ಮೈಸೂರು

ವಿಜ್ಞಾನಕ್ಕೆ ಸಂಸ್ಕೃತದ ಕೊಡುಗೆ ಅಪಾರ : ಡಾ. ಡಿ. ಶೀಲಾ ಕುಮಾರಿ

ಮೈಸೂರು,ಡಿ.28:- “ಸಂಸ್ಕೃತ ಭಾಷೆಯು ಬಹಳ ಪ್ರಾಚೀನವಾದದ್ದು. ಪ್ರಪಂಚದಾದ್ಯಂತ ಉಪಯೋಗಿಸುತ್ತಿರುವ ಭಾಷೆಗಳಲ್ಲಿ ಸಂಸ್ಕೃತ ಭಾಷೆಯು ಒಂದಾಗಿದ್ದು, ಕ್ರಿಸ್ತಪೂರ್ವದಿಂದಲೂ ತನ್ನ ಸ್ಥಾನ ಮಾನ ಉಳಿಸಿಕೊಂಡು ಬಂದಿದೆ” ಎಂದು ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕರಾದ ಡಾ. ಡಿ. ಶೀಲಾಕುಮಾರಿ ಹೇಳಿದರು.

ಮೈಸೂರಿನ ಬಿ.ಎನ್. ರಸ್ತೆಯಲ್ಲಿರುವ ಜೆಎಸ್‍ಎಸ್ ಕಲಾ,  ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಇತ್ತೀಚೆಗೆ  ಸಂಸ್ಕೃತ ವಿಭಾಗದ ವತಿಯಿಂದ ಆಯೋಜಿಸಿದ್ದ ಸಂಸ್ಕೃತೋತ್ಸವ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ  ಅವರು ‘ಸಂಸ್ಕೃತದಲ್ಲಿ ವಿಜ್ಞಾನ’ ಎಂಬ ವಿಷಯ ಕುರಿತು ಮಾತನಾಡಿದರು. “ವಿಜ್ಞಾನ ಎಂದರೆ ವಿಶೇಷ-ಜ್ಞಾನ. ವಿಜ್ಞಾನವು ವೇದಗಳ ಕಾಲದಿಂದಲೂ ಬಳಕೆಯಲ್ಲಿದೆ. ಪಾಣಿನಿಯ ವ್ಯಾಕರಣ ಸೂತ್ರಗಳು ಹೇಗೆ ಉಲ್ಲೇಖ ವಾಗಿದೆಯೋ ಹಾಗೆ ಯಥಾವತ್ತಾಗಿ ಇಂದಿಗೂ ಬಳಕೆಯಲ್ಲಿವೆ. ತರ್ಕಶಾಸ್ತ್ರದ ಪಿತಾಮಹನಾದ ಕಣಾದ ಮಹರ್ಷಿ ವ್ಯಾಕರಣ ಹಾಗೂ ತರ್ಕಶಾಸ್ತ್ರವು ಎಲ್ಲಾ ಶಾಸ್ತ್ರಗಳಿಗೂ ಉಪಕಾರಕಗಳಾಗಿವೆ ಎಂದು ಹೇಳಿದ್ದಾನೆ. ಋಗ್ವೇದದಲ್ಲಿ ನಮ್ಮ ಪ್ರಾಚೀನರು ಸೌರಮಂಡದಲ್ಲಿರುವ  ಗ್ರಹಗಳ ಉಲ್ಲೇಖ, ಭೂಮಿಯ ಗುರುತ್ವಾಕರ್ಷಣಬಲ ಇತ್ಯಾದಿಗಳ ಬಗ್ಗೆ ನಿಖರವಾಗಿ ತಿಳಿಸಿದ್ದಾರೆ. ನಮ್ಮ ಪ್ರಾಚೀನರು ಸಸ್ಯ ಹಾಗೂ  ಪ್ರಾಣಿಗಳನ್ನು ಅವುಗಳ ಗುಣವನ್ನಾವಲಂಬಿಸಿ ವರ್ಗೀಕರಣ ಮಾಡಿ ಅದಕ್ಕಾಗಿಯೇ ಅಶ್ವಶಾಸ್ತ್ರ, ಗಜಶಾಸ್ತ್ರ, ವೃಕ್ಷಾಯುರ್ವೇದಃ ಎಂಬ ಗ್ರಂಥವನ್ನು ರಚಿಸಿದ್ದಾರೆ. ಇವುಗಳೆಲ್ಲವು ಸಂಸ್ಕೃತ  ಭಾಷೆಯಲ್ಲಿದ್ದು, ವಿಜ್ಞಾನಕ್ಕೆ ಕೊಡುಗೆಯಾಗಿವೆ” ಎಂದು ತಿಳಿಸಿದರು.

ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಸ್. ಸೋಮಶೇಖರ್ ಮಾತನಾಡಿ “ಸಂಸ್ಕೃತ ಎಂದರೆ ವಿಜ್ಞಾನ. ಸಂಸ್ಕೃತ ಭಾಷೆಯಲ್ಲಿ ಎಲ್ಲ ವಿಷಯಗಳು ಅಡಕವಾಗಿವೆ. ಕುರುಕ್ಷೇತ್ರದಲ್ಲಿ  ನಡೆಯುತ್ತಿದ್ದ ಎಲ್ಲ ಸಂಗತಿಗಳನ್ನು ಸಂಜಯನು ತನ್ನ ದೂರದೃಷ್ಟಿಯ ಮೂಲಕ ರಾಜನಾದ  ಧೃತರಾಷ್ಟ್ರನಿಗೆ ವಿವರಿಸುತ್ತಿದ್ದನು. ಪ್ರಾಚೀನ ಕಾಲದಲ್ಲಿ ಭಾಸ್ಕರಾಚಾರ್ಯರು ತನ್ನ ಮಗಳಾದ ಲೀಲಾವತಿಯ ಹೆಸರನ್ನು ಲೀಲಾವತಿ ಗಣಿತ ಎಂಬ ಗ್ರಂಥವನ್ನು ರಚಿಸಿ, ಅದರಲ್ಲಿರುವ ಜೋತಿಷ್ಯದ ಮಹತ್ವವನ್ನು  ತಿಳಿಸಿದರು” ಎಂದು ಹೇಳಿದರು.

ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಂ. ಮಹದೇವಪ್ಪ ಮಾತನಾಡಿ “ಸಂಸ್ಕೃತ ಭಾಷೆಯು ವ್ಯವಹಾರಿಕ ಭಾಷೆಯಾಗಿ ಬಳಕೆಯಾಗಬೇಕು. ಅದರ ಮಹತ್ವವನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಸಂಸ್ಕೃತ ಮತ್ತು ಸಂಸ್ಕೃತಿ ಒಂದು ನಾಣ್ಯದ ಎರಡು ಮುಖಗಳಿದ್ದಂತೆ, ವಿದ್ಯಾರ್ಥಿಗಳು ಸಂಸ್ಕೃತಾಧ್ಯಯನಕ್ಕೆ ಒತ್ತು ಕೊಟ್ಟು, ನಿತ್ಯೋಪಯೋಗಿ ಭಾಷೆಯನ್ನಾಗಿ ಬಳಸಬೇಕು” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಪ್ರೊ. ಎಂ.ವಿಶ್ವನಾಥ್ ಸ್ವಾಗತ ಕೋರಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾದ ಕಾವ್ಯ ವಂದಿಸಿದರು. ಗುರುಕುಲದ ಸಾಧಕರು ಮತ್ತು ಪಿಯುಸಿ ವಿದ್ಯಾರ್ಥಿಗಳು ವೇದಘೋಷ ಮಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು  ಸಂಸ್ಕೃತ ವಿಭಾಗದ ಉಪನ್ಯಾಸಕಿ ಡಾ. ಎಂ.ಎಸ್. ಕೋಮಲ ನಡೆಸಿಕೊಟ್ಟರು. ಮಾತೃಗೀತೆಯೊಂದಿಗೆ ಸಮಾರಂಭವು  ಮುಕ್ತಾಯವಾಯಿತು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: