ದೇಶಪ್ರಮುಖ ಸುದ್ದಿ

ಬಿ.ಎಸ್.ಎಫ್ ಯೋಧ ಯಾದವ್ ಬಿಡುಗಡೆ ಮಾಡಿರುವ ವಿಡಿಯೊ ಹಿಂದೆ ಬೇರೆ ಉದ್ದೇಶವಿದೆ: ಐ.ಜಿ

ನವದೆಹಲಿ: ಬಿ.ಎಸ್.ಎಫ್ ಯೋಧ ಯಾದವ್ ಅವರು ತಮಗೆ ನೀಡುತ್ತಿರುವ ಕಳಪೆ ಆಹಾರದ ಬಗ್ಗೆ ವಿಡಿಯೋ ಬಿಡುಗಡೆ ಮಾಡಿದ ವಿಷಯದ ಬಗ್ಗೆ ಮಾತನಾಡಿದ ಐ.ಜಿ ಡಿ.ಕೆ ಉಪಾಧ್ಯಾಯ್, ಪ್ರಕರಣದ ನ್ಯಾಯಯುತ ತನಿಖೆಯ ನಿಟ್ಟಿನಲ್ಲಿ ಯಾದವ್ ಅವರನ್ನು ಬೇರೆಡೆ ವರ್ಗಾವಣೆ ಮಾಡಲಾಗಿದೆ. ಅವರ ಮೇಲೆ ಯಾವುದೇ ಒತ್ತಡ ಬೀಳಬಾರದು ಮತ್ತು ತನಿಖೆಗೆ ಅನುಕೂಲವಾಗಲಿ ಎಂದು ಅವರನ್ನು ಸ್ಥಳಾಂತರಿಸಲು ನಿಶ್ಚಯಿಸಲಾಗಿದೆ ಎಂದು ಮಂಗಳವಾರ ಹೇಳಿದ್ದಾರೆ.

ಯಾದವ್ ಅವರ ಹಿಂದಿನ ದಾಖಲೆಗಳನ್ನು ಪರಿಶೀಲಿಸಿದಾಗ ಈ ವಿಡಿಯೋ ಹಿಂದೆ ಇರುವ ಉದ್ದೇಶದ ಬಗ್ಗೆ ಸಂಶಯವಿದೆ. ಯಾದವ್ ತೋರಿದ್ದ ಅಶಿಸ್ತಿಗೆ 2010ರಲ್ಲಿ ಅವವರಿಗೆ ಶಿಕ್ಷೆಯಾಗುವುದರಲ್ಲಿತ್ತು. ಆದರೆ, ಅವರ ಕುಟುಂಬವನ್ನು ಗಣನೆಗೆ ತೆಗೆದುಕೊಂಡು ಅಮಾನತು ರದ್ದು ಮಾಡಲಾಗಿತ್ತು ಎಂದು ಉಪಾಧ್ಯಾಯ್ ತಿಳಿಸಿದ್ದಾರೆ.

ಸೇನಾ ಕ್ಯಾಂಪ್’ಗಳಿಗೆ ಡಿ.ಐ.ಜಿ ಮಟ್ಟದ ಅಧಿಕಾರಿಗಳು ಹಲವು ಬಾರಿ ಭೇಟಿ ನೀಡಿದ್ದು ವಿಡಿಯೋದಲ್ಲಿ ಯಾದವ್ ಮಾಡಿರುವ ಆರೋಪಗಳನ್ನು ಬೇರಾರು ಮಾಡಿಲ್ಲ. ಯಾದವ್ ಅವರ 20 ವರ್ಷದ ಸೇವೆಯ ಅವಧಿಯಲ್ಲಿ ನಾಲ್ಕು ಬಾರಿ ಅಶಿಸ್ತು ತೋರಿದ್ದಾರೆ. ಹಾಗಾಗಿ ಅವರಿಗೆ ಬಡ್ತಿ ನೀಡಿರಲಿಲ್ಲ. ಆ ಆಕ್ರೋಶದಲ್ಲಿ ಅವರು ಈ ವಿಡಿಯೊ ಮಾಡಿರಬಹುದು ಎಂದು ಐ.ಜಿ ಅಭಿಪ್ರಾಯಪಟ್ಟಿದ್ದಾರೆ.

ಜಮ್ಮು ಕಾಶ್ಮೀರದ ಬಿ.ಎಸ್.ಎಫ್ 29ನೇ ಬೆಟಾಲಿಯನ್’ನ ಕಾನ್ಸ್ಟೇಬಲ್ ತೇಜ್ ಬಹದ್ದೂರ್ ಯಾದವ್ ಭಾನುವಾರದಂದು ಯೋಧರಿಗೆ ನೀಡಲಾಗುವ ಆಹಾರದ ಬಗ್ಗೆ ನಾಲ್ಕು ವಿಡಿಯೋಗಳನ್ನು ಪೋಸ್ಟ್ ಮಾಡಿದ್ದರು. ಇದರಲ್ಲಿ ಬೆಳಗಿನ ತಿಂಡಿಗೆ ಒಂದು ಸೀದು ಹೋಗಿರುವ ಪರೋಟ ಮತ್ತು ಟಿ ಅಷ್ಟೇ ನೀಡಲಾಗುತ್ತದೆ. ಪರೋಟದ ಜೊತೆ ಉಪ್ಪಿನಕಾಯಿ, ಜಾಮ್ ಅಥವಾ ಬೆಣ್ಣೆ ಏನನ್ನೂ ನೀಡಲ್ಲ. ಮಧ್ಯಾಹ್ನ ರೊಟ್ಟಿಯ ಜೊತೆ ನೀಡಲಾಗುವ ದಾಲ್ ನಲ್ಲಿ ಅರಶಿನ ಮತ್ತು ಉಪ್ಪು ಬಿಟ್ಟರೆ ಏನೂ ಇರಲ್ಲ. ಭಾರತೀಯ ಸರಕಾರ ಯೋಧರಿಗೆ ಎಲ್ಲ ಸೌಲಭ್ಯಗಳನ್ನು ನೀಡುತ್ತಿದೆ. ಆದರೆ, ಹಿರಿಯ ಅಧಿಕಾರಿಗಳ ಭ್ರಷ್ಟಾಚಾರದಿಂದ ನಮಗೆ ಸಮರ್ಪಕ ಊಟ ಸಿಗುತ್ತಿಲ್ಲ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಗಮನಹರಿಸಿ ನಮ್ಮ ಸಮಸ್ಯೆಯನ್ನು ಬಗೆಹರಿಸಬೇಕೆಂದು ವಿಡಿಯೋ ಮೂಲಕ ಮನವಿ ಮಾಡಿದ್ದರು.

Leave a Reply

comments

Related Articles

error: