ಪ್ರಮುಖ ಸುದ್ದಿ

ವರ್ಷದ ನಂತರ ನಡೆದ ಉಸ್ತುವಾರಿ ಸಚಿವರ ಕೆಡಿಪಿ ಸಭೆ : ಶಾಸಕರ ಅಸಮಾಧಾನ

ರಾಜ್ಯ(ಮಡಿಕೇರಿ) ಡಿ.28 :-  ರಾಜ್ಯ ಪ್ರವಾಸೋದ್ಯಮ ಹಾಗೂ ರೇಷ್ಮೆ ಖಾತೆ ಸಚಿವರಾದ ಸಾ.ರಾ. ಮಹೇಶ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ನಿನ್ನೆ ಪ್ರಥಮ ಬಾರಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಬೆಳಿಗ್ಗೆ 11ಗಂಟೆಗೆ ಸಭೆ ನಿಗದಿಯಾಗಿತ್ತಾದರೂ, ಸಚಿವರು ತಮ್ಮ ಸ್ವಕ್ಷೇತ್ರದಿಂದ ಮಡಿಕೇರಿಗೆ ಆಗಮಿಸುವಾಗ 45 ನಿಮಿಷಗಳಷ್ಟು ತಡವಾಗಿತ್ತು. ಸಚಿವರು ಕೆಡಿಪಿ ಸಭೆ ನಡೆಸಲು ಸಭಾಂಗಣಕ್ಕೆ ಆಗಮಿಸುತ್ತಿದ್ದಂತೆ ಮೈಸೂರಿನ ವಿಜಯನಗರ 1ನೇ ಹಂತದ ‘ವಿಜಯನಗರ ಕ್ಷೇಮಾಭಿವೃದ್ಧಿ ಸಂಘ’ದವರು ಅಲ್ಲಿನ ಮನೆಮನೆಗೆ ತೆರಳಿ ಕೊಡಗಿನ ಸಂತ್ರಸ್ತರಿಗಾಗಿ ಸಂಗ್ರಹಿಸಿ ತಂದಿದ್ದ ಸುಮಾರು 4.25 ಲಕ್ಷ ರೂ.ಗಳ ಚೆಕ್‍ನ್ನು ಉಸ್ತುವಾರಿ ಸಚಿವರ ಮೂಲಕ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು.

ಈ ಸಂದರ್ಭ ಜಿಲ್ಲಾಧಿಕಾರಿ ಪಿ.ಐ ಶ್ರೀವಿದ್ಯಾ, ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿಪ್ರಿಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪನ್ನೇಕರ್ ಮತ್ತಿತರರು ಹಾಜರಿದ್ದರು ಚೆಕ್ ಸ್ವೀಕರಿಸಿದರು.

ಕೆಲವು ನಿಮಿಷಗಳ ಬಳಿಕ ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚುರಂಜನ್, ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಅವರುಗಳು ಸಭೆಗೆ ಆಗಮಿಸಿದರಾದರೂ, ಶಾಸಕರಿಗೆ ವೇದಿಕೆಯಲ್ಲಿ ಆಸನ ಕಲ್ಪಿಸದೆ ಕೆಳಗೆ ವ್ಯವಸ್ಥೆ ಮಾಡಿರುವುದು ಸಚಿವರ ಗಮನಕ್ಕೆ ಬಂದಿತು.

ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಶಾಸಕರಿಗೆ ವೇದಿಕೆಯಲ್ಲಿ ಆಸನ ವ್ಯವಸ್ಥೆ ಕಲ್ಪಿಸಿ ಅವರುಗಳನ್ನು ಆಹ್ವಾನಿಸಿದರಾದರೂ, ಅದಾಗಲೇ ಕೆಳಗೆ ಆಸೀನರಾಗಿದ್ದ ಶಾಸಕರು, ಅಲ್ಲಿಗಿಂತ ಇಲ್ಲಿಯೇ ವಾಸಿ. ಇಲ್ಲಾದರೆ ಸಚಿವರಿಗೆ ನೇರವಾಗಿ ಪ್ರಶ್ನೆ ಕೇಳಬಹುದು, ಅಲ್ಲಾದರೆ ಕತ್ತು ತಿರುಗಿಸಿ ಪ್ರಶ್ನಿಸಬೇಕಾಗುತ್ತದೆ ಎಂದು ಕೆ.ಜಿ.ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ತಾನು ಕೂಡಾ ತನ್ನ ಸ್ಥಾನವನ್ನು ಅಲ್ಲಿಗೇ ವರ್ಗಾಯಿಸಬೇಕಾಗುತ್ತದೆ ಎಂದು ಸಚಿವರು ತಿಳಿಸಿದರಾದರೂ, ಅದಕ್ಕೆ ಸೊಪ್ಪು ಹಾಕದ ಶಾಸಕರುಗಳು ಸಭೆ ಆರಂಭಿಸುವಂತೆ ಒತ್ತಾಯಿಸಿದರು.

ಬಳಿಕ ಸಚಿವರು ಸಭೆ ಆರಂಭಿಸುತ್ತಿದಂತೆ ಮಾತನಾಡಿದ ಶಾಸಕ ಬೋಪಯ್ಯ ಅವರು, 2017ರ ಸೆ.16ರಂದು ಕೆಡಿಪಿ ಸಭೆ ನಡೆದಿದ್ದು, ಅದಾದ ಬಳಿಕ ಇದುವರೆಗೆ ಒಂದೇ ಒಂದು ಸಭೆ ನಡೆದಿಲ್ಲ. ಆ ಸಭೆಯ ಅನುಪಾಲನಾ ವರದಿಯ ಮೇಲೆ ಚರ್ಚೆ ನಡೆಸುವುದಕ್ಕಿಂತ ಜಿಲ್ಲೆಯ ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚಿಸುವುದು ಸೂಕ್ತ ಎಂದು ಸಲಹೆ ನೀಡಿದರು.

ಆದಾದ ಬಳಿಕ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದವರಿಗೆ ಮನೆ ನಿರ್ಮಾಣದಲ್ಲಿ ಆಗುತ್ತಿರುವ ವಿಳಂಬ, ಪ್ರಕೃತಿ ವಿಕೋಪದ ಸಂದರ್ಭ ರೈತರ ಜಮೀನಿನಲ್ಲಿದ್ದ ಮರಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು, ಅದಕ್ಕೆ ಸಂಬಂಧಿಸಿದಂತೆ ರೈತರಿಗೆ ಅರಣ್ಯ ಇಲಾಖೆಯಿಂದಾಗುತ್ತಿರುವ ಕಿರುಕುಳ ಮುಂತಾದ ವಿಷಯಗಳ ಬಗ್ಗೆ ಶಾಸಕರಾದ ಬೋಪಯ್ಯ, ಅಪ್ಪಚ್ಚುರಂಜನ್, ವೀಣಾ ಅಚ್ಚಯ್ಯ ಮತ್ತಿತರರು ಗಮನಸೆಳೆದರು.

‘ಸ್ಮಶಾನಕ್ಕೆ ಹೋದ ಶವ ಹಾಗೂ ಅರಣ್ಯ ಇಲಾಖೆ ಸಲ್ಲಿಸುವ ಅರ್ಜಿ ಎರಡೂ ಒಂದೇ’ ಎಂದು ವ್ಯಂಗವಾಡುವ ಮೂಲಕ  ಇಲಾಖೆಯ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ಹೊರಗೆಡವಿದ ಪ್ರಸಂಗವೂ ನಡೆಯಿತು. ಸಭೆಗೆ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಜರಾಗದಿರುವ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಸಚಿವರು, ಅವರನ್ನು ಕೂಡಲೇ ಸಭೆಗೆ ಆಗಮಿಸುವಂತೆ ಸೂಚಿಸಲು ಸಭಾ ಕಾರ್ಯದರ್ಶಿ ಹಾಗೂ ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ನಿರ್ದೇಶನ ನೀಡಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: