ಪ್ರಮುಖ ಸುದ್ದಿ

ಭಕ್ತರಿಗೆ ಪ್ಯಾಕ್ ಮಾಡಿ ವಿತರಿಸುವ ಪ್ರಸಾದದ ಮೇಲೆ ಎಕ್ಸ್‌ಪೈರಿ ದಿನಾಂಕ ನಮೂದಿಸುವುದು ಕಡ್ಡಾಯ ಜಾರಿಗೆ ಮುಂದಾದ ಪ್ರಾಧಿಕಾರ

ರಾಜ್ಯ(ಬೆಂಗಳೂರು)ಡಿ.27:- ರಾಜ್ಯದ ದೇವಸ್ಥಾನಗಳಲ್ಲಿ ಭಕ್ತರಿಗೆ ಪ್ಯಾಕ್ ಮಾಡಿ ವಿತರಿಸುವ ಪ್ರಸಾದದ ಮೇಲೆ ಎಕ್ಸ್‌ಪೈರಿ ದಿನಾಂಕ ನಮೂದಿಸುವುದನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಆಹಾರ ಮತ್ತು ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಮುಂದಾಗಿದೆ.

ಚಾಮರಾಜ ನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಸುಳ್ವಾಡಿ ಗ್ರಾಮದ ಕಿಚ್ಚುಗತ್ತಿ ಮಾರಮ್ಮ ದೇವಾಲಯದಲ್ಲಿ ವಿಷ ಪ್ರಸಾದ ಸೇವನೆಯಿಂದ 17 ಜನ ಮೃತಪಟ್ಟ ಹಿನ್ನೆಲೆ ಇನ್ನು ಮುಂದೆ ದೇವಸ್ಥಾನಗಳಲ್ಲಿ ಪ್ಯಾಕ್ ಮಾಡಿ ಭಕ್ತರಿಗೆ ವಿತರಿಸುವ ಪ್ರಸಾದದ ಪ್ಯಾಕ್‌ಗಳ ಮೇಲೆ ಎಕ್ಸ್‌ಪೈರಿ ದಿನಾಂಕವನ್ನು ನಮೂದಿಸುವ ಸಂಬಂಧ ನಿಯಮ ಜಾರಿ ಮಾಡಲು ಪ್ರಾಧಿಕಾರ ಮುಂದಾಗಿದೆ.

ಪ್ರಸಾದದ ಪೊಟ್ಟಣಗಳ ಮೇಲೆ ದೇವಸ್ಥಾನದ ಹೆಸರು, ಪ್ರಸಾದ ತಯಾರಾದ ದಿನಾಂಕ, ತೂಕ ಹಾಗೂ ಪ್ರಸಾದಕ್ಕೆ ಬಳಸಿರುವ ಪದಾರ್ಥ, ಬ್ಯಾಚ್ ಸಂಖ್ಯೆ ಇತ್ಯಾದಿ ಮಾಹಿತಿಗಳನ್ನು ನಮೂದಿಸಬೇಕು. ಈ ಸಂಬಂಧ ಕೇಂದ್ರ ಆಹಾರ ಮತ್ತು ಸುರಕ್ಷತಾ ಗುಣಮಟ್ಟ ಪ್ರಾಧಿಕಾರದ ಪರವಾನಗಿಯನ್ನು ಕಡ್ಡಾಯಗೊಳಿಸಿ ಎಲ್ಲ ಜಿಲ್ಲಾಧಿಕಾರಿಗಳಿಗೂ ಸೂಚನಾಪತ್ರವನ್ನು ಈಗಾಗಲೇ ರವಾನಿಸಲಾಗಿದ್ದು, ಪ್ರಸಾದ ಹಾಗೂ ಅನ್ನದಾಸೋಹ ನಡೆಸುವ ಎಲ್ಲ ದೇವಾಲಯಗಳು ಅನುಮತಿಯನ್ನು ಪಡೆದುಕೊಳ್ಳಬೇಕಾಗಿದೆ.

ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಎಲ್ಲ ಆಹಾರ ಪದಾರ್ಥಗಳಿಗೆ ಉತ್ಪಾದನಾ ದಿನಾಂಕ, ಬಳಕೆ ಅವಧಿ ದಿನಾಂಕ ನಮೂದಿಸಿವುದನ್ನು ಕಡ್ಡಾಯಗೊಳಿಸಲಾಗಿದೆ. ಇದೇ ನಿಯಮವನ್ನು ಈ ಹಿಂದೆ ದೇವಾಲಯಗಳಿಗೂ ಅನ್ವಯಿಸಲಾಗಿತ್ತು. 2016ರಲ್ಲೇ ಈ ನಿಯಮವನ್ನು ಜಾರಿಗೆ ತರಲು ಪ್ರಯತ್ನಿಸಲಾಗಿತ್ತು. ಆದರೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಬಹುದೆನ್ನುವ ಉದ್ದೇಶಕ್ಕೆ ಈ ನಿಯಮವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದೀಗ ಸುಳ್ವಾಡಿ ಪ್ರಕರಣದ ನಂತರ ಆಹಾರ ಪ್ರಾಧಿಕಾರ ಎಚ್ಚೆತ್ತುಕೊಂಡು ಇಂತಹ ನಿಯಮ ಜಾರಿಗೆ ಮುಂದಾಗಿದೆ.

ಈಗಾಗಲೇ ಮುಜರಾಯಿ ಇಲಾಖೆ ತನ್ನ ವ್ಯಾಪ್ತಿಯ ಎಲ್ಲ ದೇವಾಲಯಗಳಿಗೆ ಪ್ರಸಾದ ವಿತರಣೆ ಸಂಬಂಧ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ 20 ಅಂಶಗಳುಳ್ಳ ಸುತ್ತೋಲೆ ಹೊರಡಿಸಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: