ಪ್ರಮುಖ ಸುದ್ದಿಲೈಫ್ & ಸ್ಟೈಲ್

ಪ್ಲಾಸ್ಟಿಕ್ ಹಾಳೆ ಬಳಕೆಯಿಂದ ಕ್ಯಾನ್ಸರ್ ಖಚಿತ: ಆರೋಗ್ಯ ಕಾಳಜಿ ವಹಿಸಿಲು ಎಚ್ಚರಿಕೆ

ಹಾಸನ (ಡಿ.27): ಗಾಳಿ ನೀರು ಬೆಳಕು ಮತ್ತು ಅಹಾರ ಪ್ರತಿ ಮಾನವನ ಜೀವನಕ್ಕೆ ಬೇಕಾದ ಅತಿಮುಖ್ಯವಾದ ಮೂಲಭೂತ ಅಂಶಗಳಾಗಿವೆ. ನಾವು ತಿನ್ನುವ ಗುಣಮಟ್ಟದ ಅಹಾರ ರೋಗಗಳಿಂದ ಸಂರಕ್ಷಿಸುತ್ತದೆ. ಶುದ್ಧ ಅಹಾರ ನಮಗೆ ಆರೋಗ್ಯ, ಸಂತೋಷ, ದಕ್ಷತೆ ಮತ್ತು ದೀರ್ಘಾಯುಷ್ಯ ನೀಡುತ್ತದೆ, ಸುರಕ್ಷಿತ ಅಹಾರ ರೋಗರುಜಿನಗಳಿಂದ ಹಾಗೂ ಅಪಾಯದ ಮೂಲಗಳಿಂದ ಮುಕ್ತವಾಗಿರುವುದು.

ಗುಣಮಟ್ಟ ಮತ್ತು ತಾಜಾ ಆಹಾರ ಸೇವನೆ ಅತ್ಯಗತ್ಯ. ಅಹಾರ ಸುರಕ್ಷತೆ ವಹಿಸದಿದ್ದರೆ ಅನಾರೋಗ್ಯ ಮತ್ತು ಅಪಾಯವನ್ನು ಉಂಟುಮಾಡುತ್ತದೆ ಗುಣಮಟ್ಟದ ಆಹಾರ ಮಾನವ ಬಳಕೆಗಾಗಿ ಹಾಗೂ ಸುರಕ್ಷಿತ ಆರೋಗ್ಯಕ್ಕೆ ಅಗತ್ಯವಿರುತ್ತದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟವನ್ನು ಕಪಾಡಲು ಭಾರತ ಸರ್ಕಾರವು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ನಿಯಮ ಮತ್ತು ನಿಬಂಧನೆ 2011 ದೇಶದಾದ್ಯಂತ 5 ಅಗಸ್ಟ್ 2011ರಂದು ಜಾರಿಗೆ ಬಂದಿದೆ. ಈ ಕಾಯ್ದೆಯನ್ವಯ ಬೀದಿ ಬದಿಯಲ್ಲಿ ಆಹಾರ ಪದಾರ್ಥ ತಯಾರಿಸಿ ವ್ಯಾಪಾರ ಮಾಡುವ ಮಾರಾಟಗಾರರು ಎಫ್.ಎಸ್.ಎಸ್.ಎ ನೋಂದಣಿಯನ್ನು ಕಡ್ಡಾಯವಾಗಿ ಪಡೆದು ಕೆಳಕಂಡ ಸುರಕ್ಷತ ಕ್ರಮಗಳನ್ನು ಅನುಸರಿಸಬೇಕಾಗಿರುತ್ತದೆ.

ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಹಾಳೆ ಬಳಕೆಯಿಂದ ಕ್ಯಾನ್ಸರ್’ಕಾರಕ ಅಂಶಗಳು ಇಡ್ಲಿಗೆ ಸೇರ್ಪಡೆ:

ಇಡ್ಲಿ ಹಾಗೂ ಇನ್ನಿತರ ಆಹಾರ ಪದಾರ್ಥಗಳನ್ನು ತಯಾರಿಸಲು ಬಳಸುವ ಪ್ಲಾಸ್ಟಿಕ್‍ನಲ್ಲಿ ಪಾಲಿಇಥಿಲಿನ್ ಎಂಬ ರಸಾಯನಿಕ ಅಂಶವಿದ್ದು, ಇಡ್ಲಿಯನ್ನು ಬೇಯಿಸುವಾಗ ಕ್ಯಾನ್ಸರ್‍ಕಾರಕ ಅಂಶವು ಇಡ್ಲಿಗೆ ಸೇರುವುದರಿಂದ ಇಂತಹ ಆಹಾರ ಪದಾರ್ಥಗಳನ್ನು ಸಾರ್ವಜನಿಕರು ಸೇವೆನೆ ಮಾಡಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಹಾಗೂ ಕ್ಯಾನ್ಸರ್‍ನಂತಹ ಮಾರಕ ರೋಗವು ಬರುವ ಸಾಧ್ಯತೆ ಇರುತ್ತದೆ.

ಬೀದಿ ಬದಿ ವ್ಯಾಪಾರಿಗಳು, ಹೋಟೆಲ್ ಉದ್ದಿಮೆದಾರರು ಹಾಗೂ ಇನ್ನಿತರ ಆಹಾರ ಪದಾರ್ಥ ತಯಾರಕರು ಪ್ಲಾಸ್ಟಿಕ್ ಬಳಸಿ ಇಡ್ಲಿ ಇನ್ನಿತರ ಬಿಸಿ ಆಹಾರ ಪದಾರ್ಥಗಳನ್ನು ಪ್ಲಾಸ್ಟಿಕ್ ಹಾಳೆ/ಕವರ್‍ಗಳನ್ನು ಬಳಸುವ ವಿಧಾನವನ್ನು ನಿಲ್ಲಿಸುವಂತೆ ಎಚ್ಚರಿಕೆ ನೀಡಲಾಗಿದೆ.

ಪ್ರಿಂಟೆಡ್ ಪೇಪರ್ ಬಳಕೆಯಿಂದ ಸೀಸದ ಅಂಶವು ಆಹಾರ ಪದಾರ್ಥಕ್ಕೆ ಸೇರ್ಪಡೆ:

ಬೊಂಡಾ ಬಜ್ಜಿ ಮಾರಾಟಗಾರರು ಹಾಗೂ ಇನ್ನಿತರ ವ್ಯಾಪಾರ ಸ್ಥಳಗಳಲ್ಲಿ ಆಹಾರ ಪದಾರ್ಥಗಳನ್ನು ಪ್ರಿಂಟೆಡ್ ಪೇಪರ್ (ದಿನಪತ್ರಿಕೆ ಹಾಗೂ ಇತರೆ) ಬಳಸುತ್ತಿರುತ್ತಾರೆ. ಪೇಪರ್‍ನಲ್ಲಿರುವ ಸೀಸದ ಅಂಶವು ಆಹಾರ ಪದಾರ್ಥದೊಂದಿಗೆ ಸಾರ್ವಜನಿಕರ ದೇಹವನ್ನು ಸೇರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಆಹಾರ ಪದಾರ್ಥ ವ್ಯಾಪಾರಿಗಳು ಪ್ರಿಂಟೆಡ್ ಪೇಪರ್‍ನಲ್ಲಿ ಆಹಾರ ಪದಾರ್ಥಗಳನ್ನು ನೀಡಬಾರದೆಂದು ಈ ಮೂಲಕ ತಿಳಿಸಿದೆ.

ಸ್ವಚ್ಚತೆ ಮತ್ತು ಶುಚಿತ್ವ:

ಆಹಾರ ವ್ಯಾಪಾರ ಮಾಡುವ ಸ್ಥಳವು ಸ್ವಚ್ಚವಾಗಿರಬೇಕು, ಚರಂಡಿ ಹತ್ತಿರ ವ್ಯಾಪಾರ ಮಾಡಬಾರದು ಅಥವಾ ಒಳಚರಂಡಿ ವ್ಯವಸ್ಥೆ ಇರಬೇಕು ಮತ್ತು ದುರ್ವಾಸನೆ ಮುಕ್ತವಾಗಿರಬೇಕು, ಪ್ರಾಣಿಪಕ್ಷಿಗಳು ಸ್ಥಳಕ್ಕೆ ಬಾರದಂತೆ ತಡೆಯಬೇಕು, ವ್ಯಾಪಾರ ಮಾಡುವ ಗಾಡಿ/ಅಂಗಡಿ ತುಕ್ಕುರಹಿತವಾಗಿರಬೇಕು, ತುಕ್ಕು ಆಹಾರ ಪದಾರ್ಥಗಳಿಗೆ ಸೇರಿದರೆ ಅಂಥಹ ಆಹಾರವನ್ನು ಸೇವಿಸುವವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ದೂಳಿನ ಕಣಗಳು, ನೊಣ ಹಾಗೂ ಕ್ರಿಮಿಕೀಟಗಳು ಆಹಾರ ಪದಾರ್ಥದ ಮೇಲೆ ಕೂರದಂತೆ ಎಚ್ಚರವಹಿಸಬೇಕು.

ಆಹಾರ ಪದಾರ್ಥಗಳನ್ನು ಸಂಗ್ರಹಣೆ ಮಾಡುವಾಗ ಆಹಾರಕ್ಕೆಂದೇ ಇರುವ ಆಹಾರ ದರ್ಜೆಯ ಪ್ಲಾಸ್ಟಿಕ್ ಪಾತ್ರೆಗಳನ್ನು ಉಪಯೋಗಿಸುವುದು. ಸಸ್ಯಹಾರಿ ಮತ್ತು ಮಾಂಸಹಾರಿ ಆಹಾರ ಪದಾರ್ಥಗಳನ್ನು ಬೇರ್ಪಡಿಸುವುದು. ಆಹಾರ ಪದಾರ್ಥ ತಯಾರಿಸುವಾಗ ಟೇಸ್ಟಿಂಗ್ ಪೌಡರ್, ನಿಷೇದಿತ ಬಣ್ಣ ಉಪಯೋಗಿಸಬಾರದು ಹಾಗೂ ಅವಕಾಶವಿರುವ ಬಣ್ಣವನ್ನು ಪ್ರಮಾಣಕ್ಕನುಸಾರವಾಗಿ ಬಳಸುವುದು. ಆಹಾರ ಪದಾರ್ಥ ತಯಾರಿಸಲು ಒಮ್ಮೆ ಉಪಯೋಗಿಸಿದ ಅಡುಗೆ ಎಣ್ಣೆಯನ್ನು ಮತ್ತೆ ಉಪಯೋಗಿಸಬಾರದು. ಕಸ ನಿರ್ವಹಣೆ ವ್ಯವಸ್ಥೆ ಕ್ರಮಬದ್ಧವಾಗಿರಬೇಕು, ಕಸದ ಬುಟ್ಟಿಗಳನ್ನು ಬದ್ರಗೊಳಿಸಿ ನಿಗದಿತ ಸ್ಥಳದಲ್ಲಿ ವಿಲೇವಾರಿ ಮಾಡುವುದು.

ಆಹಾರ ವ್ಯಾಪಾರ ಮಾಡುವ ಗಾಡಿ/ಅಂಗಡಿ ನೆಲಮಟ್ಟದಿಂದ 60 ರಿಂದ 70.ಸೆ.ಮೀ ಮೇಲ್ಬಾಗದಲ್ಲಿರಬೇಕು, ಸ್ಥಳದ ಸುತ್ತಮುತ್ತ ಸುಲಬವಾಗಿ ಶುಚಿಗೊಳಿಸುವಂತಿರಬೇಕು ಹಾಗೂ ಶುಚಿಯಾಗಿರಬೇಕು. ಅಡುಗೆಗೆ ಬಳಸುವ ಆಹಾರ ಪಾತ್ರಗಳು ಹಾಗೂ ತುಕ್ಕು ತಗ್ಗಡುಗಳಿಂದ ಕೂಡಿರಬಾರದು. ವ್ಯಾಪಾರ ಮುಗಿದ ನಂತರ ಪಾತ್ರೆಗಳನ್ನುಬಳಸಿ ಹರಿಯುವ ನಲ್ಲಿ ನೀರಿನಿಂದ ತೊಳೆದು ಶುಚಿಯಾದ ಬಟ್ಟೆಯಿಂದ ಒರೆಸುವುದು. ಪಾತ್ರೆ ಹಾಗೂ ಪ್ಲೇಟ್‍ಗಳಲ್ಲಿ ಉಳಿದ ಆಹಾರ ಪದಾರ್ಥಗಳನ್ನು ಕಸದ ಬುಟ್ಟಿಗಳಲ್ಲಿ ಹಾಕಿ ಕ್ರಮಬದ್ಧವಾಗಿ ವಿಲೇವಾರಿ ಮಾಡುವುದು.

ಕುಡಿಯುವ ನೀರು:

ಅಡುಗೆಗೆ ಮತ್ತು ಕುಡಿಯಲು ಬಳಸುವ ನೀರು ಶುದ್ಧ ಕುಡಿಯುವ ನೀರಾಗಿರಬೇಕು ಹಾಗೂ ಕಾಯಿಸಿ ಆರಿಸಿದ ನೀರನ್ನು ಕುಡಿಯಲು ನೀಡುವುದು. ಆಹಾರ ವ್ಯಾಪಾರ ಸ್ಥಳಕ್ಕೆ ನೀರನ್ನು ತರುವಾಗ ಯಾವುದೇ ರೀತಿಯ ದೂಳು ಬೀಳದಂತೆ, ನೀರು ಕಲುಷಿತವಾಗದಂತೆ ಮುಚ್ಚಿ ರವಾನೆ ಮಾಡುವುದು.

ವೈಯಕ್ತಿಕ ಶುಚಿತ್ವ:

ಆಹಾರ ತಯಾರಕರು/ನಿರ್ವಾಹಣಾಕಾರರು ಆಹಾರ ತಯಾರಿಸುವಾಗ, ಬಡಿಸುವಾಗ ಗ್ಲೌಸ್ (ಕೈ ಕವಚ), ಏಪ್ರಾನ್ (ಮುಂಗವಚ), ತಲೆಗೆ ಕ್ಯಾಪ್ ಹಾಗೂ ಬಾಯಿಗೆ ಮಾಸ್ಕನ್ನು ಬಳಸುವುದು. ಶುಚಿಯಾದ ಬಟ್ಟೆಯನ್ನು ಹಾಕಬೇಕು, ಆಹಾರ ತಯಾರಿಸುವ ಮುಂಚೆ ಹಾಗೂ ಶೌಚಾಲಯಕ್ಕೆ ಹೋಗಿ ಬಂದ ನಂತರ ಎರಡು ಕೈಗಳನ್ನು ಸಾಬೂನಿನಿಂದ ಶುದ್ಧವಾಗಿ ತೊಳೆಯಬೇಕು ಹಾಗೂ ಎರಡು ಕೈಬೆರಳುಗಳ ಉಗುರುಗಳನ್ನು ಕತ್ತರಿಸಬೇಕು. ಆಹಾರ ತಯಾರಿಸುವ ಸಂದರ್ಭದಲ್ಲಿ ತಲೆ ಕೆರೆಯುವುದು, ದೇಹದ ಭಾಗಗಳನ್ನು ಕೆರೆಯುವುದು ಮಾಡಬಾರದು, ಅಶುಚಿಯಾಗಿ ವರ್ತಿಸಬಾರದು. ಆಹಾರ ವ್ಯಾಪಾರ ಮಾಡುವ ಸ್ಥಳದಲ್ಲಿ ಚೂಯಿಂಗ್ ಗಮ್, ಗುಟ್ಕಾ, ಪಾನ್ ಮಸಾಲದಂತಹ ಪದಾರ್ಥಗಳನ್ನು ಅಗಿಯುವುದು, ಜಗಿಯುವುದು, ಉಗಿಯುವುದು ಹಾಗೂ ಧೂಮಪಾನ ಮಾಡುವುದನ್ನು ನಿರ್ಬಂಧಿಸಿದೆ.

ಆಹಾರ ವ್ಯಾಪಾರಸ್ಥರು, ಅಡುಗೆಯ ಸಿಬ್ಬಂಧಿ ಹಾಗೂ ಸಪ್ಲೇಯರ್‍ಗಳು ವೈದ್ಯಕೀಯ ಪರೀಕ್ಷೆ ಮಾಡಿಸಿ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯವಾಗಿರುತ್ತದೆ.

ತಪ್ಪಿದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ರ ಪ್ರಕಾರ ಅಂತಹ ವ್ಯಾಪಾರಸ್ಥರ ಮೇಲೆ ದಂಡ ವಿಧಿಸುವ ಮತ್ತು ಪ್ರಕರಣ ದಾಖಲಿಸುವ ಮೂಲಕ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದೆಂದು ಎಚ್ಚರಿಸಿದೆ. ಹಾಗೂ ಸಾರ್ವಜನಿಕರು ಅಂಕಿತ ಅಧಿಕಾರಿಗಳ ಕಚೇರಿ, ಎಫ್.ಎಸ್.ಎಸ್.ಎ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಕಟ್ಟಡ, ಸಾಲಗಾಮೆ ರಸ್ತೆ, ಹಾಸನ (ದೂರವಾಣಿ:-08172-245080) ಗೆ ದೂರು ಸಲ್ಲಿಸಬಹುದಾಗಿರುತ್ತದೆ. (ಎನ್.ಬಿ)

Leave a Reply

comments

Related Articles

error: