ಪ್ರಮುಖ ಸುದ್ದಿ

ಖಾಸಗಿ ಬಸ್ ನಿಲ್ದಾಣ ಸ್ಥಳಾಂತರದ ಸಾಧಕ, ಬಾಧಕ : ನಿರ್ದಿಷ್ಟ ನಿರ್ಧಾರಕ್ಕೆ ಬಾರದ ಸಭೆ : ಕೈಗಾರಿಕಾ ಬಡಾವಣೆ ರಸ್ತೆ ಮೇಲೆ ಒಲವು

ರಾಜ್ಯ( ಮಡಿಕೇರಿ) ಡಿ.26 :- ನಗರದಲ್ಲಿ ನೂತನ ಖಾಸಗಿ ಬಸ್ ನಿಲ್ದಾಣ ನಿರ್ಮಾಣಗೊಂಡು ವರ್ಷವೇ ಸಮೀಪಿಸಿದರೂ ಸ್ಥಳಾಂತರ ಪ್ರಕ್ರಿಯೆ ಇನ್ನೂ ಕೂಡ ಆರಂಭವಾಗಿಲ್ಲ. ಇದರಿಂದ ಅಸಮಾಧಾನಗೊಂಡಿರುವ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಸಭೆ ಮೇಲೆ ಸಭೆ ನಡೆಸುತ್ತಲೇ ಇದ್ದಾರೆ. ಇಂದು ಕೂಡ ನಗರಸಭಾ ಪ್ರತಿನಿಧಿಗಳು, ಖಾಸಗಿ ಬಸ್ ಮಾಲೀಕರು ಹಾಗೂ ಅಧಿಕಾರಿಗಳ ಸಭೆ ನಡೆಯಿತ್ತಾದರೂ ಒಂದು ನಿರ್ದಿಷ್ಟ ನಿರ್ಧಾರ ಕೈಗೊಳ್ಳುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ.

ಈ ಹಿಂದೆ ರಾಜಾಸೀಟು ರಸ್ತೆಯ ಮೂಲಕ ಖಾಸಗಿ ಬಸ್‍ಗಳು ಆಗಮಿಸಿ ಬಸ್ ನಿಲ್ದಾಣ ಸೇರುವುದು ಮತ್ತು ಕೈಗಾರಿಕಾ ಬಡಾವಣೆ ರಸ್ತೆ ಮೂಲಕ ನಿರ್ಗಮಿಸುವುದು ಎಂದು ಬಸ್ ಮಾರ್ಗ ಗುರುತಿಸಲಾಗಿತ್ತು. ಅಲ್ಲದೆ ರಾಜಾಸೀಟು ರಸ್ತೆಯ ಕಟ್ಟಡ ಮಾಲೀಕರುಗಳಿಗೆ ನೊಟೀಸ್ ನೀಡಿ 7 ದಿನಗಳ ಒಳಗೆ ರಸ್ತೆಗೆ ಅಗತ್ಯವಿರುವ ಜಾಗವನ್ನು ಬಿಟ್ಟುಕೊಡುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ ಇಂದು ನಡೆದ ಸಭೆಯಲ್ಲಿ ಕೈಗಾರಿಕಾ ಬಡಾವಣೆ ಮೂಲಕವೇ ಬಸ್‍ಗಳ ಆಗಮನ ಮತ್ತು ನಿರ್ಗಮನ ಸೂಕ್ತ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.

ರಾಜಾಸೀಟು ರಸ್ತೆಯಲ್ಲಿ ಪ್ರವಾಸಿಗರ ವಾಹನದಟ್ಟಣೆ ಹೆಚ್ಚಿರುವುದರಿಂದ ಬಸ್‍ಗಳ ಸಂಚಾರಕ್ಕೆ ಅಡಚಣೆಯಾಗಬಹುದು. ಅಲ್ಲದೆ ಶಾಲೆಯೂ ಈ ಭಾಗದಲ್ಲಿರುವುದರಿಂದ ವಿದ್ಯಾರ್ಥಿಗಳ ಓಡಾಟದ ಸಂದರ್ಭ ಸಮಸ್ಯೆಗಳು ಉದ್ಭವಿಸಬಹುದು. ರಸ್ತೆಗೆ ಅಲ್ಲಲ್ಲಿ ತಡೆಗೋಡೆ ನಿರ್ಮಿಸಲೇಬೇಕಾದ ಅನಿವಾರ್ಯತೆ ಇರುವುದರಿಂದ ಬಸ್‍ಗಳ ಸಂಚಾರಕ್ಕೆ ರಾಜಾಸೀಟು ಮಾರ್ಗವನ್ನು ಸಜ್ಜುಗೊಳಿಸಲು ಸ್ವಲ್ಪ ಸಮಯವೇ ಆಗಬಹುದು ಎನ್ನುವುದು ಪೊಲೀಸ್ ಅಧಿಕಾರಿಗಳ ಅಭಿಪ್ರಾಯವಾಗಿದೆ.

ಕೆಲವರ ಸಲಹೆಯಂತೆ ಜಿಲ್ಲಾಧಿಕಾರಿಗಳು ಪರೀಕ್ಷಾರ್ಥವಾಗಿ ಕೈಗಾರಿಕಾ ಬಡಾವಣೆ ರಸ್ತೆ ಮೂಲಕವೇ ಬಸ್‍ಗಳ ಆಗಮನ ಮತ್ತು ನಿರ್ಗಮನಕ್ಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದ್ದು, ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳುವ ಸಾಧ್ಯತೆಗಳಿದೆ. ಬಸ್ ಸಂಚಾರಕ್ಕೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಶೀಘ್ರ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಅದೇ ಪ್ರಕಾರವಾಗಿ ರಾಜಾಸೀಟು ರಸ್ತೆ ವಿಸ್ತರಣೆಗೂ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.

ಬಸ್ ನಿಲ್ದಾಣ ಸ್ಥಳಾಂತರ ಸಂಬಂಧ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರ ಅಧ್ಯಕ್ಷತೆಯಲ್ಲಿ ನಗರಸಭಾ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ನಗರಸಭಾ ಉಪಾಧ್ಯಕ್ಷರಾದ ಟಿ.ಎಸ್.ಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಉಣ್ಣೀಕೃಷ್ಣ ಇತರರ ಉಪಸ್ಥಿತಿಯಲ್ಲಿ ಸಭೆ ನಡೆಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾಹಿತಿ ಪಡೆದ ಜಿಲ್ಲಾಧಿಕಾರಿ ಕಳೆದ ಬಾರಿಯ ಸಭೆಯಲ್ಲಿ ತೀರ್ಮಾನಿಸಿದಂತೆ ಬಸ್ ಸಂಚಾರ ಮಾರ್ಗದ ರಸ್ತೆ ಸಮೀಕ್ಷೆ ನಡೆಸಲಾಗಿದೆಯೇ ಎಂದು ಪ್ರಶ್ನಿಸಿದರು.

ಈ ಬಗ್ಗೆ ಮಾಹಿತಿ ಎಂಜಿನಿಯರ್ ವನಿತಾ ಮತ್ತು ನಗರ ಪೊಲೀಸ್ ಇನ್ಸ್‍ಪೆಕ್ಟರ್ ಅನೂಪ್ ಮಾದಪ್ಪ ಅವರು ಸರ್ವೇ ಕಾರ್ಯ ಮಾಡಲಾಗಿದೆ. ರಾಜಾಸೀಟು, ಎಲ್‍ಐಸಿ ಮಾರ್ಗದ ರಸ್ತೆ ವಿಸ್ತರಣೆ ಮಾಡಬೇಕಿದ್ದು, ಒಂದು ಬದಿ ತಡೆಗೋಡೆ ನಿರ್ಮಾಣ ಮಾಡಬೇಕಿದೆ. ಅದಕ್ಕಾಗಿ ಕಾಲಾವಕಾಶ ಬೇಕಾಗಿದೆ ಎಂದು ಅವರು ಮಾಹಿತಿ ನೀಡಿದರು.

ಇದಕ್ಕೆ ಧ್ವನಿಗೂಡಿಸಿದ ನಗರಸಭೆ ಉಪಾಧ್ಯಕ್ಷರಾದ ಟಿ.ಎಸ್.ಪ್ರಕಾಶ್ ಅವರು ರಾಜಾಸೀಟು, ಎಲ್‍ಐಸಿ ಮಾರ್ಗದ ರಸ್ತೆ ಬದಿ ಅಗಲೀಕರಣ ಸಂಬಂಧ ಸಾರ್ವಜನಿಕರನ್ನು ಕರೆಸಿ ಮಾತನಾಡುವುದು ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸದ್ಯ ಕೈಗಾರಿಕಾ ಬಡಾವಣೆಯ ರಸ್ತೆಯಲ್ಲಿ ವಾಹನ ಪಾರ್ಕಿಂಗ್ ತೆಗೆದರೆ ದ್ವಿಮುಖವಾಗಿ ವಾಹನಗಳು ಸಂಚರಿಸಬಹುದಾಗಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ಸದ್ಯಕ್ಕೆ ಖಾಸಗೀ ಬಸ್‍ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕಿದೆ. ತಾತ್ಕಾಲಿಕ ವ್ಯವಸ್ಥೆ ಹಾಗೂ ಮುಂದಿನ ದೀರ್ಘಾವಧಿ ಯೋಜನೆ ಬಗ್ಗೆ ಯೋಚಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ಕೈಗಾರಿಕಾ ಬಡಾವಣೆಯಲ್ಲಿ ಪಾದಚಾರಿ ಮಾರ್ಗ ಇನ್ನೂ ವ್ಯವಸ್ಥಿತವಾಗಿ ನಿರ್ಮಾಣ ಮಾಡಬೇಕು ಎಂದು ಹಲವರು ಸಲಹೆ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷರಾದ ಹೊಸೂರು ರಮೇಶ್ ಜೋಯಪ್ಪ ಇತರರು ಹಲವು ಸಲಹೆ ನೀಡಿದರು.

ನಗರಸಭೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಉನ್ನೀಕೃಷ್ಣ, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕರಾದ ಗೋಪಾಲಕೃಷ್ಣ, ಪೌರಾಯುಕ್ತರಾದ ಎಂ.ಎಲ್.ರಮೇಶ್, ಎಇಇ ಹೇಮಂತ್ ಕುಮಾರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಸೌಂದರ್ಯ ಇತರರು ಹಾಜರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: