆ ಬಿ.ಎಸ್.ಎಫ್ ನಿಂದ ವರದಿ ಪಡೆಯುವಂತೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಮ್ಮು ಕಾಶ್ಮೀರದ ಬಿ.ಎಸ್.ಎಫ್ 29ನೇ ಬೆಟಾಲಿಯನ್’ನ ಕಾನ್ಸ್ಟೇಬಲ್ ತೇಜ್ ಬಹದ್ದೂರ್ ಯಾದವ್ ಭಾನುವಾರದಂದು ಯೋಧರಿಗೆ ನೀಡಲಾಗುವ ಆಹಾರದ ಬಗ್ಗೆ ನಾಲ್ಕು ವಿಡಿಯೋಗಳನ್ನು ಪೋಸ್ಟ್ ಮಾಡಿದ್ದರು. ಇದರಲ್ಲಿ ಬೆಳಗಿನ ತಿಂಡಿಗೆ ಒಂದು ಸೀದು ಹೋಗಿರುವ ಪರೋಟ ಮತ್ತು ಟಿ ಅಷ್ಟೇ ನೀಡಲಾಗುತ್ತದೆ. ಪರೋಟದ ಜೊತೆ ಉಪ್ಪಿನಕಾಯಿ, ಜಾಮ್ ಅಥವಾ ಬೆಣ್ಣೆ ಏನನ್ನೂ ನೀಡಲ್ಲ. ಮಧ್ಯಾಹ್ನ ರೊಟ್ಟಿಯ ಜೊತೆ ನೀಡಲಾಗುವ ದಾಲ್’ನಲ್ಲಿ ಅರಶಿನ ಮತ್ತು ಉಪ್ಪು ಬಿಟ್ಟರೆ ಏನೂ ಇರಲ್ಲ. ಭಾರತೀಯ ಸರಕಾರ ಯೋಧರಿಗೆ ಎಲ್ಲ ಸೌಲಭ್ಯಗಳನ್ನೂ ನೀಡುತ್ತಿದೆ. ಆದರೆ, ಹಿರಿಯ ಅಧಿಕಾರಿಗಳ ಭ್ರಷ್ಟಾಚಾರದಿಂದ ನಮಗೆ ಸಮರ್ಪಕ ಊಟ ಸಿಗುತ್ತಿಲ್ಲ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಗಮನಹರಿಸಿ ನಮ್ಮ ಸಮಸ್ಯೆಯನ್ನು ಬಗೆಹರಿಸಬೇಕೆಂದು ವಿಡಿಯೋ ಮೂಲಕ ಮನವಿ ಮಾಡಿದ್ದರು.

ಸೋಮವಾರ ರಾತ್ರಿ ಸೇನೆಯ ಹಿರಿಯ ಅಧಿಕಾರಿಗಳು ಗಡಿ ಪ್ರದೇಶದತ್ತ ದೌಡಾಯಿಸಿದ್ದು, ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.

ಅರೆಸೇನಾ ಸಿಬ್ಬಂದಿ ಎದುರಿಸುತ್ತಿರುವ ಕೆಲಸದೊತ್ತಡ ಮತ್ತು ಅವರನ್ನು ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ಈ ಮೊದಲು ಕೆಲ ನಿದರ್ಶನಗಳು ಬೆಳಕಿಗೆ ಬಂದಿದ್ದು, ಯಾದವ್ ಅವರು ಪೋಸ್ಟ್ ಮಾಡಿರುವ ವಿಡಿಯೋದಿಂದ ಅವರಿಗೆ ನೀಡಲಾಗುವ ಆಹಾರದ ಚಿತ್ರಣವೂ ಹೊರಬಿದ್ದಿದೆ.

Leave a Reply

comments

Related Articles

error: