
ಪ್ರಮುಖ ಸುದ್ದಿ
ಕುಟುಂಬದ ಸ್ಥಿತಿ ನೋಡಿ ಉದ್ವೇಗದಿಂದ ಶೂಟೌಟ್ ಪದ ಬಳಕೆ ಮಾಡಿದೆ : ಸಿಎಂ ಹೆಚ್.ಡಿ ಕುಮಾರಸ್ವಾಮಿ ಸ್ಪಷ್ಟನೆ
ರಾಜ್ಯ(ಬೆಂಗಳೂರು)ಡಿ.26:- ಜೆಡಿಎಸ್ ಮುಖಂಡ ಪ್ರಕಾಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕರನ್ನು ಶೂಟೌಟ್ ಮಾಡಿ ಎಂದು ಹೇಳಿಕೆ ನೀಡಿದ್ದ ಸಿಎಂ ಹೆಚ್.ಡಿ ಕುಮಾರಸ್ವಾಮಿ ಇದೀಗ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.
ನಾನು ಎಮೋಶನಲ್ ವ್ಯಕ್ತಿ. ಯಾರೇ ಸಂಕಷ್ಟದಲ್ಲಿದ್ದರೂ ತಕ್ಷಣ ಸ್ಪಂದಿಸುತ್ತೇನೆ. ಆ ಕುಟುಂಬದ ಸ್ಥಿತಿ ನೋಡಿ ಉದ್ವೇಗದಿಂದ ಶೂಟೌಟ್ ಪದ ಬಳಕೆ ಮಾಡಿದೆ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.
ವಿಧಾನಸೌಧದಲ್ಲಿ ಇಂದು ಮಾತನಾಡಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಶೂಟೌಟ್ ಹೇಳಿಕೆಯನ್ನು ದೊಡ್ಡದು ಮಾಡುವ ಅಗತ್ಯವಿಲ್ಲ. ಯಾವುದೇ ಕಾರಣಕ್ಕೂ ನಾನು ಕ್ಷಮಾಪಣೆ ಕೇಳಲ್ಲ. ಯಡಿಯೂರಪ್ಪ ಸಿಎಂ ಆಗಿದ್ದಾಗ ರೈತರು ಗೊಬ್ಬರ ಕೇಳಿದಾಗ ಲಾಠಿಚಾರ್ಜ್ ಮಾಡಿಸಿ ಇಬ್ಬರು ರೈತರ ಎನ್ ಕೌಂಟರ್ ಮಾಡಿಸಲಿಲ್ಲವೇ. ಅದರ ಬಗ್ಗೆ ಬಿಜೆಪಿಯವರು ಮಾತನಾಡಲಿ ಎಂದು ಬಿಎಸ್ ವೈಗೆ ಟಾಂಗ್ ಕೊಟ್ಟರು.
ಈ ಬಗ್ಗೆ ನಿನ್ನೆಯೇ ಕ್ಲಾರಿಫಿಕೇಶನ್ ಕೊಟ್ಟಿದ್ದೇನೆ. ನಾನೂ ಒಬ್ಬ ಮಾನವ ಜೀವಿ. ಪ್ರತಿಯೊಬ್ಬರಲ್ಲಿ ಇರುವ ಸಹಜ ಪ್ರತಿಕ್ರಿಯೆ ಅದು. ಅದನ್ನು ಯಾರೂ ಸೀರಿಯಸ್ ಆಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದರು.
ದೆಹಲಿಗೆ ಹೋಗುತ್ತಿದ್ದೇನೆ. ಸಮಯ ಸಿಕ್ಕರೆ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುವೆ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು. (ಕೆ.ಎಸ್,ಎಸ್.ಎಚ್)