ದೇಶಪ್ರಮುಖ ಸುದ್ದಿ

ಮುಂದಿನ ಪ್ರಧಾನಿ ಯಾರೆಂದು ಹೇಳಲು ಸಾಧ್ಯವಿಲ್ಲ: ಯೋಗ ಗುರು ರಾಮ್‌ದೇವ್

ಮಧುರೈ (ಡಿ.26): ಮುಂಬರುವ ಮಹಾ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆಂದು ಹೇಳಲು ಕಷ್ಟವಾಗುತ್ತದೆ. ಮುಂದಿನ ಪ್ರಧಾನಮಂತ್ರಿ ಯಾರಾಗುತ್ತಾರೆ ಅಥವಾ ಯಾರು ದೇಶವನ್ನು ಮುನ್ನಡೆಸುತ್ತಾರೆಂದು ಹೇಳಲು ನಮಗೆ ಸಾಧ್ಯವಿಲ್ಲ. ಆದರೆ ಪರಿಸ್ಥಿತಿ ತುಂಬಾ ಕುತೂಹಲಕಾರಿಯಾಗಿದೆ ಎಂದು ಯೋಗ ಗುರು ರಾಮ್‌ದೇವ್ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗೆ ನಡೆದ ಐದು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ 3 ರಾಜ್ಯಗಳಲ್ಲಿ ಜಯ ದಾಖಲಿಸಿದ್ದರೆ, ಇನ್ನೆರಡು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷ ಮೇಲುಗೈ ಸಾಧಿಸಿದ್ದವು. ಬಿಜೆಪಿ ಸಾಧನೆ ಶೂನ್ಯವಾಗಿತ್ತು. ಐದು ರಾಜ್ಯಗಳ ಫಲಿತಾಂಶ ಹೊರಬಂದ 2 ವಾರಗಳ ಬಳಿಕ ರಾಮ್‌ದೇವ್‌ರಿಂದ ಈ ಹೇಳಿಕೆ ಬಂದಿದೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನು ಯಾವುದೇ ವ್ಯಕ್ತಿ ಅಥವಾ ಪಕ್ಷವನ್ನ್ನು ಬೆಂಬಲಿಸುವುದಿಲ್ಲ. ನಾನು ರಾಜಕೀಯದತ್ತ ಗಮನ ಹರಿಸುವುದಿಲ್ಲ. ನಮ್ಮಲ್ಲಿ ಯಾವುದೇ ರಾಜಕೀಯ ಅಥವಾ ಧಾರ್ಮಿಕ ಕಾರ್ಯಸೂಚಿಯಿಲ್ಲ. ನಾವು ಅಧ್ಯಾತ್ಮಿಕ ದೇಶ ಹಾಗೂ ಅಧ್ಯಾತ್ಮಿಕ ವಿಶ್ವ ನಿರ್ಮಾಣಕ್ಕೆ ಬಯಸಿದ್ದೇವೆ. ಯೋಗ ಹಾಗೂ ವೇದಗಳ ಅಭ್ಯಾಸದಿಂದ ಇದು ಸಾಧ್ಯ ಎಂದು ರಾಮ್‌ದೇವ್ ಹೇಳಿದ್ದಾರೆ.

52 ವಯಸ್ಸಿನ ರಾಮ್‌ದೇವ್ 2014ರ ಸಾರ್ವತ್ರಿಕ ಚುನಾವಣಾ ಪ್ರಚಾರದಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದರು. ವರ್ಷದ ಬಳಿಕ ಹರ್ಯಾಣದ ರಾಯಭಾರಿಯಾಗಿ ನೇಮಕಗೊಂಡಿದ್ದ ರಾಮ್‌ದೇವ್‌ಗೆ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿತ್ತು. ರಾಜ್ಯಕ್ಕೆ ಭೇಟಿ ನೀಡಿದಾಗಲೆಲ್ಲಾ ಸರಕಾರಿ ಕಾರು, ಭದ್ರತಾ ಸಿಬ್ಬಂದಿ ಹಾಗೂ ಬೆಂಗಾವಲು ಪಡೆಯನ್ನು ಒದಗಿಸಲಾಗುತ್ತಿದೆ.

ಆದರೆ ಇದೀಗ, 2019ರ ಸಾರ್ವತ್ರಿಕ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಮ್‍ದೇವ್ ದೇಶದ ರಾಜಕೀಯ ಪರಿಸ್ಥಿತಿ ಸಂಕೀರ್ಣವಾಗಿದೆ ಎಂದು ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ. (ಎನ್.ಬಿ)

Leave a Reply

comments

Related Articles

error: