ಪ್ರಮುಖ ಸುದ್ದಿ

ಶಾಲಾ ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ ಖಾಸಗಿ ಬಸ್ ಪಲ್ಟಿ : ಓರ್ವ ವಿದ್ಯಾರ್ಥಿ ಸಾವು ; ಹಲವರು ಗಂಭೀರ

7 ತಿಂಗಳ ಹಸುಗೂಸು ಪಾರು

ರಾಜ್ಯ(ಮಡಿಕೇರಿ)ಡಿ.29:- ಶಾಲಾ ಶೈಕ್ಷಣಿಕ ಪ್ರವಾಸಕ್ಕೆಂದು ಬಂದಿದ್ದ ಖಾಸಗಿ ಬಸ್ ರಸ್ತೆ ಬದಿಗೆ ಪಲ್ಟಿ ಹೊಡೆದ ಪರಿಣಾಮ ಓರ್ವ ವಿದ್ಯಾರ್ಥಿ ಸಾವನ್ನಪ್ಪಿ, ಚಾಲಕ ಹಾಗೂ ಅಡುಗೆ ಸಹಾಯಕ ಮತ್ತು  ನಾಲ್ವರು  ಗಾಯಕ್ಕೊಳಗಾಗಿರುವ ಘಟನೆ ಇಂದು ಮುಂಜಾನೆ ಸುಂಟಿಕೊಪ್ಪ ಸಮೀಪದ ರಾಷ್ಟ್ರೀಯ ಹೆದ್ದಾರಿ ಬದಿಯ ಶಾಂತಗೇರಿ ತೋಟದ ಗೇಟ್ ಮುಂಭಾಗದಲ್ಲಿ ನಡೆದಿದೆ.

ಬಳ್ಳಾರಿ ಜಿಲ್ಲೆ ಕುರುಗೋಡು ತಾಲೂಕು ಗೆಣಿಕೆಹಾಳ್ ಸರಕಾರಿ ಪ್ರೌಢಶಾಲೆಯ ಮಕ್ಕಳು ಶಿಕ್ಷಕರೊಂದಿಗೆ  ಡಿ. 25ರಿಂದ ಶೈಕ್ಷಣಿಕ ಪ್ರವಾಸಕ್ಕೆಂದು KA 22B 5731.   ಬಸ್ ನಲ್ಲಿ ಹೊರಟಿದ್ದರು.  48 ಮಂದಿ (27 ಬಾಲಕರು ಮತ್ತು 21 ಬಾಲಕಿಯರು) ಸೇರಿದಂತೆ 6 ಮಂದಿ ಶಿಕ್ಷಕರು, ಒಬ್ಬ ಡಿಗ್ರೂಪ್ ನೌಕರ, ಇಬ್ಬರು ಚಾಲಕರು ಮತ್ತು ಓರ್ವ ಕ್ಲೀನರ್ ಸೇರಿದಂತೆ ಒಟ್ಟು 58 ಮಂದಿ ಬಸ್ ನಲ್ಲಿದ್ದರು.  ನಿನ್ನೆ  ರಾತ್ರಿ ಸುಮಾರು 11.30 ರ ಸಮಯದಲ್ಲಿ ಮೈಸೂರಿನ ಕೆ.ಆರ್.ಎಸ್. ವೀಕ್ಷಣೆ ಮುಗಿಸಿ ಮಡಿಕೇರಿಯತ್ತ ಬಸ್ ಹೊರಟಿದೆ.  ಚಾಲಕನ ಹೊರತು ಪಡಿಸಿ ಇನ್ನುಳಿದವರು ನಿದ್ದೆಗೆ ಜಾರಿದ್ದಾರೆ.  ಇನ್ನೇನು ಬಸ್ ಸುಂಟಿಕೊಪ್ಪ ತಲುಪಬೇಕೆನ್ನುವಷ್ಟರಲ್ಲಿ ಚಾಲಕನ ಹತೋಟಿ ತಪ್ಪಿದ ಬಸ್ ರಾಷ್ಟ್ರೀಯ ಹೆದ್ದಾರಿ ಬದಿಯಿರುವ ಶಾಂತಗೇರಿ ತೋಟದ ಗೇಟ್ ನ ಬಳಿ ರಸ್ತೆ ಬದಿಗೆ ಮಗುಚಿಕೊಂಡಿದೆ.  ಇದರಿಂದ ತೀವ್ರಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ 10ನೇ ತರಗತಿ ವಿದ್ಯಾರ್ಥಿ ಗೆಣಿಕೆಹಾಳ್ ಗ್ರಾಮದ ದ್ಯಾವಣ್ಣ ಎಂಬವರ ಪುತ್ರ ಎನ್.ಯು. ಬಸವರಾಜ್ (16) ನನ್ನು ಆ್ಯಂಬುಲೆನ್ಸ್ ನಲ್ಲಿ ಮಡಿಕೇರಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾನೆ.  ಇದೇ ತರಗತಿಯ ಎಂ. ಮಂಜುನಾಥ, ಕೆ. ರಾಜ, ಮಹಮ್ಮದ್ ಫಯಾಜ್  ಎಂಬವರಿಗೆ ತೀವ್ರ ಗಾಯವಾಗಿದ್ದು ಮಡಿಕೇರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.  ಹೆಚ್. ವೀರೇಶ್ ಎಂಬಾತನ  ಕಾಲಿಗೆ ಗಾಯವಾಗಿದ್ದು ಇವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.  ಬಸ್ ಚಲಾಯಿಸುತ್ತಿದ್ದ ಜಾನ್ಸನ್ ಅಲಿಯಾಸ್ ಚಿಂಟು ಮತ್ತು ಅಡುಗೆ ಸಹಾಯಕ ಸಿದ್ದಲಿಂಗ ಇವರುಗಳ ಸ್ಥಿತಿ ಚಿಂತಾಜನಕವಾಗಿದ್ದು ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.  ಅಪಘಾತದ ಸುದ್ಧಿ ತಿಳಿಯುತ್ತಿದ್ದಂತೆಯೇ ಸಬ್ ಇನ್ಸಪೆಕ್ಟರ್ ಜಯರಾಮ್ ಮತ್ತು ನೈಟ್ ಬೀಟ್ ಪೊಲೀಸರು ಸ್ಥಳಕ್ಕೆ ಧಾವಿಸಿ ಬಂದು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಮತ್ತು ಕ್ರೇನ್ ನಿಂದ ಬಸ್ ನ್ನು ಮೇಲಕ್ಕೆತ್ತಿ ತುರ್ತು ಕ್ರಮಕೈಗೊಂಡರಲ್ಲದೇ ಶ್ರೀರಾಮ ಮಂದಿರದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಇನ್ನಿತರರಿಗೆ ವಾಸ್ತವ್ಯದ ವ್ಯವಸ್ಥೆಯನ್ನು ಕಲ್ಪಿಸಿಕೊಡುವಲ್ಲಿ ನೆರವಾದರು.

ಅವಘಡದಿಂದ  7 ತಿಂಗಳ ಹಸುಗೂಸು ಪಾರು

ಇದೇ ಬಸ್ ನಲ್ಲಿ ಶಿಕ್ಷಕ ಉಮೇಶ್ ಹಾಗೂ ಅವರ ಪತ್ನಿ ಸುಮಲತಾ ಎಂಬವವರಿದ್ದು, ಜೊತೆಗೆ 7 ತಿಂಗಳ ಹೆಣ್ಣು ಮಗುವನ್ನು ಕರೆದುಕೊಂಡು ಬಂದಿದ್ದಾರೆ.  ಬಸ್ಸಿನ 3ನೇ ಸೀಟ್ ನಲ್ಲಿ ತಾಯಿಯ ಮಡಿಲಿನಲ್ಲಿ ಬೆಚ್ಚಗೆ ಮಲಗಿದ್ದ ಧನ್ಯಶ್ರೀ ಎಂಬ ಹಸುಗೂಸು ಅದೃಷ್ಟವಶಾತ್ ಯಾವುದೇ ಗಾಯಕ್ಕೊಳಗಾಗದೇ ಸುರಕ್ಷಿತವಾಗಿದೆ.  ಬಸ್ ಚಾಲಕ ಜಾನ್ಸನ್ ಅಲಿಯಾಸ್ ಚಿಂಟು ಕೆ.ಆರ್.ಎಸ್. ನಿಂದ ಹೊರಡುವಾಗಲೇ ಮದ್ಯಪಾನ ಮಾಡಿದ್ದು  ಚಾಲನೆ ಸಂದರ್ಭದಲ್ಲಿ ನಿದ್ದೆಗೆ ಜಾರಿದ್ದರಿಂದ ಅಪಘಾತ ಸಂಭವಿಸಿರಬಹುದೆಂದು ಕೆಲಮಂದಿ ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ.  ವಿಷಯವರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್, ಡಿವೈಎಸ್ಪಿ ಮುರುಳೀಧರ್ ಅವರು ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮಕೈಗೊಂಡಿದ್ದಾರೆ. ವೃತ್ತ ನಿರೀಕ್ಷಕ ಕ್ಯಾತೇಗೌಡ ಅವರು ವಿದ್ಯಾರ್ಥಿಗಳು ತಂಗಿರುವ ಶ್ರೀರಾಮ ಮಂದಿರಕ್ಕೆ ಭೀಟಿ ನೀಡಿ ಪರಿಶೀಲನೆ ನಡೆಸಿದರು.

(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: