ಮೈಸೂರು

ವಿ.ವಿ.ಗಳು ಜ್ಞಾನ ಉತ್ಪಾದಿಸಿ ಪ್ರಸರಣ ಮಾಡಬೇಕು : ರವಿಕೃಷ್ಣಾ ರೆಡ್ಡಿ

ವಿಶ್ವವಿದ್ಯಾನಿಲಯಗಳು ಜ್ಞಾನವನ್ನು ಉತ್ಪಾದನೆ ಮಾಡಿ ಪ್ರಸರಣ ಮಾಡುವಂತಿರಬೇಕು ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ರಾಜ್ಯಾಧ್ಯಕ್ಷ ರವಿಕೃಷ್ಣ ರೆಡ್ಡಿ ತಿಳಿಸಿದರು.

ವಿಶ್ವವಿದ್ಯಾನಿಲಯ ಉಳಿಸಿ ಹೋರಾಟ ವೇದಿಕೆ, ದಲಿತ ವಿದ್ಯಾರ್ಥಿ ಒಕ್ಕೂಟ, ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ, ವಿಶ್ವಕರ್ಮ ಮಹಾಮಂಡಲ, ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ವೇದಿಕೆ ವತಿಯಿಂದ ಮೈಸೂರಿನ ಜೆ.ಎಲ್.ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಮಂಗಳವಾರ ನಡೆದ ವಿಶ್ವವಿದ್ಯಾನಿಲಯಗಳ ಇಂದಿನ ಸ್ಥಿತಿಗತಿ ಕುರಿತು ಒಂದು ಅವಲೋಕನದಲ್ಲಿ ಪಾಲ್ಗೊಂಡು ರವಿಕೃಷ್ಣ ರೆಡ್ಡಿ ಮಾತನಾಡಿದರು.

ಕರ್ನಾಟಕದಲ್ಲಿ ವಿಶ್ವವಿದ್ಯಾನಿಲಯಗಳ ಇಂದಿನ ಸ್ಥಿತಿಗತಿಗೆ ಮಾಜಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರೇ ಕಾರಣ. ಅವರು ಭ್ರಷ್ಟಾಚಾರ ನಡೆಸಿ ವಿಶ್ವವಿದ್ಯಾನಿಲಯವನ್ನು ಅಧಃಪತನಕ್ಕೆ ದೂಡಿದರು ಎಂದು ಆರೋಪಿಸಿದರು. ಇತ್ತೀಚಿನ ವಿಶ್ವವಿದ್ಯಾನಿಲಯಗಳು ಭ್ರಷ್ಟಾಚಾರ, ಚೋರವಿದ್ಯೆ, ಲೈಂಗಿಕ ಶೋಷಣೆ, ಅಧಿಕಾರ ದುರುಪಯೋಗ, ಸ್ವಜನಪಕ್ಷಪಾತ ಸೇರಿದಂತೆ ಅನೇಕ ಅನೈತಿಕ-ಭ್ರಷ್ಟ ಕೋರ್ಸ್’ಗಳಿಗೆ ಪ್ರಾಯೋಗಿಕ ಸರ್ಟಿಫಿಕೇಟ್ ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ನಿವೃತ್ತ ನ್ಯಾಯಮೂರ್ತಿ ಭಕ್ತವತ್ಸಲಂ ಅವರು ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು ವಿದ್ಯಾನಿಲಯಕ್ಕೆ ಸಂಬಂಧಿಸಿದಂತೆ 600 ಪುಟಗಳ ವರದಿ ಸಿದ್ಧಪಡಿಸಿದ್ದಾರೆ. ವಿಶ್ವವಿದ್ಯಾನಿಲಯಗಳು ಕುವೆಂಪು ಅವರ ಶಿಷ್ಯರಿಂದಲೇ ಅಧಃಪತನಕ್ಕೆ ಇಳಿಯುತ್ತಿರುವುದು ಶೋಚನೀಯ ಎಂದರು. ವಿಶ್ವವಿದ್ಯಾನಿಲಯಗಳು ಭ್ರಷ್ಟಾಚಾರಗಳಿಂದ ಕೂಡಿದೆ. ಅಧ್ಯಾಪಕರುಗಳು ನಿರ್ಲಜ್ಜರಾಗಿದ್ದಾರೆ. ಸ್ವತಃ ಉನ್ನತ ಶಿಕ್ಷಣ ಸಚಿವರೇ ಕುಲಪತಿಗಳನ್ನು ಡಕಾಯಿತರು ಎಂದು ಸಂಬೋಧಿಸಿದರೂ ಅವರ ವಿರುದ್ಧ ಯಾವ ಕುಲಪತಿಗಳೂ ಧ್ವನಿ ಎತ್ತಿಲ್ಲ. ಪ್ರತಿಭಟನೆ ಮಾಡಿಲ್ಲ ಎಂದರು.

ವಿಶ್ವವಿದ್ಯಾನಿಲಯಗಳ ಅಭಿವೃದ್ಧಿ ಎಂದರೆ ಕಟ್ಟಡ ಕಟ್ಟುವುದು ಎಂದು ತಿಳಿದುಕೊಂಡಿದ್ದಾರೆ. ನೈತಿಕ ಗುಣಮಟ್ಟದ ಶಿಕ್ಷಣ ನೀಡುವುದೇ ಅಭಿವೃದ್ಧಿ ಎಂದು ಯಾರೂ ತಿಳಿದುಕೊಂಡಿಲ್ಲ. ರಾಜ್ಯದ ಮುಖ್ಯ ನ್ಯಾಯಮೂರ್ತಿಗಳ ಮನೆಗೆ ಓರ್ವ ಹಣ ಕೊಂಡೊಯ್ದು ತಮ್ಮ ಪ್ರಕರಣವನ್ನು ಬಗೆಹರಿಸುವಂತೆ ಕೇಳಿಕೊಂಡಿದ್ದರೂ ಅವನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರೆ ಯಾವ ರೀತಿ ಭ್ರಷ್ಟತೆ ನಡೆಯುತ್ತಿದೆ ಎನ್ನುವುದನ್ನು ತಿಳಿಯಬಹುದು ಎಂದರು.

ಈ ಸಂದರ್ಭ ಮಾಹಿತಿ ಹಕ್ಕು ಕಾರ್ಯಕರ್ತ ಡಾ.ಎಸ್. ಶೇಖರ ಅಯ್ಯರ್, ಮಹೇಶ್ ಸೋಸಲೆ, ಪ್ರೊ.ಮಹೇಶ್ಚಂದ್ರಗುರು, ಕೆ.ಎಸ್.ಶಿವರಾಮು ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: