
ಕರ್ನಾಟಕಪ್ರಮುಖ ಸುದ್ದಿ
ಮೇಕೆದಾಟು ಜಲಾಶಯದಲ್ಲಿ ಮುಳುಗಡೆಯಾಗಲಿವೆ ಪುಣ್ಯ ಕ್ಷೇತ್ರಗಳು
ಕಾಡು ಪ್ರಾಣಿಗಳ ಆವಾಸ ಸ್ಥಾನಕ್ಕೂ ಕುತ್ತು; ಗ್ರಾಮಗಳಿಗೆ ನುಗ್ಗುವ ಭೀತಿ
ಬೆಂಗಳೂರು (ಡಿ.27): ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಾಣವಾದರೆ ಸಂಗ್ರಹವಾಗುವ ನೀರಿನಲ್ಲಿ ಪುಣ್ಯಕ್ಷೇತ್ರಗಳು ಮತ್ತು ಪ್ರವಾಸಿತಾಣಗಳು ಮುಳುಗಡೆಯಾಗಲಿವೆ.
ಪ್ರಮುಖವಾಗಿ ಮೇಕೆದಾಟು ಡ್ಯಾಮ್ನಿಂದ ಮಳವಳ್ಳಿ ತಾಲೂಕಿನ ಮುತ್ತತ್ತಿಯಲ್ಲಿರುವ ಮುತ್ತತ್ತಿರಾಯನ ದೇಗುಲ ಮುಳಗಡೆಯಾಗಲಿದೆ. ಇದರೊಂದಿಗೆ ಅಲ್ಲಿನ ರಮಣೀಯ ದೃಶ್ಯಕಾವ್ಯವೂ ನಶಿಸಿ ಹೋಗಲಿದೆ. ಪುಣ್ಯಕ್ಷೇತ್ರವಾದ ಮುತ್ತತ್ತಿ ಮುಳುಗಡೆಯಾದರೆ ಅಲ್ಲಿ ವಾಸಿಸುತ್ತಿರುವ 75ಕ್ಕೂ ಹೆಚ್ಚು ಕುಟುಂಬಗಳ 500 ಹೆಚ್ಚು ಜನರ ಬದುಕು ನಾಶವಾಗಲಿದೆ.
ಇದರಿಂದ ಮುತ್ತತ್ತಿ ಆಂಜನೇಯ ವರ ಪ್ರಸಾದದಿಂದಲೇ ನಿತ್ಯ ಬದುಕು ಸಾಗಿಸುವ ಜನರ ಬದುಕು ಕತ್ತಲಲ್ಲಿ ಮುಳಗಲಿದೆ. ಮುತ್ತತ್ತಿ ಒಟ್ಟು ವಿಸ್ತೀರ್ಣ 21 ಎಕರೆ. ಆ ಪ್ರದೇಶದ ದೇವಸ್ಥಾನ, ಮನೆಗಳು, ಜಮೀನುಗಳು, ಅಂಗಡಿ, ಹೋಟೆಲ್ ರೂಮ್ಗಳು ಎಲ್ಲಾ ಪ್ರದೇಶಗಳು ಮುಳುಗಡೆಯಾಗಲಿವೆ. ತಲೆಮಾರುಗಳಿಂದ ನಾವು ದೇವರ ಪೂಜೆ ಪುನಸ್ಕಾರ ಮಾಡಿಕೊಂಡಿದ್ದೆವು. ಕೆಲವರು ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಗ್ರಾಮದ 76 ಕುಟುಂಬಗಳಲ್ಲಿ ಅರ್ಚಕರ ಕುಟುಂಬಗಳಿವೆ. ವಾಸದ ಮನೆಗಳು, ಜಮೀನನ್ನು ಬಿಟ್ಟು ಹೋಗುವುದು ಎಲ್ಲಿಗೆ ಎಂಬ ಪ್ರಶ್ನೆ ಎದುರಾಗಿದೆ.
ಮುತ್ತತ್ತಿ ಅರಣ್ಯ ಪ್ರದೇಶದಲ್ಲಿ ಹೆಚ್ಚು ಕಾಡು ಪ್ರಾಣಿಗಳು ವಾಸವಾಗಿವೆ. ಮುತ್ತತ್ತಿಗೆ ಹೋಗುವಾಗ ಕೆಸರಕ್ಕಿ ಹಳ್ಳದವರೆಗೂ ನೀರು ತುಂಬಿಕೊಳ್ಳುತ್ತದೆ. ಈ ಪ್ರದೇಶದಲ್ಲಿ ನೀರು ತುಂಬಿದರೆ ಕಾಡು ಪ್ರಾಣಿಗಳ ಗತಿ ಏನು ಅನ್ನುವುದು ಈಗ ಆತಂಕದ ವಿಷಯ. ಈಗಾಗಲೇ ಕಾಡಾನೆಗಳು ನಾಡಿನತ್ತ ಬಂದು ರೈತರು ಬೆಳೆದ ಫಸಲನ್ನು ಹಾಳುಮಾಡಿ ಹೋಗುತ್ತಿವೆ. ಹಲಗೂರಿನಿಂದ ಮುತ್ತತ್ತಿ 27 ಕಿ.ಮೀ ದೂರದಲ್ಲಿದ್ದು ನೀರಿನಿಂದ ಮುತ್ತತ್ತಿ ಕಾಡು ಮುಳುಗಡೆಯಾಗುವುದರಿಂದ ಕಾಡಂಚಿನಲ್ಲಿರುವ ಗ್ರಾಮಗಳು ಇವೆ, ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗುವ ಸಂಭವ ಭೀತಿಯೂ ಕಾಡುತ್ತಿದೆ.
ಮುತ್ತತ್ತಿಯ ಆಂಜನೇಯ ಸ್ವಾಮಿ ದೇವಸ್ಥಾನ 1951ರಲ್ಲಿ ಮುಜರಾಯಿ ಇಲಾಖೆಗೆ ಸೇರಿದ ನಂತರ 1986ರಲ್ಲಿ ದೇವಾಸ್ಥಾನವನ್ನು ಜೀರ್ಣೋದ್ಧಾರ ಮಾಡಲಾಯಿತು. ಡಾ.ರಾಜಕುಮಾರ್ ಸಹ ಈ ದೇವರಕೃಪೆಯಿಂದ ಜನಿಸಿದವರು. ಸ್ಥಳದ ಅಭಿವೃದ್ಧಿಗೆ ರಾಜ್ ಕುಟುಂಬದ ಕೊಡುಗೆಯೂ ಇದೆ. ಇಂತಹ ಪವಿತ್ರ ಸ್ಥಳ ಒಂದು ರೀತಿಯಲ್ಲಿ ಜಲ ಆವೃತ್ತಿ ಆಗಿ ಇತಿಹಾಸದ ಪುಟ ಸೇರುತ್ತದೆ ಎಂಬ ಆತಂಕ ಜನರದ್ದು.
ಮೇಕೆ ದಾಟುಡ್ಯಾಂ ನಿರ್ಮಾಣ ಮಾಡಿದರೆ ಹಲಗೂರಿನಿಂದ ಮುತ್ತತ್ತಿಗೆಹೋಗುವ ಮಾರ್ಗ ಮಧ್ಯೆ ಸಿಗುವ ಭೀಮೇಶ್ವರಿಯಲ್ಲಿರುವ ಕಾವೇರಿ ಅಡ್ವೆಂಚರ್ ಆಯಂಡ್ ನೇಚರ್ ಕ್ಯಾಂಪ್ (ಪ್ರಕೃತಿ ಮತ್ತು ಸಾಹಸ ಶಿಬಿರ) ಸಹ ಮುಳುಗಡೆಯಾಗುತ್ತದೆ.
1984ರಲ್ಲಿ ಕಾವೇರಿ ಫಿಷಿಂಗ್ ಕ್ಯಾಂಪ್ ಎಂಬ ಹೆಸರಿನಲ್ಲಿ ಪ್ರಾರಂಭವಾಗಿತ್ತು ನಂತರ ಸರ್ಕಾರದಆದೇಶ ನೀತಿ ನಿಯಮದ ಪ್ರಕಾರ ಈಗ ಕಾವೇರಿ ಅಡ್ವೆಂಚರ್ ಆಯಂಡ್ ನೇಚರ್ ಕ್ಯಾಂಪ್ ಹೆಸರಿನಲ್ಲಿ ನಡೆಯುತ್ತಿದೆ. ಕರ್ನಾಟಕದಲ್ಲಿ ಒಟ್ಟು 22 ಕ್ಯಾಂಪ್ ಗಳಿವೆ. ಕಬಿನಿ ಬಳಿ ಇರುವ ಕ್ಯಾಂಪ್ ಪ್ರಥಮ ಸ್ಥಾನದಲ್ಲಿದ್ದರೆ, ಬೆಂಗಳೂರಿನಿಂದ 100 ಕಿ.ಮೀ ಅಂತರದಲ್ಲಿ ಇರುವ ಭೀಮೇಶ್ವರಿಯ ಈ ಕ್ಯಾಂಪ್ ಕರ್ನಾಟಕದಲ್ಲೇ 2ನೇ ಸ್ಥಾನದಲ್ಲಿದೆ. (ಎನ್.ಬಿ)