ದೇಶಪ್ರಮುಖ ಸುದ್ದಿ

ವಿಜಯ ಬ್ಯಾಂಕ್ ವೀಲಿನ ವಿರೋಧಿಸಿ ಇಂದು ಮುಷ್ಕರ: ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯ

ನವದೆಹಲಿ (ಡಿ.26): ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್‌ಗಳನ್ನು ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಗೊಳಿಸುವ ಪ್ರಸ್ತಾವವನ್ನು ವಿರೋಧಿಸಿ ಬ್ಯಾಂಕುಗಳ ಒಕ್ಕೂಟ ಬುಧವಾರ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವುದರಿಂದ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಸೇವೆಯಲ್ಲಿ ವ್ಯತ್ಯ ಉಂಟಾಗಲಿದೆ.

ಒಂದು ವಾರದೊಳಗೆ ಇದು ಬ್ಯಾಂಕುಗಳ ಎರಡನೆಯ ಪ್ರತಿಭಟನೆಯಾಗಿದೆ. ಕಳೆದ ಶುಕ್ರವಾರ (ಡಿ.21) ಬ್ಯಾಂಕುಗಳ ವಿಲೀನದ ಉದ್ದೇಶವನ್ನು ಖಂಡಿಸಿ ಮತ್ತು ವೇತನ ಸಮಸ್ಯೆಯನ್ನು ಕೂಡಲೇ ಸರಿಪಡಿಸುವಂತೆ ಒತ್ತಾಯಿಸಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಅಧಿಕಾರಿಗಳ ಒಕ್ಕೂಟದಿಂದ ಮುಷ್ಕರ ನಡೆದಿತ್ತು. ಬಹುತೇಕ ಬ್ಯಾಂಕುಗಳು ಮುಷ್ಕರ ಬಗ್ಗೆ ಮೊದಲೇ ಗ್ರಾಹಕರಿಗೆ ಮಾಹಿತಿ ನೀಡಿದ್ದವು. ಖಾಸಗಿ ವಲಯದ ಬ್ಯಾಂಕುಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.

ಬ್ಯಾಂಕ್ ಒಕ್ಕೂಟಗಳ ಸಂಘಟನಾ ವೇದಿಕೆ (ಯುಎಫ್‌ ಬಿಯು) ಈ ಮುಷ್ಕರಕ್ಕೆ ಕರೆ ನೀಡಿದೆ. ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ (ಎಐಬಿಇಎ), ಬ್ಯಾಂಕ್ ಉದ್ಯೋಗಿಗಳ ರಾಷ್ಟ್ರೀಯ ಒಕ್ಕೂಟ ಮತ್ತು ಬ್ಯಾಂಕ್ ಕೆಲಸಗಾರರ ರಾಷ್ಟ್ರೀಯ ಸಂಘಗಳು ಸೇರಿದಂತೆ ಒಂಬತ್ತು ಒಕ್ಕೂಟಗಳನ್ನು ಯುಎಫ್ ಬಿಯು ಒಳಗೊಂಡಿದ್ದು, ಸುಮಾರು 10 ಲಕ್ಷ ಅಧಿಕಾರಿಗಳು ಮತ್ತು ಸಿಬ್ಬಂದಿ ಇದರಲ್ಲಿದ್ದಾರೆ.

ಮೂರು ಬ್ಯಾಂಕುಗಳ ವಿಲೀನ ವಿರೋಧಿಸಿ ಕಾರ್ಮಿಕ ಆಯೋಗದ ಹೆಚ್ಚುವರಿ ಮುಖ್ಯಸ್ಥರೊಂದಿಗೆ ನಡೆದ ಸಭೆಯಲ್ಲಿ ಯಾವುದೇ ಭರವಸೆ ದೊರಕಿಲ್ಲ. ಹೀಗಾಗಿ ಒಕ್ಕೂಟಗಳು ಮುಷ್ಕರಕ್ಕೆ ಮುಂದಾಗಿವೆ ಎಂದು ಎಐಬಿಇಎ ಪ್ರಧಾನ ಕಾರ್ಯದರ್ಶಿ ಸಿ.ಎಚ್ ವೆಂಕಟಾಚಲಂ ತಿಳಿಸಿದ್ದಾರೆ. ಸಭೆಯಲ್ಲಿ ಸರ್ಕಾರವಾಗಲೀ, ಇದಕ್ಕೆ ಸಂಬಂಧಿಸಿದ ಬ್ಯಾಂಕುಗಳಾಗಲೀ ತಾವು ವಿಲೀನಕ್ಕೆ ಮುಂದಾಗುವುದಿಲ್ಲ ಎಂಬ ಭರವಸೆ ನೀಡಲಿಲ್ಲ ಎಂದು ಅವರು ಹೇಳಿದ್ದಾರೆ.

ಬ್ಯಾಂಕುಗಳನ್ನು ವಿಲೀನ ಮಾಡುವ ಮೂಲಕ ಗಾತ್ರದಲ್ಲಿ ಬೃಹತ್ತಾಗಿ ಬೆಳೆಯಲು ಅನುಕೂಲವಾಗುತ್ತದೆ ಎಂದು ಸರ್ಕಾರ ಹೇಳುತ್ತದೆ. ಆದರೆ, ಸಾರ್ವಜನಿಕ ವಲಯದ ಎಲ್ಲ ಬ್ಯಾಂಕುಗಳು ಒಂದೇ ಸಮೂಹದೊಳಗೆ ಸೇರಿಕೊಂಡರೆ ವಿಲೀನಗೊಂಡ ಸಂಸ್ಥೆಯು ಟಾಪ್ 10 ಜಾಗತಿಕ ಪಟ್ಟಿಯೊಳಗೆ ಸ್ಥಾನ ಪಡೆಯುವುದಿಲ್ಲ ಎಂಬುದು ಒಕ್ಕೂಟಗಳ ಅಭಿಪ್ರಾಯವಾಗಿದೆ. (ಎನ್.ಬಿ)

Leave a Reply

comments

Related Articles

error: